ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿ ಅದರ ತೀರ್ಪಿನ ಅನ್ವಯ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಎಂದು ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ಕಾಂಗ್ರೆಸ್ ಶಾಸಕರ ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು
“ರಾಹುಲ್ ಗಾಂಧಿ ಅವರ ರಾಜಕೀಯ ಬೆಳವಣಿಗೆ ತಡೆಯಲು ಬಿಜೆಪಿ ಕುತಂತ್ರ ನಡೆಸಿದ್ದು, ಇದನ್ನು ನಾವು ಖಂಡಿಸುತ್ತೇವೆ. ರಾಹುಲ್ ಗಾಂಧಿ ಅವರು ದೇಶದ ಬಡವರ ಧ್ವನಿಯಾಗಿ, ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಹೋರಾಟ ಮಾಡುತ್ತಿದ್ದು, ಈ ಹೋರಾಟ ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ದೇಶದ ಐಕ್ಯತೆ ಸಮಗ್ರತೆ ಹಾಗೂ ಶಾಂತಿ ಸ್ಥಾಪನೆಗೆ ಭಾರತ ಒಗ್ಗೂಡಿಸಲು ಮುಂದಾಗಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಸಂಚು ರೂಪಿಸುತ್ತಿದೆ. ದೇಶದ ಎಲ್ಲಾ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಲ್ಲುತ್ತವೆ, ರಾಹುಲ್ ಗಾಂಧಿ ಅವರ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜನ ಸೂಕ್ತ ಉತ್ತರ ನೀಡುತ್ತಾರೆ. ಎಂದು ಹೇಳಿಕೆ ನೀಡಿದ್ದಾರೆ
ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ವಿಚಾರ ಚರ್ಚೆ ಆಗಿದೆ ಎಂಬ ಪ್ರಶ್ನೆಗೆ, “ನಾವು ಚುನಾವಣೆಗೂ ಮುನ್ನ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿಗೆ ಪಣ ತೊಟ್ಟಿದ್ದೇವೆ. ಈಗಾಗಲೇ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭಿಸಲಾಗುವುದು. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಈ ವರ್ಷವೇ ಜಾರಿ ಮಾಡುತ್ತೇವೆ. ನಮ್ಮ ಕಾರ್ಯಕರ್ತರು ಜನರಿಗೆ ಎಲ್ಲಾ ಯೋಜನೆಗಳ ಬಗ್ಗೆ ತಿಳಿಸಬೇಕು. ನಮ್ಮ ಯೋಜನೆಗಳು ಎಲ್ಲಾ ಜಾತಿ, ಧರ್ಮ, ವರ್ಗದವರಿಗೆ ತಲುಪಬೇಕು. ವಿಧಾನಸಭೆ ಹಾಗೂ ಪರಿಷತ್ ನಲ್ಲಿ ನಮ್ಮ ಯೋಜನೆಗಳಿಗೆ ಬಿಜೆಪಿ ನಾಯಕರು ಪ್ರಚಾರ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ಕೈಯಲ್ಲಿ ಮಾಡಲಾಗದ ಕೆಲಸ ಇವರು ಮಾಡುತ್ತಿದ್ದಾರೆ ಎಂದು ಸಂತೋಷದಿಂದ ಕೆಲವು ಸಲಹೆ ನೀಡುತ್ತಿದ್ದಾರೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಕೇಳಿದಾಗ, “ಅಣ್ಣ ತಮ್ಮನ ಬಗ್ಗೆ ಮಾತನಾಡದೆ ಬೇರೆ ಯಾರ ಬಗ್ಗೆ ಮಾತನಾಡುತ್ತಾರೆ? ನನ್ನ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಹೀಗಾಗಿ ಮಾತನಾಡುತ್ತಾರೆ. ಮಾತನಾಡಲಿ ನಾನು ಬಹಳ ಸಂತೋಷದಿಂದ ಅವರ ಮಾತನ್ನು ಸ್ವೀಕರಿಸುತ್ತೇನೆ. ಅವರ ದೊಡ್ಡ ಅನುಭವ, ಜ್ಞಾನ ಭಂಡಾರವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇನೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ತೋರಿಸಿರುವ ಪೆನ್ ಡ್ರೈವ್ ಬಗ್ಗೆ ಕೇಳಿದ ಪ್ರಶ್ನೆಗೆ, “ನಾವು ಬಹಳಷ್ಟು ಡ್ರೈವ್ ನೋಡಿದ್ದೇವೆ. ನಾನು ಕಿವಿಯಲ್ಲಿ ಕೇಳಿದ್ದನ್ನು ನಂಬುವುದಿಲ್ಲ. ಕಣ್ಣಾರೆ ನೋಡಿದ್ದನ್ನು ಮಾತ್ರ ನಂಬುತ್ತೇನೆ. ಅವರ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಲಿ” ಎಂದು ತಿಳಿಸಿದರು.
ಆಪರೇಶನ್ ಕಮಲದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಯಿತೇ ಎಂದು ಕೇಳಿದಾಗ, “ಇಲ್ಲದಿರುವ ವಿಚಾರ ಸೃಷ್ಟಿಸಬೇಡಿ. ಜನರೇ ಈಗಾಗಲೇ ಆಪರೇಶನ್ ಮಾಡಿದ್ದಾರೆ” ಎಂದು ತಿಳಿಸಿದರು.