ಹಿಮಾಚಲ ಪ್ರದೇಶ ರಾಜ್ಯದಲ್ಲಿ ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು ಮಳೆಯಿಂದ ಭೂಕುಸಿತ, ಪ್ರವಾಹ ಮೊದಲಾದ ಅವಘಡದಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
ಭಾನುವಾರದಿಂದ ಶಿಮ್ಲಾದಲ್ಲಿ ಮಳೆಯಿಂದ ಕೃಷ್ಣ ನಗರ ಮತ್ತು ಫಾಗಿಲ್ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ 12ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಶಿಮ್ಲಾದಲ್ಲಿ ಭೂಕುಸಿತದಿಂದ ಅವಶೇಷಗಳ ಅಡಿಯಿಂದ ಮಹಿಳೆಯೊಬ್ಬರ ಮೃತದೇಹವನ್ನು ಬುಧವಾರ (ಆಗಸ್ಟ್ 16) ಹೊರೆತೆಗೆಯಲಾಗಿದೆ. ಈ ಮೂಲಕ ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರದಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿಮ್ಲಾದ ಸಮ್ಮರ್ ಹಿಲ್, ಕೃಷ್ಣನಗರ ಹಾಗೂ ಫಾಗಿಲ್ನಲ್ಲಿ ಸೋಮವಾರ ಭೂಕುಸಿತ ಉಂಟಾಗಿದೆ.
ಹಿಮಾಚಲ ಪ್ರದೇಶ ಸಮ್ಮರ್ ಹಿಲ್ ಹಾಗೂ ಕೃಷ್ಣನಗರ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಮ್ಮರ್ ಹಿಲ್ನಲ್ಲಿ ಒಂದು ದೇಹವನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆದಿತ್ಯ ನೇಗಿ ಮಾಹಿತಿ ನೀಡಿದ್ದಾರೆ.
ಈವರೆಗೆ ಸಮ್ಮರ್ ಹಿಲ್‌ನಲ್ಲಿ 13, ಫಾಗಿಲ್‌ನಲ್ಲಿ 5 ಹಾಗೂ ಕೃಷ್ಣ ನಗರದಲ್ಲಿ 2 ದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಕುಸಿದ ಶಿವ ದೇಗುಲದ ಅವಶೇಷಗಳ ಅಡಿಯಲ್ಲಿ ಇನ್ನೂ 10 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.
ಕೃಷ್ಣನಗರದಲ್ಲಿ 15 ಮನೆಗಳನ್ನು ತೆರವು ಮಾಡಲಾಗಿದ್ದು, ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸತತ ಮಳೆಯಿಂದಾಗಿ ಭೂಕುಸಿತದ ಭಯದಿಂದ ಹಲವು ಮಂದಿ ತಾವಾಗಿಯೇ ಮನೆ ತೊರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರಾಖಂಡ | ಭಾರೀ ಮಳೆಗೆ ಜೋಶಿಮಠ ಬಳಿ ಕಟ್ಟಡ ಕುಸಿತ, ಅವಶೇಷಗಳಡಿ ಸಿಲುಕಿರುವ ಹಲವರು
ಎಲ್ಲಾ ಶಾಲಾ- ಕಾಲೇಜುಗಳನ್ನು ಮುಚ್ಚುವಂತೆ ಹಿಮಾಚಲ ಪ್ರದೇಶ ಶಿಕ್ಷಣ ಇಲಾಖೆ ಆದೇಶಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಆಗಸ್ಟ್ 19ರ ವರೆಗೆ ಬೋಧನೆ ನಿಲ್ಲಿಸಲಾಗಿದೆ.
ಮಳೆಯಿಂದಾಗಿ ಸುಮಾರು 800 ರಸ್ತೆಗಳು ಬಂದ್ ಆಗಿದ್ದು, ಸುಮಾರು 12,700 ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.

