~ಡಾ. ಜೆ ಎಸ್ ಪಾಟೀಲ.
ಇತಿಹಾಸವನ್ನು ತನ್ನ ಮೂಗಿನ ನೇರಕ್ಕೆ ತಿರುಚುವ ಹಾಗು ಶಾಲಾ ಹಂತದಲ್ಲೆ ಮಕ್ಕಳ ಮಿದುಳಿಗೆ ಹಿಂದುತ್ವದ ವಿಷ ಬಿತ್ತುವ ಕೃತ್ಯ ಆರ್‌ಎಸ್‌ಎಸ್ ಶಾಲೆಗಳು ದೇಶಾದ್ಯಂತ ಮಾಡುತ್ತಿರುವ ಸಂಗತಿ ಇಂದು ನಿನ್ನೆಯದಲ್ಲ. ದೇಶದಾದ್ಯಂತ ಆರ್‌ಎಸ್‌ಎಸ್ ಐಡಿಯಾಲಾಜಿಯನ್ನು ಪಸರಿಸುವ ವಿದ್ಯಾಭಾರತಿ ಶಾಲೆಗಳು ಯುವ ಮನಸ್ಸುಗಳಲ್ಲಿ ಹಿಂದುತ್ವ ಸಿದ್ಧಾಂತವನ್ನು ಬಿತ್ತಲು ಸುಳ್ಳು ಇತಿಹಾಸ, ಸಾಂಸ್ಕೃತಿಕ ಉಪದೇಶ ಮತ್ತು ಸ್ಥಿರವಾದ ಮುಸ್ಲಿಂ ವಿರೋಧಿ ಮಾರ್ಗವನ್ನು ಬಳಸುತ್ತಿವೆ. ಈ ಕುರಿತು ಇದೇ ಮೇ ೨೨ˌ ೨೦೨೩ ರ ‘ದಿ ವೈರ್ˌ ವೆಬ್ ಜರ್ನಲ್ಲಿನಲ್ಲಿ ಆಸ್ತಾ ಸವ್ಯಸಾಚಿ ಎಂಬ ಅಂಕಣಕಾರ್ತಿ ಒಂದು ಸುದೀರ್ಘ ಲೇಖನವನ್ನು ಬರೆದು ಸಂಘ ಪ್ರತಿಪಾದಿಸುವ ಹಿಂದುತ್ವದ ಅಪಾಯಗಳ ವಿವಿಧ ಆಯಾಮಗಳನ್ನು ವಿವರವಾಗಿ ಓದುಗರಿಗೆ ಪರಿಚಯಿಸಿದ್ದಾರೆ. ಆ ಲೇಖನವನ್ನು ನಾನು ಇಲ್ಲಿ ಒಂಬತ್ತು ಕಂತುಗಳಲ್ಲಿ ಮರು ವಿಮರ್ಶಿಸಿದ್ದೇನೆ.
ಇದಕ್ಕೆ ಪೂರಕ ಎನ್ನುವಂತೆ ಆಸ್ತಾ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯಲ್ಲಿ ಡಿಸ್ಸೆಂಬರ್ ೧೫ˌ ೨೦೧೯ ರಂದು ಬಾಬರಿ ಮಸೀದಿ ಧ್ವಂಸವನ್ನು ಕಾನೂನಿನ ಉಲ್ಲಂಘನೆ ಎಂದು ಸುಪ್ರೀಮ್ ಕೋರ್ಟ್ ತೀರ್ಪಿತ್ತ ಸುಮಾರು ಒಂದು ತಿಂಗಳ ನಂತರ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡು ಬಾಬರಿ ಮಸೀದಿ ಬೀಳಿಸಿದ ಘಟನೆಯ ಕುರಿತು ನಾಟಕ ಮಾಡಿಸಿದ್ದನ್ನು ಲೇಖಕರು ಪ್ರಾಸ್ತಾಪಿಸಿದ್ದಾರೆ. ಈ ಕಾರ್ಯಕ್ರಮವು ಭವ್ಯವಾದ ಬೆಳಕಿನಿಂದ ಅಲಂಕರಿಸಿದ ವೇದಿಕೆಯಲ್ಲಿ ಕಿಕ್ಕಿರಿದ ಪ್ರೇಕ್ಷಕರು ಮತ್ತು ಅಂದಿನ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಪುದುಚೇರಿ ಗವರ್ನರ್ ಕಿರಣ್ ಬೇಡಿ ಮತ್ತು ಕರ್ನಾಟಕದ ಹಲವಾರು ಸಚಿವರ ಸಮಕ್ಷಮದಲ್ಲಿ ನಡೆಸಲಾಗಿತ್ತು. ಕನಿಷ್ಠ ೧೦೦ ವಿದ್ಯಾರ್ಥಿಗಳು ಬಿಳಿ ಶರ್ಟ್, ಬಿಳಿ ಪ್ಯಾಂಟ್ ಮತ್ತು ಕೇಸರಿ ಧೋತಿಗಳನ್ನು ಧರಿಸಿ, ಕೇಸರಿ ಧ್ವಜಗಳನ್ನು ಕೈಯಲ್ಲಿ ಹಿಡಿದಿದ್ದನ್ನು ಇಲ್ಲಿ ಸ್ಮರಿಸಲಾಗಿದೆ.
