ವಚನ ಚಳುವಳಿಯ ನಾಯಕ ಬಸವಣ್ಣನವರ ಮೂಲ ಆಶಯವು ಅಂದಿನ ಸಾಮಾಜಿಕ ಅವ್ಯವಸ್ಥೆಯನ್ನು ಸರಿಪಡಿಸಿˌ ಧಾರ್ಮಿಕ ಮೌಢ್ಯಗಳನ್ನು ಕಿತ್ತೆಸೆಯುವ ಮೂಲಕ ಒಂದು ಸಮಗ್ರ ಜನಪರ ಸಿದ್ಧಾಂತವನ್ನು ಆಚರಣೆಯಲ್ಲಿ ತರುವುದಾಗಿತ್ತು. ಜೀವನ್ಮುಖಿ ತುಡಿತಗಳೆ ತುಂಬಿರುವ ಬಸವವಾದವನ್ನು ಸಾಮಾಜಿಕ ತತ್ವಶಾಸ್ತ್ರ (social philosophy) ಎಂದು ಹೇಳಬಹುದು. ಸಾಮಾಜಿಕ ತತ್ವಶಾಸ್ತ್ರವೆಂದರೆ ಸಮಾಜದೊಳಗಿನ ಹಲವು ಘಟಕಗಳುˌ ಘಟನೆಗಳುˌ ಸಂಘ-ಸಂಸ್ಥೆಗಳುˌ ಹಾಗೂ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಕುರಿತ ಸಮಗ್ರ ಅಧ್ಯಯನ ಶಾಸ್ತ್ರ. ಉದಾಹರಣೆಗೆ ಸಮಾಜದಲ್ಲಿ ಚಲಾವಣೆಯಲ್ಲಿರುವ ಮದುವೆˌ ಸಂಸಾರˌ ಕುಟುಂಬˌ ವ್ಯಾಪಾರˌ ರಾಜ್ಯಭಾರˌ ಕಾನೂನುˌ ಮುಂತಾದ ಸಂಗತಿಗಳು. ಮೇಲೆ ಹೆಸರಿಸಿದ ಈ ವ್ಯವಸ್ಥೆಗಳು ಯಾವುದೇ ಪ್ರಾಕೃತಿಕ ಕಾರಣಗಳಿಂದ ಹುಟ್ಟಿದವುಗಳಲ್ಲ.
ಇವೆಲ್ಲವೂ ಮನುಷ್ಯನು ತನ್ನ ಸಾಮಾಜಿಕ ಸಂಬಂಧಗಳನ್ನು ಸ್ಥಾಪಿಸಿˌ ಕ್ರಮಬದ್ಧ ಜೀವನ ನಡೆಸಲು ಹುಟ್ಟುಹಾಕಿದ ಕೃತಕ ವ್ಯವಸ್ಥೆಗಳು. ಹಾಗಾಗಿˌ ಮಾನವ ಸೃಷ್ಟಿಸಿರುವ ಈ ವ್ಯವಸ್ಥೆಗಳ ಹಿಂದಿರುವ ತರ್ಕˌ ಇವು ಬದಲಾಗುವುದಕ್ಕೆ ಇರುವ ಕಾರಣಗಳುˌ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಈ ವ್ಯವಸ್ಥೆಗಳ ವಿಭಿನ್ನತೆಯ ಹಿಂದಿರುವ ಕಾರಣಗಳುˌ ನಮ್ಮ ನಿತ್ಯದ ಬದುಕಿನ ಆಯ್ಕೆಗಳಿಗುˌ ಈ ಸ್ಥಾಪಿತ ವ್ಯವಸ್ಥೆಗಳೊಂದಿಗೆ ಇರುವ ಸಂಬಂಧಗಳುˌ ಈ ವ್ಯವಸ್ಥೆಗಳಿಗೂ ಮನುಷ್ಯನ ಸಾಂಸ್ಕೃತಿಕ ಬಳುವಳಿಗಳಾದ ಕಲೆˌ ಧರ್ಮˌ ಇತಿಹಾಸˌ ಇವೆಲ್ಲವುಗಳ ನಡುವೆ ಇರುವ ಸಂಬಂಧಗಳುˌ ಹೀಗೆ ಈ ತರಹದ ಎಲ್ಲ ಗೊಂದಲಗಲಿಗೆ ಒಂದು ಸಮಗ್ರ ಮತ್ತು ಸಿದ್ಧಾಂತ ರೂಪಿಯಾದ ವಿವರಣೆಯ ಅಗತ್ಯ ಬಸವಪೂರ್ವದಲ್ಲಿ ಗೌತಮ ಬುದ್ಧನಿಗೂ ಕಾಡಿರಬಹುದು. ಸಾಮಾನ್ಯವಾಗಿ ಮನುಧರ್ಮದಲ್ಲಿ ಇಂತಹ ಪ್ರಶ್ನೆಗಳು ಪ್ರಸ್ತುತವಾಗುವುದಿಲ್ಲ. ಸನಾತನ ಮನುಧರ್ಮದಲ್ಲಿ ಪ್ರಶ್ನಿಸುವುದೇ ನಿಷಿದ್ಧ.
