ರಾಜ್ಯದಲ್ಲಿ ಲೋಕಸಭಾ ಸಮರದ ಲೆಕ್ಕಾಚಾರ ಶುರುವಾಗಿದೆ. ವಿಧಾನಸಭೆ ಚುನಾವಣೆ ಮಾದರಿಯಲ್ಲೇ ‘ಕೈ’ ಪಡೆ ತಯಾರಿ ನಡೆಸುತ್ತಿದ್ದು ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಬೆನ್ನುಬಿದ್ದಿದ್ದಾರೆ. ರಾಜ್ಯದಲ್ಲಿ ಟಾರ್ಗೆಟ್ 20 ಸ್ಥಾನ ಎಂದು ಗುರಿ ಹೊಂದಿರುವ ಕಾಂಗ್ರೆಸ್ ನಾಯಕರು ನೀಲನಕ್ಷೆ ಸಿದ್ಧ ಮಾಡುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 20 ಸ್ಥಾನ ಗೆಲ್ಲಲು ಬೇಕಾದ ತಯಾರಿ ನಡೆಸಿದ್ದಾರೆ. ಜಾತಿ, ವೈಯಕ್ತಿಕ ವರ್ಚಸ್ಸು, ಸ್ಥಳೀಯವಾಗಿ ಹೊಂದಿರುವ ಪ್ರಭಾವದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು ಆಗಿದೆ. ಆದರೆ ಈ ನಡುವೆ ಗಾಂಧಿ ಕುಟುಂಬದ ಕುಡಿ ಕರುನಾಡಿಗೆ ಬರುತ್ತಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.

ಸಾರಥಿ ಇಲ್ಲದ ಬಿಜೆಪಿ ಕೊಚ್ಚಿ ಹೋಗುವ ಭೀತಿ..!
ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾಗಿ 3 ತಿಂಗಳು ಕಳೆದರೂ ಬಿಜೆಪಿಯಿಂದ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಇನ್ನು ನಳೀನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಲ್ಲಿದ್ದರೂ ಗಟ್ಟಿಮುಟ್ಟಾದ ನಾಯಕನ ಸಾರಥ್ಯವಿಲ್ಲದೆ ಬಿಜೆಪಿ ರಾಜ್ಯದಲ್ಲಿ ಸೊರಗಿದೆ. ಹೀಗಿರುವಾಗ ರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ಹೊಂದಿರುವ ಪ್ರಿಯಾಂಕಾ ವಾದ್ರಾ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಹರಿದು ಬಂದಿದೆ. ಒಂದು ವೇಳೆ ಪ್ರಿಯಾಂಕಾ ವಾದ್ರಾ ಕರ್ನಾಟಕದಿಂದ ಸ್ಪರ್ಧೆ ಮಾಡಿದರೆ ಮತ್ತಷ್ಟು ಉತ್ಸಾಹದಲ್ಲಿ ಕಾಂಗ್ರೆಸ್ ತೇಲುವ ಸಾಧ್ಯತೆಯಿದೆ.

ಕ್ಷೇತ್ರ ಬಿಟ್ಟು ಕೊಡುತ್ತಿದ್ದಾರಂತೆ ಡಿ.ಕೆ ಸುರೇಶ್..!
ಕಳೆದ ಕೆಲವು ತಿಂಗಳ ಹಿಂದೆ ಡಿ.ಕೆ ಸುರೇಶ್ ಕ್ಷೇತ್ರ ತ್ಯಾಗದ ಸುಳಿವು ನೀಡಿದ್ದರು. ನಾನು ಮುಂದಿನ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಅನುಮಾನವಿದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೋ..? ಇಲ್ಲವೋ ಎನ್ನುವುದು ಕೂಡ ನನಗೆ ಖಚಿತವಿಲ್ಲ. ನನಗೆ ರಾಜಕೀಯ ಸಾಕಾಗಿದೆ. ನಾನು ಜನರ ಸೇವೆ ಮಾಡಬೇಕು ಅನ್ನೋದಷ್ಟೇ ನನ್ನ ಮನಸ್ಸಿನಲ್ಲಿರುವ ಭಾವನೆ ಎಂದಿದ್ದರು. ಆದರೆ ಇದೀಗ ಗಾಂಧಿ ಕುಟುಂಬದ ಕುಡಿ, ಪ್ರಿಯಾಂಕಾ ಗಾಂಧಿಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಬೆಂಗಳೂರು ಉತ್ತರದ ಕಡೆಗೆ ಪ್ರಯಾಣ ಮಾಡುತ್ತಾರೆ ಎನ್ನುವ ಮಾಹಿತಿ ಕೂಡ ಕಾಂಗ್ರೆಸ್ ಪಕ್ಷದಲ್ಲೇ ನಡೆಯುತ್ತಿರುವ ಚರ್ಚೆ ಆಗಿದೆ.

ಗೆಲ್ಲುವ ಅಭ್ಯರ್ಥಿಗಳಿಗಾಗಿ ಶುರುವಾಗಿದೆ ತಲಾಶ್..!
ಕಾಂಗ್ರೆಸ್ ಪಕ್ಷ ಈ ಬಾರಿ ಕರ್ನಾಟಕದಿಂದಲೇ 20 ಸ್ಥಾನ ಗೆಲ್ಲಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೌಂಟರ್ ಕೊಡುವ ಉಮೇಧಿನಲ್ಲಿದೆ. ಅದಕ್ಕಾಗಿಯೇ ಗೆಲ್ಲುವ ಅಭ್ಯರ್ಥಿಗಳಿಗಾಗಿ ತಲಾಶ್ ನಡೆದಿದ್ದು, ಬಿಜೆಪಿ ಭದ್ರಕೋಟೆ ಎನಿಸಿಕೊಂಡ ಕ್ಷೇತ್ರಗಳಲ್ಲಿ ಮತ ವಿಭಜನೆ ಮಾಡುವ ಸೂತ್ರ ಹೆಣೆಯುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಗೆಲ್ಲುವ ಅವಕಾಶ ಇರುವ ಕ್ಷೇತ್ರಗಳಲ್ಲೂ ಬೇರೆ ಬೇರೆ ಪಕ್ಷದ ನಾಯಕರನ್ನು ಸೆಳೆದು ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ಕಾಂಗ್ರೆಸ್ ಆಪರೇಷನ್ ಅಸ್ತ್ರ ಪ್ರಯೋಗ ಮಾಡುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರೂ ಬಾರದಂತೆ ಕಾಂಗ್ರೆಸ್ ಪಕ್ಷವನ್ನು ಸೇರುವ ಯಾವುದೇ ಪಕ್ಷದ ನಾಯಕರನ್ನು ಸೆಳೆಯಲು ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಒಟ್ಟಾರೆ, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ವಾದ್ರಾ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್ ಪಾಲಿಗೆ ಬೂಸ್ಟ್ ಎನ್ನಬಹುದು.
ಕೃಷ್ಣಮಣಿ






