ಬೆಂಗಳೂರಲ್ಲಿ ಭಾರೀ ಸದ್ದು ಮಾಡಿದ್ದ IMA ಹಗರಣದಲ್ಲಿ ಸಿಲುಕಿದ್ದ IPS ಅಧಿಕಾರಿಗೆ ಕಾಂಗ್ರೆಸ್ ಸರ್ಕಾರ ಕ್ಲೀನ್ ಚಿಟ್ ನೀಡುವ ಕೆಲಸ ಮಾಡುತ್ತಿದೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ ಪ್ರಕಾರ IPS ಅಧಿಕಾರಿ ಅಜೆಯ್ ಹಿಲೋರಿ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲು ಸಕಲ ತಯಾರಿಗಳು ಆಗಿವೆ ಎನ್ನಲಾಗ್ತಿದೆ. ಐ ಮಾನಿಟರಿ ಅಡ್ವೈಸರಿ (IMA) ಸಂಸ್ಥೆ ವಿರುದ್ಧ ಸಾವಿರಾರು ಜನರು ದೂರು ಸಲ್ಲಿಕೆ ಮಾಡಿದ ವೇಳೆ ಐಎಂಎ ಸಂಸ್ಥೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ಮಾಡಲಾಗಿತ್ತು. ಸಿಬಿಐ ಅಧಿಕಾರಿಗಳು IPS ಅಧಿಕಾರಿ ಅಜಯ್ ಹಿಲೋರಿ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ವಿಚಾರಣೆ ನಡೆಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಕ್ಲೀನ್ ಚಿಟ್ ನೀಡಲು ತಯಾರಿ ನಡೆದಿದೆ ಎನ್ನಲಾಗ್ತಿದೆ.
ಅಜಯ್ ಹಿಲೋರಿ ಮೇಲಿನ ಆರೋಪ ಏನು..?
ಬೆಂಗಳೂರಿನಲ್ಲಿ ಸಂಸ್ಥೆ ತೆರೆದು ಸಾವಿರಾರು ಜನರಿಗೆ ವಂಚನೆ ಮಾಡಿರುವ ಐಎಂಎ ಪ್ರಕರಣದಲ್ಲಿ ತನಿಖೆಗೆ ನಿಯೋಜನೆ ಮಾಡಿದ ವೇಳೆ ಐಎಂಎ ಸಂಸ್ಥೆ ಪರವಾಗಿ ವರದಿ ನೀಡಿರುವ ಆರೋಪ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಮೇಲಿದೆ. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ ತಂಡ, ಅಜಯ್ ಹಿಲೋರಿ ವಿರುದ್ಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಕಂಪನಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದ ಬಳಿಕ ಕರ್ನಾಟಕ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಿದಾಗ ವಂಚನೆ ಮಾಡಿದ್ದು ಬಯಲಾಗಿತ್ತು. ಆದರೂ ಸಾಕ್ಷ್ಯಗಳನ್ನು ಮುಚ್ಚಿಟ್ಟು ಐಎಂಎ ಕಂಪನಿ ಪರವಾಗಿ ಪ್ರಕರಣವನ್ನು ಮುಕ್ತಾಯ ಮಾಡಿದ್ದರು ಎನ್ನುವುದು ಸಿಬಿಐ ಚಾರ್ಜ್ಶೀಟ್ನಲ್ಲಿ ಬಯಲಾಗಿತ್ತು. ಸಾವಿರಾರು ಜನರಿಗೆ ವಂಚನೆ ಮಾಡಿರುವುದು ಬಯಲಾದರೂ ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಕೆ ಮಾಡಿದ್ದರು ಎನ್ನುವುದನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.
ಕಿಕ್ಬ್ಯಾಕ್ ಪಡೆದಿದ್ದ ಆರೋಪವೂ ಹಿಲೋರಿ ಮೇಲಿದೆ..!
ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ರಮೇಶ್ ನೀಡಿದ್ದ ವರದಿಯನ್ನು ಅಜಯ್ ಹಿಲೋರಿ ಮುಚ್ಚಿಟ್ಟಿದ್ದರು ಅನ್ನೋ ಆರೋಪವೂ ಇದೆ. ಐಎಂಎ ಸಂಸ್ಥೆ ಪರವಾಗಿ ವರದಿ ನೀಡಿ, ಸಂಕಷ್ಟದಿಂದ ಪಾರು ಮಾಡಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ, ಐಎಂಎ ಸಂಸ್ಥೆಯಿಂದ ಸಾಕಷ್ಟು ಬಾರಿ ಹಣ, ಪೀಠೋಪಕರಣಗಳ ಬಿಲ್ ಪಾವತಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಪ್ರಯೋಜನ ಪಡೆದಿದ್ದರು ಎನ್ನುವುದು ಚಾರ್ಜ್ಶೀಟ್ನಲ್ಲಿ ಸೇರಿತ್ತು. ಆ ಬಳಿಕ ತನಿಖೆಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಇದೇ ಕೇಸ್ನಲ್ಲಿ ಮಾಜಿ ಶಾಸಕ ರೋಷನ್ ಬೇಗ್, ಹಾಲಿ ಸಚಿವ ಸಚಿವ ಜಮೀರ್ ಅಹ್ಮದ್ ಖಾನ್, ಐಎಎಸ್ ಅಧಿಕಾರಿ ವಿಜಯ್ ಶಂಕರ್ ಸೇರಿದಂತೆ 28 ಜನ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿತ್ತು.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ಬಹುಪರಾಕ್..!?
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪದ ಮೇಲೆಯೇ ಕಾಂಗ್ರೆಸ್ ಬಿಜೆಪಿ ಮೇಲೆ ಸವಾರಿ ಮಾಡಿತ್ತು. ಆದರೆ ಇದೀಗ ಭ್ರಷ್ಟಾಚಾರ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಅಧಿಕಾರಿಗಳನ್ನು ಕಾನೂನು ಕುಣಿಕೆಯಿಂದ ಬಿಡಿಸುವ ಕೆಲಸ ಮಾಡಲಾಗ್ತಿದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ. ಇ ಮಾಹಿತಿ ಸುಳ್ಳಾಗಲಿ ಅನ್ನೋದು ಪ್ರತಿಧ್ವನಿ ಆಶಯ. ಒಂದು ವೇಳೆ ಈ ಮಾಹಿತಿಯೇ ಸತ್ಯವಾದರೆ ಕಾಂಗ್ರೆಸ್ ಸರ್ಕಾರ ಕೂಡ ಭ್ರಷ್ಟಾಚಾರಕ್ಕೆ ಸಾಥ್ ಕೊಟ್ಟಂತಡೆ ಆಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ಭ್ರಷ್ಟಾಚಾರಕ್ಕೆ ಸಾಥ್ ಕೊಟ್ಟವರನ್ನು ಸರಿಯಾದ ಜಾಗಕ್ಕೆ ಕಳುಹಿಸುತ್ತಾರೆ ಎನ್ನುವುದನ್ನು ನಾವು ಹೇಳಬೇಕಿಲ್ಲ. ಈ ವದಂತಿ ವಿಚಾರದ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ನೀಡಿದರೆ ಎಲ್ಲದ್ದಕ್ಕೂ ತೆರೆ ಬೀಳಲಿದೆ ಎನ್ನಬಹುದು.
ಕೃಷ್ಣಮಣಿ