ಭಾರತಕ್ಕೆ ಮಂಗಳವಾರ (ಆಗಸ್ಟ್ 15) 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಭಾಷಣವು ದೇಶದ ಈವರೆಗಿನ ಸಾಧನೆಗಳ ಜತೆಗೆ ಮುಂದಿನ ಹಾದಿ ಹೇಗಿರಲಿದೆ ಎಂದು ದಿಕ್ಸೂಚಿಯೂ ಆಗಿತ್ತು. ಭಾರತ ಮಾತ್ರವಲ್ಲದೆ ಇಡೀ ಜಗತ್ತು ಪ್ರಧಾನಿ ಮೋದಿ ಅವರ ಭಾಷಣಕ್ಕೆ ಸಾಕ್ಷಿಯಾಯಿತು.
77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ನೆರವೇರಿಸಿದ ನಂತರ ಸೇನಾ ಬ್ಯಾಂಡ್ಸೆಟ್ ರಾಷ್ಟ್ರಗೀತೆ ನುಡಿಸಿತು. ಗಣ್ಯರು ಎದ್ದುನಿಂತು ರಾಷ್ಟ್ರಗೀತೆ ಹಾಡಿ ಧ್ವಜವಂದನೆ ಸಲ್ಲಿಸಿದರು. ಹೆಲಿಕಾಪ್ಟರ್ನಿಂದ ರಾಷ್ಟ್ರಧ್ವಜಕ್ಕೆ ಪುಷ್ಪವೃಷ್ಟಿ ಮಾಡಲಾಯಿತು. ಸ್ವಾತತಂತ್ರ್ಯ ಸಂಭ್ರಕ್ಕೆ ದೆಹಲಿಯಲ್ಲಿ ಹವಾಮಾನ ಅಡ್ಡಿಯಾಗದಿರುವುದು ವಿಶೇಷ.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆಗಳ ಜಂಟಿ ಮುಖ್ಯಸ್ಥ ಸಿಡಿಎಸ್ ಅನಿಲ್ ಚೌಹಾಣ್, ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸ್ವಾಗತಿಸಿದರು.
ಮಹರ್ಷಿ ಅರಬಿಂದೋ, ಮೀರಾಬೆನ್ ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೆನಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ 77ನೇ ಸ್ವಾತಂತ್ರ್ಯೋತ್ಸವ ಭಾಷಣ ಆರಂಭಿಸಿದರು.
“ಒಗ್ಗಟ್ಟು ಮಾತ್ರ ನಮ್ಮನ್ನು ಉಳಿಸಬಲ್ಲದು. ಒಳಜಗಳಗಳು ನಮ್ಮನ್ನು ಗುಲಾಮಗಿರಿಗೆ ತಳ್ಳಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
“ಸ್ವಾತಂತ್ರ್ಯ ಎನ್ನುವ ಸಾವಿರಾರು ವರ್ಷಗಳ ಕನಸು 1947ರಲ್ಲಿ ಈಡೇರಿತ್ತು. ದೇಶದ ಯುವಜನರು ಮಾಡಿದ್ದ ತ್ಯಾಗ ಮತ್ತು ಬಲಿದಾನಗಳಿಂದ ಇದು ಸಾಧ್ಯವಾಯಿತು. ಈಗ ನಾವು ಭಾರತದ ಅಮೃತಕಾಲದಲ್ಲಿದ್ದೇವೆ. ಇದು ಅಮೃತ ಕಾಲದ ಮೊದಲ ವರ್ಷವಾಗಿದೆ. ಈ ಕಾಲಘಟ್ಟದಲ್ಲಿ ನಾವು ಇಡುವ ಪ್ರತಿಹೆಜ್ಜೆ, ತ್ಯಾಗ, ಸರ್ವಜನರ ಹಿತ ಮತ್ತು ಸರ್ವಜನರ ಸುಖಕ್ಕಾಗಿ ನಾವು ಮಾಡುವ ಪ್ರತಿ ಕೆಲಸವೂ ಮುಂದಿನ ಒಂದು ಸಾವಿರ ವರ್ಷದ ಭವಿಷ್ಯ ಬರೆಯಲಿದೆ” ಸ್ಫೂರ್ತಿ ನುಡಿಗಳನ್ನಾಡಿದರು.