ನಮ್ಮ ಸುತ್ತಲಿನ ವಾಸ್ತವ ಪರಿಸ್ಥಿತಿಯನ್ನು ಕೂಲಂಕುಶವಾಗಿ ಅವಲೋಕಿಸಿˌ ಅದಕ್ಕನುಗುಣವಾಗಿ ನಾವು ಹೇಗಿಬೇಕು ಎನ್ನುವ ಎಥಿಕ್ಸ್‌ನ ಚರ್ಚೆ ಮುಖ್ಯವಾಗಿತ್ತೆ ವಿನಃ ಸಾಮಾಜಿಕ ವ್ಯವಸ್ಥೆಗಳು ಹೇಗಿವೆಯೋ ಹಾಗೆ ಯಾಕೆ ಇವೆ ಎನ್ನುವ ಋಣಾತ್ಮಕವಾದˌ ಅಂದರೆ ಮೂಲಶೋಧಕವಾದ ಚಿಂತನೆ ಬಹುಶಃ ಅಂದು ಯಾರೂ ಮಾಡಿರಲಿಲ್ಲ. ಈ ಕುರಿತು ಮೊದಲು ಚಿಂತಿಸಿದ್ದು ಗೌತಮ ಬುದ್ಧ. ಆದರೆ ಭಾರತೀಯರು ಜನ್ಮತಃ ಆಸ್ತಿಕರಾಗಿರುವುದರಿಂದ ಮನುಪ್ರಣೀತ ವೈದಿಕ ವ್ಯವಸ್ಥೆಯು ದೇವರಲ್ಲಿನ ನಂಬಿಕೆಯ ತಳಹದಿಯಲ್ಲಿ ರೂಪುಗೊಂಡು ಸಾಮಾಜಿಕ ಶೋಷಣೆಯಲ್ಲಿ ತೊಡಗಿಕೊಂಡಿತ್ತು. ಇದರ ನಡುವೆಯೂ ಬುದ್ಧ ಪ್ರಣೀತ ಪ್ರಗತಿವಾದ ದೇವರ ಬಗೆಗಿನ ತನ್ನ ತಟಸ್ಥ ನಿಲುವಿನಿಂದ ಜನರಲ್ಲಿ ಅಂತಹ ಒಂದು ಸುಸ್ಥಿರ ವೈಚಾರಿಕ ಪ್ರಜ್ಞೆ ನೆಲೆಗೊಳಿಸುವಲ್ಲಿ ಸಂಪೂರ್ಣವಾಗಿ ಸಫಲವಾಗಲಿಲ್ಲ. ಅದಕ್ಕೆ ಕಾರಣ ದೇವರ ಕುರಿತು ಬೌದ್ಧರಲ್ಲಿನ ತಟಸ್ಥ ನಿಲುವು.