ಜೈ ಶ್ರೀರಾಮ್ˌ ಜೈ ಭಜರಂಗಬಲಿ ಮುಂತಾದ ಪ್ರಚೋದನಾತ್ಮಕ ಘೋಷಣೆಗಳ ನಡುವೆ ಬಾಬರಿ ಮಸೀದಿಯನ್ನು ಉನ್ಮಾದಿತ ಗುಂಪೊಂದು ಧ್ವಂಸಗೊಳಿಸುವ ದೃಶ್ಯವನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸಲಾಗಿತ್ತು. ಈ ಶಾಲೆಯು ಕರ್ನಾಟಕದ ಪ್ರಮುಖ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಎಂಬಾತನ ಒಡೆತನದಲ್ಲಿದೆ. ಭಟ್ಟರು ಮಾಧ್ಯಮಗಳ ಮುಂದೆ ವಿದ್ಯಾರ್ಥಿಗಳ ಮೂಲಕ ನಾಟಕದ ಪ್ರದರ್ಶನ ಮಾಡಿದ್ದನ್ನು ಯಾವ ಅಳುಕು ಇಲ್ಲದೆ ಸಮರ್ಥಿಸಿಕೊಳ್ಳುತ್ತ: “ಈ ಕಟ್ಟಡ ಮಸೀದಿ ಅಲ್ಲ. ಅದೊಂದು ಕಟ್ಟಡ ಅಷ್ಟೆ. ಒಂದು ನೈಜ ಐತಿಹಾಸಿಕ ಘಟನೆಯನ್ನು ನಾವು ಚಿತ್ರಿಸುತ್ತಿದ್ದೇವೆ. ಬಾಬರನ ಮಕ್ಕಳು ಯಾರು? ನಾವು ಭಯೋತ್ಪಾದರ ವಿರುದ್ಧವೆ ಹೊರತು ಮುಸ್ಲಿಮರ ವಿರೋಧಿವಲ್ಲ. ಐತಿಹಾಸಿಕ ಘಟನೆಗಳನ್ನು ತೋರಿಸುವುದರಲ್ಲಿ ಸಮಸ್ಯೆ ಏನು” ಎಂದಿರುವ ಭಟ್ ಅವರು ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಮಾರ್ಗದರ್ಶಕರಲ್ಲಿ ಒಬ್ಬರು ಹಾಗು ಕರ್ನಾಟಕದ ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ.
ಆರ್‌ಎಸ್‌ಎಸ್ ನಡೆಸುತ್ತಿರುವ ಶಾಲೆಯು ಅಲ್ಲಿನ ವಿದ್ಯಾರ್ಥಿಗಳಿಗೆ ಇಸ್ಲಾಮೋಫೋಬಿಯಾ ಮತ್ತು ಇತರ ಜನತಂತ್ರ ವಿರೋಧಿ, ಸಂವಿಧಾನಿಕ ವಿರೋಧಿ ಮತ್ತು ಅಸಹಿಷ್ಣು ನಂಬಿಕೆಗಳನ್ನು ಕಲಿಸುತ್ತಿರುವ ಆರೋಪವು ಇದೇ ಮೊದಲಲ್ಲ. ನಾಗಪುರದ ಭೋನ್ಸಾಲಾ ಮಿಲಿಟರಿ ಶಾಲೆ (ಬಿಎಂಎಸ್) ಇತ್ತೀಚಿನ ದಿನಗಳಲ್ಲಿ ಹಿಂದೂ ಉಗ್ರಗಾಮಿಗಳು ಎಸಗಿದರೆನ್ನಲಾಗುವ ವಿವಿಧ ಭಯೋತ್ಪಾದಕ ದಾಳಿಗಳೊಂದಿಗೆ ಸಂಬಂಧ ಹೊಂದಿರುವ ಕುರಿತು ದಾಖಲೆಗಳಿವೆ. ೨೦೦೮ ರ ಮಾಲೆಗಾಂವ್ ಸ್ಫೋಟ ಮತ್ತು ೨೦೦೬ ರ ನಾಂದೇಡ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಈ ಕುರಿತು ತನ್ನ ತನಿಖಾ ವರದಿಯಲ್ಲಿ ಹೀಗೆ ಹೇಳಿದೆ: (೧) ಬಿಎಂಎಸ್ ನಲ್ಲಿ ಹಿಂದೂ ಭಯೋತ್ಪಾದಕರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಅಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳ ಆರೋಪಿಗಳಿಗೆ ತರಬೇತಿ ನೀಡಲಾಗಿದೆ.