“ನಮ್ಮ ದೇಶದ ಮಕ್ಕಳು ಉಪಗ್ರಹಗಳನ್ನು ರೂಪಿಸಿ ಬಾಹ್ಯಾಕಾಶಕ್ಕೆ ಕಳಿಸಲು ಸಿದ್ಧರಾಗಿದ್ದಾರೆ. ನಾನು ಯುವಜನರಿಗೆ ಭರವಸೆ ಕೊಡುತ್ತಿದ್ದೇನೆ. ಅವಕಾಶಗಳು ಕಡಿಮೆಯಿಲ್ಲ. ನಿಮಗೆ ಎಷ್ಟು ಅವಕಾಶ ಬೇಕೋ ಅಷ್ಟು ನಾವು ಕೊಡುತ್ತೇವೆ. ದಿಗಂತದಿಂದ ಆಚೆಗೂ ನಿಮಗೆ ಅವಕಾಶಗಳಿವೆ”.
‘ರಾಷ್ಟ್ರೀಯ ಚೇತನ’ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದರು. “ಇಂದು ನಾವು ಇಡುವ ಪ್ರತಿ ಹೆಜ್ಜೆಯೂ ದೇಶದ ಮುಂದಿನ ಒಂದು ಸಾವಿರ ವರ್ಷಗಳ ಭವಿಷ್ಯ ಬರೆಯಲಿದೆ. ಭಾರತದ ಪ್ರಗತಿ, ಸಾಮರ್ಥ್ಯವು ಜಗತ್ತಿನ ಹಲವು ದೇಶಗಳಿಗೆ ಆತ್ಮವಿಶ್ವಾಸ ತುಂಬುತ್ತದೆ. ನಮ್ಮಲ್ಲಿ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯ ಇದೆ. ಈ ಮೂರೂ ಸೇರಿದರೆ ನಮ್ಮ ಭವಿಷ್ಯದ ಕನಸು ಸುಂದರವಾಗುತ್ತದೆ” ಎಂದು ಆಶಯ ವ್ಯಕ್ತಪಡಿಸಿದರು.
“ಭಾರತವು ಈಗ ಜಾಗತಿಕ ಪೂರೈಕೆ ಸರಪಣಿಯಲ್ಲಿ ಮುಖ್ಯ ಸ್ಥಾನ ಪಡೆದಿದೆ. ನಮ್ಮ ಪ್ರಾಮುಖ್ಯ ಹೆಚ್ಚಾಗಿದೆ. ಭಾರತದ ಶಕ್ತಿಯು ಜಾಗತಿಕ ಸ್ಥಿರತೆಯ ಭರವಸೆಗೆ ಅಗತ್ಯ ಇದೆ. ಇಲ್ಲಿ ಸಂದಿಗ್ಧದ ಮಾತುಗಳು ಇಲ್ಲ. ಭಾರತದ ಶಕ್ತಿಯ ಬಗ್ಗೆ ಎಲ್ಲರಿಗೂ ವಿಶ್ವಾಸ ಬಂದಿದೆ” ಎಂದು ಮೋದಿ ಹೇಳಿದರು.