ಬುದ್ಧನ ನಂತರ ಮತ್ತು ಬಸವಯುಗದ ಮಧ್ಯದ ಕಾಲಾವಧಿಯಲ್ಲಿ ವೈದಿಕರು ಸ್ಥಾಪಿಸಿದ ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶಿಸುವ ಮತ್ತು ವಿವರಿಸುವ ಮತ್ತೊಂದು ಸಾಂಘಿಕ ಪ್ರಯತ್ನ ಈ ನೆಲದಲ್ಲಿ ಘಟಿಸಲೇಯಿಲ್ಲ. ಇಲ್ಲಿ ವೈದಿಕರು ಸುಸ್ಥಿರವಾಗಿ ನೆಲೆಗೊಳಿಸಿದ್ದ ಸ್ಥಾಪಿತ ಲಭ್ಯ ಸಿದ್ಧಾಂತವಾದ ದೈವ ಪ್ರೇರಣೆಯ ಸಿದ್ದಾಂತವು ಜನಮನದಲ್ಲಿ ಆಳವಾಗಿ ಬೇರೂರಿತ್ತು. ಈ ದೈವ ಪ್ರೇರಣೆ ಕೇಂದ್ರಿತ ಸಿದ್ದಾಂತದ ಪ್ರಕಾರ ಪ್ರಪಂಚ ಹುಟ್ಟಿರುವುದೇ ದೇವನ ಇಚ್ಛೆಯಿಂದ ಹಾಗು ಇಲ್ಲಿನ ಪ್ರತಿಯೊಂದು ಚಟುವಟಿಕೆಗಳು ದೇವನ ಪ್ರೇರಣೆಯಿಂದಲೆ ನಡೆಯುತ್ತವೆ ಎನ್ನುವುದು. ಇಂತಹುದೆ ಸ್ಥಾಪಿತ ಸಿದ್ಧಾಂತವು ಮುಂದೆ ಕ್ರಿಶ್ಚಿಯನ್ ಧರ್ಮದಲ್ಲೂ ಮಿ. ಆಗಸ್ಟೀನ್ ಪ್ರತಿಪಾದಿಸಿದ್ದ. ಈ ಸಿದ್ಧಾಂತಕ್ಕೆ ಆಗಸ್ಟೀನ್ ಕೊಟ್ಟ ಹೆಸರು ಮತ್ತು ಅದೇ ಹೆಸರಿನ ಅವನ ಪುಸ್ತಕ “ದಿ ಸಿಟಿ ಆಫ್ ಗಾಡ್” (The City of God). ಹೀಗೆ ಜಗತ್ತಿನಾದ್ಯಂತ ದೇವ ಕೇಂದ್ರಿತ ಸಿದ್ಧಾಂತಗಳೆ ಮೆರೆದಾಡುತ್ತಿದ್ದವು.
ಅಂದು ವೈದಿಕರು ಪ್ರತಿಪಾದಿಸಿದ ಸ್ಥಾಪಿತ ಆದರ್ಶಗಳ ಅಡಿಯಲ್ಲೇ ಸಾಮಾನ್ಯ ಜನರು ತಮ್ಮ ಬದುಕನ್ನು ರೂಪಿಸಿಕೊಳ್ಳುವುದು ಮತ್ತು ಸಾಮಾಜಿಕ ವ್ಯವಸ್ಥೆಯ ಸಿದ್ಧಾಂತವನ್ನು ಅರ್ಥೈಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ವೈದಿಕರು ಹುಟ್ಟುಹಾಕಿದ ಸ್ಥಾಪಿತ ಆದರ್ಶಗಳ ಮೇಲೆ ಮಾತ್ರ ಸಾಮಾಜಿಕ ರೀತಿರಿವಾಜುಗಳನ್ನು ವಿಮರ್ಶಿಸುವ ಮತ್ತು ವ್ಯಾಖ್ಯಾನಿಸುವ ಪರಂಪರೆ ನಮ್ಮಲ್ಲಿ ಬೆಳೆಯಿತೆ ಹೊರತು ಅದಕ್ಕೆ ಪರ್ಯಾಯವಾಗಿ ಅಧುನಿಕ ಮತ್ತು ವೈಚಾರಿಕ ಚಿಂತನೆಗಳ ಆಧಾರದ ಮೇಲೆ ಯೋಚಿಸುವುದಕ್ಕೆ ಜಾಗವಿರಲಿಲ್ಲ. ಸ್ವತಂತ್ರ ಚಿಂತನೆ ಮತ್ತು ವೈಜ್ಞಾನಿಕ ಆಲೋಚನೆಗಳ ಅಭಿವ್ಯಕ್ತಿಗೆ ಅಂದು ನಮ್ಮ ನೆಲದಲ್ಲಿ ಕರ್ಮಟರು ಅನುಮತಿಸಲಿಲ್ಲ. ಆ ದೆಶೆಯಿಂದ ವೈದಿಕ ಸ್ಥಾಪಿತ ಆದರ್ಶಗಳನ್ನು ನೆಲೆಗೊಳಿಸಲು ಮುಂದೆ ಅನೇಕ ಕಾಲ್ಪನಿಕ ಪುರಾಣಗಳುˌ ಮಹಾಕಾವ್ಯಗಳು ರೂಪುದಳೆದವು.
