ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಅನ್ನೋದನ್ನು ಸಾಬೀತು ಮಾಡುವ ತಯಾರಿಯಲ್ಲಿದೆ. ಸಿ.ಟಿ ರವಿ ಹಾಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ಬೆನ್ನಲ್ಲೇ ಸಿ.ಪಿ ಯೋಗೇಶ್ವರ್ ಕೂಡ ಹೊಂದಾಣಿಕೆ ಮಾಡಿಕೊಂಡಿದ್ದು ಸತ್ಯ ಎಂದಿದ್ದಾರೆ. ಬಿಜೆಪಿಯ ಹಿರಿಯ ನಾಯಜಕರ ಹೊಂದಾಣಿಕೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿತು. ಆದರೆ ಇದನ್ನೆಲ್ಲಾ ಈಗ ನಾವು ಬಹಿರಂಗ ಮಾಡಿದರೆ ಬೆಂಕಿ ಹಚ್ಚಿದಂತೆ ಆಗುತ್ತದೆ ಎನ್ನುವ ಮೂಲಕ ಮೆಲ್ಲಗೆ ಬೆಂಕಿ ಇಟ್ಟಿದ್ದಾರೆ. ಅಂದರೆ ದೆಹಲಿಯ ಬಿ.ಎಲ್ ಸಂತೋಷ್ ಟೀಂಗೆ ಎದುರಾಗಿ ರಾಜ್ಯದಲ್ಲಿ ಯಡಿಯೂರಪ್ಪ ಟೀಂ ಕಾಂಗ್ರೆಸ್ ಜೊತೆಗೆ ಕೈಜೋಡಿಸಿತು ಅನ್ನೋದು ಸಂತೋಷ್ ಬಳಗದ ಗುಮಾನಿ. ಇದೀಗ ಗುಮಾನಿಯನ್ನು ಸಾಕ್ಷಿ ಸಮೇತ ಸಾಬೀತು ಮಾಡಲು ರಾಜ್ಯ ಬಿಜೆಪಿ ಸಜ್ಜಾಗಿದೆ.

ಹೊಂದಾಣಿಕೆ ವರದಿ ಕೊಡಲು ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಸೂಚನೆ..!
ಬಿಜೆಪಿಯಲ್ಲಿ ಪ್ರತಾಪ್ ಸಿಂಹ, ಸಿಟಿ ರವಿ ಬೆನ್ನಲ್ಲೇ ಸಿ.ಪಿ ಯೋಗೇಶ್ವರ್ ಕೂಡ ಹೊಂದಾಣಿಕೆ ಬಾಂಬ್ ಹಾಕಿದ್ದು ಕಳೆದ ಚುನಾವಣೆಯಲ್ಲಿ ಸೋಲಿಗೆ ಹೊಂದಾಣಿಕೆಯೂ ಕಾರಣ. ವರಿಷ್ಠರ ಆದೇಶ ಇದ್ದರೂ ಪಕ್ಷದಲ್ಲಿ ಹೊಂದಾಣಿಕೆ ಆಗಿದೆ ಎನ್ನುವ ಹೇಳಿಕೆಗಳು ಹೊರ ಬೀಳುತ್ತಿದ್ದಂತೆ ಜಿಲ್ಲಾಧ್ಯಕ್ಷರಿಂದ ವರದಿಗೆ ಸೂಚನೆ ಕೊಡಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದ ಬಿಜೆಪಿ, ಹೊಂದಾಣಿಕೆ ರಾಜಕೀಯ ಆರೋಪ ಹೊತ್ತುಕೊಂಡಿದೆ. ಸ್ವತಃ ಸೋತವರೇ ಪಕ್ಷದ ನಾಯಕರ ಮೇಲೆ ಆರೋಪ ಮಾಡ್ತಿದ್ದಾರೆ. ಹೀಗಾಗಿ ಹೊಂದಾಣಿಕೆ ಆಗಿತ್ತಾ..? ಇಲ್ಲವಾ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಮಾಡಿದ್ದಾರೆ. ಅಂತಿಮವಾಗಿ ಜಿಲ್ಲಾಧ್ಯಕ್ಷರ ವರದಿ ನಂತರ ಹೈಕಮಾಂಡ್ಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.