“2014 ಮತ್ತು 2019ರಲ್ಲಿ ನೀವು ಸರ್ಕಾರ ರಚಿಸಿದಿರಿ. ನೀವು ಕೊಟ್ಟ ಬಲದಿಂದ ಮೋದಿಗೆ ಸುಧಾರಣೆಯ ಪ್ರಯತ್ನ ಮಾಡಲು ಸಾಧ್ಯವಾಯಿತು. ಸುಧಾರಣೆ, ಕಾರ್ಯಕ್ಷಮತೆ, ಬದಲಾವಣೆ (ರಿಫಾರ್ಮ್, ಪರ್ಫಾಮ್, ಟ್ರಾನ್ಸ್ಫಾರ್ಮ್) ಪ್ರಯತ್ನಗಳು ನಿರಂತರ ಸಾಗುತ್ತಿವೆ. ನಾವು ಜಲಶಕ್ತಿ ಇಲಾಖೆ ರೂಪಿಸಿದೆವು. ಇದು ನಮ್ಮ ದೇಶದ ಎಲ್ಲ ನಾಗರಿಕರಿಗೆ ಕುಡಿಯುವ ನೀರು ಒದಗಿಸಲು ಮುಂದಾಯಿತು. ಪರಿಸರ ಸಂರಕ್ಷಣೆಗೆ, ನೀರಿನ ಸುರಕ್ಷೆಗೆ ಹಲವು ಯೋಜನೆಗಳು ಜಾರಿಯಾದವು” ಎಂದು ಪ್ರಧಾನಿ ಮೋದಿ ಸ್ಮರಿಸಿದರು.
“ಹಿಂದೆ 2014 ಮತ್ತು 2019ರಲ್ಲಿ ಜನರು ದೇಶದ ಉಜ್ವಲ ಭವಿಷ್ಯಕ್ಕಾಗಿ ಸ್ಥಿರ ಸರ್ಕಾರ ಅಗತ್ಯ ಎಂದು ನಿರ್ಧರಿಸಿದರು. ಇದು ರಾಜಕೀಯ ಅಸ್ಥಿರತೆಯ ಕಾರಣಗಳಿಂದ ದೇಶ ಅನುಭವಿಸುತ್ತಿದ್ದ ಹಿನ್ನಡೆಯ ಸಮಸ್ಯೆಯನ್ನು ನಿವಾರಿಸಿದರು. ‘ಭಾರತ ಮೊದಲು’ ಎನ್ನುವುದು ನನ್ನ ಸರ್ಕಾರದ ಎಲ್ಲ ನಿರ್ಧಾರಗಳ ಹಿಂದಿರುವ ಆಶಯವಾಗಿದೆ” ಎಂದು ಹೇಳಿದರು.
“ವಿಶ್ವಕರ್ಮ ಜಯಂತಿಯಂದು ‘ವಿಶ್ಮಕರ್ಮ ಯೋಜನೆ’ ಆರಂಭಿಸುತ್ತೇವೆ. ಯೋಜನೆಗಾಗಿ 13ರಿಂದ 15 ಸಾವಿರ ಕೋಟಿ ಅನುದಾನ ಕೊಡುತ್ತೇವೆ. ಇದು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಕರಕುಶಲಕರ್ಮಿಗಳ ಸ್ಥಿತಿ ಸುಧಾರಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಸರ್ಕಾರದ ಪ್ರತಿ ಕ್ಷಣವು, ಪ್ರತಿ ಒಂದು ರೂಪಾಯಿ ಹಣವೂ ಜನರ ಹಿತಕ್ಕಾಗಿ ಬಳಕೆಯಾಗುತ್ತಿದೆ. ಈ ಮೊದಲು ಭ್ರಷ್ಟಾಚಾರದ ರಾಕ್ಷಸ ವಿಜೃಂಭಿಸುತ್ತಿದ್ದೆ. ಈಗ ಇದಕ್ಕೆ ಕಡಿವಾಣ ಹಾಕಲಾಗಿದೆ. ಭಾರತವು ವಿಶ್ವದ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿದೆ” ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.
