ಕೇಂದ್ರ ಬಿಜೆಪಿ ಸರ್ಕಾರ ಮಣಿಸಲು ಒಂದಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ಆಗಸ್ಟ್ 3) ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷಗಳು ಮೈತ್ರಿ ಬಗ್ಗೆ ಗಮನ ನೀಡುವುದು ಬಿಟ್ಟು ದೆಹಲಿ ಆಡಳಿತದ ಬಗ್ಗೆ ಹೆಚ್ಚು ಕಾಳಜಿ ವಹಿಸಲಿ ಎಂದು ಶಾ ಲೋಕಸಭೆಯಲ್ಲಿ ಉತ್ತರಿಸಿದರು.
ದೇಶದ ರಾಜಧಾನಿಯಲ್ಲಿ ಅಧಿಕಾರಿಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುವ ಸರ್ಕಾರದ ಮಸೂದೆಯನ್ನು ಸಮರ್ಥಿಸಿ ಶಾ ಈ ಮಾತನಾಡಿದ್ದಾರೆ.
ದೆಹಲಿಯಲ್ಲಿನ ಸೇವೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಬದಲಿಸಲು ಕೋರಿ ಲೋಕಸಭೆಯಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ಅನ್ನು ಪರಿಚಯಿಸಿದ ಅಮಿತ್ ಶಾ, “ಈ ಸುಗ್ರೀವಾಜ್ಞೆಯು ಸುಪ್ರೀಂಕೋರ್ಟ್ನ ಆದೇಶವನ್ನು ಉಲ್ಲೇಖಿಸುತ್ತದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ. ದೆಹಲಿಗೆ ಕಾನೂನು ಮಾಡಲು ಕೇಂದ್ರಕ್ಕೆ ಅವಕಾಶ ನೀಡುವ ನಿಬಂಧನೆಗಳು ಸಂವಿಧಾನದಲ್ಲಿ ಇವೆ” ಎಂದು ಹೇಳಿದರು.
“ನೀವು ಮೈತ್ರಿ ಮಾಡಿಕೊಂಡಿದ್ದೀರಿ ಎಂಬ ಕಾರಣಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ ಎಂದು ನಾನು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಏಕೆಂದರೆ ಮೈತ್ರಿ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ಣ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತಾರೆ” ಎಂದು ಶಾ ಹೇಳಿದ್ದಾರೆ.
2015 ರಲ್ಲಿ ದೆಹಲಿಯಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬಂದಿತು, ಅದರ ಏಕೈಕ ಉದ್ದೇಶ ಹೋರಾಟವಲ್ಲ, ಸೇವೆಯೂ ಅಲ್ಲ. ವರ್ಗಾವಣೆ ನೇಮಕಾತಿಗಳೂ ಅಲ್ಲ. ಬಂಗಲೆ ನಿರ್ಮಿಸುವಂಥಾ ಭ್ರಷ್ಟಾಚಾರಗಳನ್ನು ಮರೆಮಾಡಲು ಜಾಗೃತ ಇಲಾಖೆಯ ನಿಯಂತ್ರಣವನ್ನು ಪಡೆಯುವುದಾಗಿದೆ ಎಂದು ಅಮಿತ್ ಶಾ ಟೀಕಿಸಿದರು.
ಭಾರತದ ಸಂಸ್ಥಾಪಕರಾದ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸಿ ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್ ಮತ್ತು ಬಿಆರ್ ಅಂಬೇಡ್ಕರ್ ಅವರು ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಪಡೆಯುವ ಕಲ್ಪನೆಗೆ ವಿರುದ್ಧವಾಗಿದ್ದರು ಎಂದು ಶಾ ಉಲ್ಲೇಖಿಸಿದರು.
2015 ರಲ್ಲಿ ಪಕ್ಷ ಅಧಿಕಾರಕ್ಕೆ ಬರುವವರೆಗೆ ದೆಹಲಿಯಲ್ಲಿ ಆಡಳಿತಾತ್ಮಕ ವ್ಯವಹಾರಗಳು ವಿವಿಧ ಸರ್ಕಾರಗಳ ಅಡಿಯಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಿದ್ದವು. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಹದಗೆಟ್ಟಿತು ಎಂದು ಅಮಿತ್ ಶಾ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ವಾರಾಣಸಿ | ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಸಮ್ಮತಿ
ದೆಹಲಿಯ ಆಡಳಿತ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಹೊರಡಿಸಿತು, ಇದು ಅರವಿಂದ ಕೇಜ್ರಿವಾಲ್ ನೇತೃತ್ವದ ಚುನಾಯಿತ ಎಎಪಿ ಸರ್ಕಾರದ ಪರವಾಗಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.
ಅಧಿಕಾರಿಗಳು ಮತ್ತು ಉದ್ಯೋಗಿಗಳ ಸೇವೆಯ ಕಾರ್ಯಗಳು, ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಂತೆ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಸ್ಥಾಪಿಸಲು ಈ ಮಸೂದೆಯು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.