ವರುಣಾ ಹಾಗು ಶಿಕಾರಿಪುರದಲ್ಲಿ ಹೊಂದಾಣಿಕೆ ಆಗಿತ್ತಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದ ಮೈಸೂರಿನ ವರುಣಾದಲ್ಲಿ ಮೊದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆ ಬಳಿಕ ವಿಜಯೇಂದ್ರ ಮೈಸೂರಿನ ವರುಣಾದಲ್ಲಿ ಸಭೆ ನಡೆಸಲು ಹೋಗುತ್ತಾರೆ ಎನ್ನುವಾಗಲೇ ಯಡಿಯೂರಪ್ಪ ಬಹಿರಂಗವಾಗಿ ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡಲ್ಲ ಎಂದಿದ್ದರು. ಹೈಕಮಾಂಡ್ ನಿರ್ಧಾರಕ್ಕೂ ಕಾಯದೆ ಯಡಿಯೂರಪ್ಪ ಬಹಿರಂಗವಾಗಿ ಹೇಳಿದ ಮೇಲೆ ವಿಜಯೇಂದ್ರಗೆ ಹೈಕಮಾಂಡ್ ವರುಣಾ ಟಿಕೆಟ್ ನೀಡುವ ವಿಚಾರದಿಂದ ಹಿಂದೆ ಸರಿದಿತ್ತು. ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಿದ್ದರೆ ಸಿದ್ದರಾಮಯ್ಯ ಗೆಲುವು ಸುಲಭ ಅಲ್ಲ ಅನ್ನೋದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಆಗಿತ್ತು. ಆದರೆ ಯಡಿಯೂರಪ್ಪ ಹೈಕಮಾಂಡ್ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದರು. ಸಿದ್ದರಾಮಯ್ಯ ಎದುರು ಮಗನನ್ನು ನಿಲ್ಲಿಸಿದರೆ ಭವಿಷ್ಯದಲ್ಲಿ ಸಮಸ್ಯೆ ಅನ್ನೋ ಕಾರಣಕ್ಕೆ ಯಡಿಯೂರಪ್ಪ ಈ ದಾಳ ಉರುಳಿಸಿದರು ಅನ್ನೋದು ಸಂತೋಷ್ ಟೀಂ ಆರೋಪ.
ಗೋಣಿ ಮಾಲತೇಶ್ಗೆ ಟಿಕೆಟ್ ಕೊಟ್ಟಿದ್ದೇ ಹೊಂದಾಣಿಕೆ..!
ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು ಕಠಿಣ ಆಗದಂತೆ ಯಡಿಯೂರಪ್ಪ ಮಾಡಿದ್ದರ ಪರಿಣಾಮವೇ ಶಿಕಾರಿಪುರದಲ್ಲಿ ಕಾಂಗ್ರೆಸ್ನಿಂದ ಗೋಣಿ ಮಾಲತೇಶ್ಗೆ ಕಾಂಗ್ರೆಸ್ ಟಿಕೆಟ್ ಸಿಗುವುದಕ್ಕೆ ಕಾರಣ ಅನ್ನೋ ಮಾತುಗಳು ಹರಿದಾಡ್ತಿವೆ. ವರುಣಾದಲ್ಲಿ ಸಹಾಯ ಮಾಡಿದ್ದಕ್ಕಾಗಿ ಸಿದ್ದರಾಮಯ್ಯ ಪ್ರಭಾವಿ ನಾಯಕ S. P ನಾಗರಾಜಗೌಡನನ್ನು ಬಿಟ್ಟು ಗೋಣಿ ಮಾಲತೇಶ್ಗೆ ಟಿಕೆಟ್ ಕೊಡಿಸಲಾಯ್ತು. ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ನಾಗರಾಜಗೌಡ 70,802 ಮತಗಳನ್ನು ಪಡೆಯುವ ಮೂಲಕ ವಿಜಯೇಂದ್ರ ಗೆಲುವಿಗೆ ಕಠಿಣ ಸವಾಲು ಒಡ್ಡಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಕೇವಲ 8,101 ಮತಗಳನ್ನು ಪಡೆದಿದ್ದರು. ಒಂದು ವೇಳೆ ಕಾಂಗ್ರೆಸ್ ನಾಗರಾಜಗೌಡಗೆ ಟಿಕೆಟ್ ನೀಡಿದ್ದರೆ, ಖಂಡಿತ ವಿಜಯೇಂದ್ರ ಗೆಲುವು ಸಾಧ್ಯವಾಗ್ತಿರಲಿಲ್ಲ ಎನ್ನುವುದು ಕ್ಷೇತ್ರದ ಜನರ ಮಾತು. ಇನ್ನು ಇದೇ ರೀತಿ ಸಾಕಷ್ಟು ಕ್ಷೇತ್ರಗಳಲ್ಲಿ ಇದೇ ರೀತಿ ಹೊಂದಾಣಿಕೆ ಆಗಿತ್ತು ಅಂತಾ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಆದರೆ ವರದಿ ಬಳಿಕ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಯಡಿಯೂರಪ್ಪ ಮೇಲೆ ಯಾವ ಕ್ರಮ ತೆಗೆದುಕೊಳ್ತಾರೆ ಅನ್ನೋದೇ ಯಕ್ಷಪ್ರಶ್ನೆ ಆಗಿದೆ.
ಕೃಷ್ಣಮಣಿ