“77ನೇ ಸ್ವಾತಂತ್ರ್ಯೋತ್ಸವ ಈ ಹೊತ್ತಿನಲ್ಲಿ ಭಾರತಕ್ಕೆ ಈಗ ಮಹಿಳೆಯರೇ ಮುನ್ನಡೆಸುವ ಅಭಿವೃದ್ಧಿ ರೂಪಿಸಬೇಕಾದ ಜರೂರತ್ತು ಇದೆ. ವಿಶ್ವದ ವೈಮಾನಿಕ ಉದ್ಯಮದ ಅಂಕಿಅಂಶಗಳನ್ನು ಪರಿಶೀಲಿಸಿದರೆ ಭಾರತದಲ್ಲಿಯೇ ಅತಿಹೆಚ್ಚು ಮಹಿಳಾ ಪೈಲಟ್ಗಳು ಇರುವುದು ತಿಳಿಯುತ್ತದೆ. ಮಹಿಳಾ ವಿಜ್ಞಾನಿಗಳು ‘ಚಂದ್ರಯಾನ’ ಯೋಜನೆ ಮುನ್ನಡೆಸುತ್ತಿದ್ದಾರೆ. ಜಿ-20 ಸದಸ್ಯ ದೇಶಗಳು ಸಹ ಮಹಿಳೆಯರ ನೇತೃತ್ವದಲ್ಲಿ ರೂಪುಗೊಳ್ಳುವ ಅಭಿವೃದ್ಧಿಯ ಪ್ರಾಮುಖ್ಯವನ್ನು ಗುರುತಿಸುತ್ತವೆ” ಎಂದು ಮೋದಿ ತಿಳಿಸಿದರು.
ಮಣಿಪುರದ ವಿಚಾರ ಪ್ರಸ್ತಾಪ
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು.
ಈ ಸುದ್ದಿ ಓದಿದ್ದೀರಾ? ಬರ ಘೋಷಣೆ ಮಾರ್ಗಸೂಚಿ ಪ್ರಕಟಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ
“ಕೆಲವರು ಜೀವ ಕಳೆದುಕೊಂಡರು. ತಾಯಂದಿರು, ಸೋದರಿಯರ ಮಾನಹಾನಿಯಾಯಿತು. ಆದರೆ ಈಗ ಅಲ್ಲಿ ಶಾಂತಿ ನೆಲೆಸುತ್ತಿದೆ. ಇಡೀ ದೇಶ ಮಣಿಪುರದೊಂದಿಗೆ ನಿಂತಿದೆ. ನಾನು ಶಾಂತಿ ಸ್ಥಾಪನೆಗಾಗಿ ವಿನಂತಿಸುತ್ತೇನೆ. ಏನೇ ಸಮಸ್ಯೆಯಿದ್ದರೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಸ್ಟಾರ್ಟ್ಅಪ್ ಮುನ್ನಡೆ ಶ್ಲಾಘನೆ
“77ನೇ ಸ್ವಾತಂತ್ರ್ಯೋತ್ಸವ ಈ ಹೊತ್ತಿನಲ್ಲಿ ನಮ್ಮ ಯುವಜನರ ಸಾಧನೆಯಿಂದ ಭಾರತವು ವಿಶ್ವದ ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದಿದೆ. ಭಾರತದ ಸಾಧನೆ ಎಂದರೆ ದೆಹಲಿಯಂಥ ಮಹಾನಗರಗಳ ಚಟುವಟಿಕೆಗಳು ಅಷ್ಟೇ ಅಲ್ಲ. ದೇಶದ ಟಯರ್-2, ಟಯರ್-3 ಹಂತದ ಸಣ್ಣಪುಟ್ಟ ಪಟ್ಟಣ, ನಗರಗಳಲ್ಲಿಯೂ ಸಾಕಷ್ಟು ಸಾಧನೆಗಳಾಗಿವೆ. ಈ ನಗರಗಳ ಗಾತ್ರ ಕಡಿಮೆ ಇರಬಹುದು. ಆದರೆ ಸಾಧನೆ ಮಹತ್ತರವಾಗಿದೆ. ದೇಶದ ಪ್ರಗತಿಯ ವೇಗವನ್ನು ಇದು ಹೆಚ್ಚಿಸಿದೆ” ಎಂದು ಪ್ರಧಾನಿ ಮೋದಿ ಬಣ್ಣಿಸಿದರು.