ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಡ್ಜಸ್ಟ್ ಮೆಂಟ್ ರಾಜಕೀಯದ ಬಗ್ಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರೇ ಮಾತನಾಡಿದ್ದಾರೆ! ಈ ಸರಕಾರ ಆ ಬಗ್ಗೆ ತನಿಖೆ ಮಾಡಿಸುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.ಪಕ್ಷದ ಕಚೇರಿ ಮಾಧ್ಯಮಗಳ ಜತೆ ಮಾತನಾಡುವ ವೇಳೆ ಈ ಪ್ರಶ್ನೆ ಎತ್ತಿದ ಮಾಜಿ ಮುಖ್ಯಮಂತ್ರಿ ಅವರು; ಹಿಂದಿನ ಸರಕಾರದ ಎಲ್ಲ ನಿರ್ಧಾರಗಳನ್ನು ಈಗಿನ ಸರಕಾರ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಹಾಗಾದರೆ, ಚುನಾವಣಾ ಒಳಒಪ್ಪಂದದ ಬಗ್ಗೆಯೂ ತನಿಖೆ ಮಾಡಿಸಬೇಕಲ್ಲವೇ ಎಂದರು.
ಸಿಟಿ ರವಿ ಒಂದು ಹೇಳಿಕೆ ಗಮನಿಸಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಕಾಂಗ್ರೆಸ್ ನಾಯಕರನ್ನು ಕೇಳುತ್ತೇನೆ ಯಾವ ಜತೆ ಒಪ್ಪಂದ ಮಾಡಿಕೊಂಡಿದ್ದಿರಿ, ನಮ್ಮನ್ನು ಬಿಜೆಪಿ ಬೀ ಟೀಮ್ ಎಂದು ಹೇಳುತ್ತಿದ್ದವರು ನೀವು. ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ. ಅದು ಸತ್ಯವಾಗಿದೆ. ಈಗ ಹೇಳಿ ನೀವು ಯಾವ ಟೀಮ್? ನೀವು ಇದನ್ನು ತನಿಖೆ ಮಾಡಿಸುತ್ತೀರಾ? ಎಂದು ಅವರು ಕೇಳಿದರು.
ನಾವು ಯಾವ ಪಕ್ಷದ ಜತೆಯೂ ಒಪ್ಪಂದ ಮಾಡಿಕೊಳ್ಳದೆ 20 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಎಂದು ಅವರು ಪರ್ಷೆಯೊಂದಕ್ಕೆ ಉತ್ತರ ನೀಡಿದರು.
ಬೆಂಗಳೂರು ಘಟಕದ ಸಭೆ:
ಪಕ್ಷದ ಸಂಘಟನೆ ದೃಷ್ಟಿಯಿಂದ ಬೆಂಗಳೂರು ಮಹಾನಗರದ ಮುಖಂಡರ ಸಭೆಯನ್ನು ಮಾಜಿ ಮುಖ್ಯಮಂತ್ರಿಗಳು ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು; ಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯುವಕರಿಗೆ ಶಕ್ತಿ ತುಂಬು ಕೆಲಸ ಮಾಡುತ್ತಿದ್ದೇನೆ. ಪಕ್ಷ ಸಂಘಟನೆಯಲ್ಲಿ ಭಾಗಿಯಾಗದವರನ್ನು ಪಕ್ಷದಿಂದ ತೆಗೆಯುತ್ತೇವೆ. ಅರ್ಹತೆ ಆಧಾರ ಮತ್ತು ಸಮುದಾಯದ ಆಧಾರದ ಮೇಲೆ ನಾನು ಅಧಿಕಾರ ಹೊಣೆಗಾರಿಕೆ ಕೊಡುತ್ತೇವೆ ಎಂದರು.
ಮುಂದಿನ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಮುಖಂಡರ ಜತೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಯಶವಂತಪುರದ ಅಭ್ಯರ್ಥಿ ಜವರಾಯಿ ಗೌಡ ಸೇರಿದಂತೆ ಬೆಂಗಳೂರು ನಗರದ ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.