ಮನುಷ್ಯನ ವೈಚಾರಿಕ ದೃಷ್ಟಿಕೋನ ವಿಸ್ತಾರಗೊಂಡಂತೆಲ್ಲ ಈ ಸ್ಥಾಪಿತ ವೈದಿಕ ಆದರ್ಶಗಳನ್ನು ವೈಚಾರಿಕತೆಯ ಆಧಾರದಲ್ಲಿ ವಿಮರ್ಶಿಸಿದಾಗ ಅವುಗಳ ಟೊಳ್ಳುತನˌ ನಿಕೃಷ್ಟತೆ ಮತ್ತು ಜೀವವಿರೋಧಿ ಮುಖ ಬಯಲಾಯಿತು. ಸನಾತನ ವೈದಿಕರು ರೂಪಿಸಿದ ಸ್ಥಾಪಿತ ಆದರ್ಶಗಳು ಆಧುನಿಕ ವಿಜ್ಞಾನದ ಯೋಚನೆಗಳಿಗೆ ಅನುಗುಣವಲ್ಲ ಎನ್ನುವುದು ಗೊತ್ತಾಯಿತು. ವೈದಿಕ ಸಿದ್ಧಾಂತಗಳು ಅತ್ಯಂತ ಅಸೂಕ್ಷ್ಮವಾಗಿದ್ದು ಅವು ಇಂದಿನ ಹಲವಾರು ವಿಕೃತ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳಿಗೆ ಜನ್ಮ ನೀಡಿದವು. ವೈದಿಕ ಸ್ಥಾಪಿತ ಸಿದ್ದಾಂತಗಳು ಈ ಸಮಾಜದಲ್ಲಿ ಬದುಕುವ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವುದಷ್ಟೆ ಅಲ್ಲದೆ ಆತ ಆಸ್ತಿಯನ್ನು ಹೊಂದಬಹುದೆ ಎನ್ನುವುದನ್ನು ˌ ಆತ ಕಾರ್ಪೋರೇಟ್ ವ್ಯಕ್ತಿತ್ವ ರೂಪಿಸಿಕೊಳ್ಳಲು ಇರುವ ಅವಕಾಶಗಳು ಮತ್ತು ಅಡೆತಡೆಗಳುˌ ಮೂಲಭೂತ ಹಕ್ಕುಗಳ ನೀಡಿಕೆ ಅಥವಾ ನಿರಾಕರಣೆಯನ್ನು ನಿರ್ಧರಿಸುತ್ತಿದ್ದವು.
ವ್ಯಕ್ತಿಯೋರ್ವನಿಗೆ ರಾಜ್ಯಾಧಿಕಾರ ನಿಷೇಧಿಸುವಿಕೆ ಅಥವಾ ಹೊಂದುವಿಕೆˌ ಸಹಜ ಕಾನೂನುಗಳ ನಿರಾಕರಣೆ (refusing of natural law)ˌ ಶಿಷ್ಟ ನೀತಿಶಾಸ್ತ್ರಗಳ ಹೇರುವಿಕೆ (imposing of normative ethics)ˌ ಇಂತಹ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ವೈದಿಕ ಸಿದ್ಧಾಂತಗಳು ಬಸವಾದಿ ಶರಣರು ಪ್ರತಿಪಾದಿಸಿದ ಸಿದ್ಧಾಂತಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದ್ದವು. ಅಂದು ಬಸವಾದಿ ಶರಣರು ಪ್ರತಿಪಾದಿಸಿರುವ ಚಿಂತನೆಗಳು ಇಂದಿನ ಅಧುನಿಕ ಪ್ರಜಾಪ್ರಭುತ್ವವಾದಿ ಚಿಂತನೆಗಳಿಗೆ ಪೂರ್ವಭಾವಿಯಾಗಿ ರೂಪಿತವಾಗಿರುವುದು ಸ್ಪಷ್ಟ. ಕಾಲಾನಂತರದಲ್ಲಿ ಯುರೋಪ್ ಮತ್ತು ಪಶ್ಚಿದಲ್ಲಿ ಹುಟ್ಟಿದ ಅಧುನಿಕ ಜನತಂತ್ರವಾದಕ್ಕೆ ಮೂಲ ಪ್ರೇರಣೆ ಬಸವಾದಿ ಶರಣರು ಪ್ರತಿಪಾದಿಸಿದ ಸಿದ್ಧಾಂತವೆ ಆಗಿತ್ತು. ಶರಣರ ಅನುಭವ ಮಂಟಪ ಪರಿಕಲ್ಪನೆಯು ಇಂದಿನ ಬಹುತೇಕ ಅಧುನಿಕ ರಾಷ್ಟ್ರಗಳು ಅಂಗೀಕರಿಸಿದ ಸಂವಿಧಾನ ಹಾಗು ಸಂಸದೀಯ ವ್ಯವಸ್ಥೆಯ ಮೂಲ ಬೇರು ಅಂದರೆ ತಪ್ಪಾಗಲಾರದು.
ಮುಂದುವರೆಯುವುದು….