ಇದಲ್ಲದೆˌ (೨) ಇಲ್ಲಿ ಹಿರಿಯ ಆರ್‌ಎಸ್‌ಎಸ್ ನಾಯಕರುˌ ಅವರ ಅಂಗಸಂಸ್ಥೆಗಳು ಮತ್ತು ಆರೋಪಿಗಳ ನಡುವೆ ದೇಶದ ವಿವಿಧ ಭಾಗಗಳಲ್ಲಿ ಬಾಂಬ್ ಸ್ಫೋಟದ ಯೋಜನೆಯ ಕುರಿತು ಸಭೆಗಳನ್ನು ಯೋಜಿಸಲಾಗಿದೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಯಂತ್ ಚಿತಾಲೆ ಅವರು ನಡೆಸುವ ಪುಣೆಯ ಮಹಾರಾಷ್ಟ್ರ ಮಿಲಿಟರಿ ಫೌಂಡೇಶನ್‌ನ ಶಾಲೆಯ ಅನೇಕ ಸಂಗತಿಗಳು ಔಟ್‌ಲುಕ್ ನಿಯತಕಾಲಿಕದಲ್ಲಿ ಲೇಖನ ರೂಪದಲ್ಲಿ ಪ್ರಕಟಗೊಂಡಿವೆಯಂತೆ. ಅದರ ಪ್ರಕಾರ ಶಾಲೆಯ ಸಂದರ್ಶಕರ ಹಾಜರಿ ಪುಸ್ತಕದ ಆಧಾರದಲ್ಲಿ ಈ ಕ್ಯಾಂಪಸ್‌ನಲ್ಲಿ ತರಬೇತಿ ಪಡೆದ ಎಲ್ಲರ ಹೆಸರುಗಳನ್ನು ಸಂರಕ್ಷಿಸಲಾಗಿದೆಯಂತೆ. ಅವರಲ್ಲಿ ಮಾಲೇಗಾಂವ್ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಶ್ರೀಕಾಂತ್ ಪ್ರಸಾದ್ ಪುರೋಹಿತ್ ನ ಹೆಸರೂ ಕೂಡ ಇದೆಯಂತೆ. ಈ ರೀತಿಯಲ್ಲಿ ಮಹಾರಾಷ್ಟ್ರವೂ ಸೇರಿದಂತೆ ದೇಶದಾದ್ಯಂತ ಸಂಘದ ನಿಯಂತ್ರಣದಲ್ಲಿರುವ ಶಾಲೆಗಳು ಭಯೋತ್ಪಾದನಾ ತರಬೇತಿ ನೀಡುತ್ತಿವೆಯಂತೆ.
ಹಿಂದಿನಿಂದಲೂ ಅನೇಕ ಕಡೆಗಳಲ್ಲಿ ಹಿಂದುತ್ವ ಸಿದ್ಧಾಂತದ ಆಧಾರದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ಎಂ. ಎಸ್. ಗೋಲ್ವಾಲ್ಕರ್ ಅವರ ನೇತೃತ್ವದಲ್ಲಿ ೧೯೪೬ ರಲ್ಲಿ, ಸಂಘ ತನ್ನ ಮೊದಲ ಶಾಲೆಯನ್ನು ಗೀತಾ ಶಾಲೆ ಎನ್ನುವ ಹೆಸರಿನಲ್ಲಿ ಕುರುಕ್ಷೇತ್ರದಲ್ಲಿ ಸ್ಥಾಪಿಸಿತ್ತು. ಆದರೆ ೧೯೪೮ ರಲ್ಲಿ ನಾಥೂರಾಮ್ ಗೋಡ್ಸೆ ಗಾಂಧಿಜಿಯವರನ್ನು ಹತ್ಯೆ ಮಾಡಿದ ಕಾರಣದಿಂದ ಆರೆಸ್ಸೆಸ್ ಮೇಲೆ ನಿಷೇಧ ಹೇರಲಾಗಿತ್ತು. ಇದು ದೇಶದಾದ್ಯಂತ ಗೀತಾ ಮಾದರಿಯ ಶಾಲೆಗಳ ವಿಸ್ತರಣೆಗೆ ತಡೆಯೊಡ್ಡಿತು. ಸಂಘದ ಮೇಲಿನ ನಿಷೇಧವನ್ನು ೧೯೫೨ ರಲ್ಲಿ ತೆರವುಗೊಳಿಸಿದ ನಂತರˌ ಆರ್‌ಎಸ್‌ಎಸ್ ಮುಖಂಡರಾದ ಕೃಷ್ಣ ಚಂದ್ರ ಗಾಂಧಿ, ಭಾವೂರಾವ್ ದೇವರಸ್ ಮತ್ತು ನಾನಾಜಿ ದೇಶಮುಖ್ ಈ ಮೂರು ಜನರು ಸೇರಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಭಾರತದ ಮೊದಲ ಸರಸ್ವತಿ ಶಿಶು ಮಂದಿರವನ್ನು ತಿಂಗಳಿಗೆ ೫ ರೂ. ದಂತೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸುವ ಮೂಲಕ ಹಿಂದುತ್ವದ ವಿಷ ಬಿತ್ತುವ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಿದರು.
ಮುಂದುವರೆಯುವುದು….