ನಾನು ಶಾಸಕ ಆಗ್ಬೇಕು ಅನ್ನೋ ಆಸೆ ರಾಜಕಾರಣಿಗಳಿಗೆ ಇರುವುದು ಸಾಮಾನ್ಯ. ಶಾಸಕನಾದವನು ಮಂತ್ರಿ ಆಗ್ಬೇಕು ಅನ್ನೋದು, ಮಂತ್ರಿ ಆದವನಿಗೆ ಮುಖ್ಯಮಂತ್ರಿ ಆಗ್ಬೇಕು ಅನ್ನೋ ಆಸೆ ಸಹಜ. ಅದೇ ರೀತಿ ಮೂರ್ನಾಲ್ಕು ದಶಕಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ಡಿಸಿಎಂ ಸಿ.ಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಸಹಜ ಕೂಡ. ಅದೂ ಅಲ್ಲದೆ ಈ ಬಾರಿ 2023ರ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿಕೊಂಡು ಅಭೂತಪೂರ್ವ ಗೆಲುವು ಪಡೆಯಲು ಡಿ.ಕೆ ಶಿವಕುಮಾರ್ ಕೂಡ ಕಾರಣಕರ್ತ. ಈ ಮಾತನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಿದ್ದರೂ ಸಿಎಂ ಸ್ಥಾನ ಪಡೆಯಲು ಪ್ರಯತ್ನ ಮಾಡಬಹುದು. ನನ್ನ ಹಾಗೆ ಡಿಕೆ ಶಿವಕುಮಾರ್ ಕೂಡ ಆಕಾಂಕ್ಷಿ ಆಗಿರುವುದು ತಪ್ಪೇನು ಅಲ್ಲ ಎಂದಿದ್ದರು. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಇದು ಸಿದ್ದರಾಮಯ್ಯ ಅತ್ಯಾಪ್ತ ಬಳಗದ ಕಣ್ಣು ಕೆಂಪಾಗಿಸಿದೆ.
ಶನಿವಾರ ಸ್ವಕ್ಷೇತ್ರ, ಹುಟ್ಟೂರಲ್ಲಿ ಡಿಕೆಶಿ ಸಿಎಂ ಸಂಚಲನ..!


ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದ ಡಿ.ಕೆ ಶಿವಕುಮಾರ್, ಅಲ್ಲಲ್ಲಿ ಬಹಿರಂಗ ಭಾಷಣ ಮಾಡಿದ್ದರು. ನಾನು ಸಿಎಂ ಆಗುತ್ತೇನೆ ಎನ್ನುವ ಭಾವನೆಯನ್ನು ಹಳೇ ಮೈಸೂರು ಭಾಗದಲ್ಲಿ ಇರಿಸಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ಅವರು ಕೆಲವೊಂದು ನಿರ್ಧಾರ ಮಾಡಿದ್ದಾರೆ. ಆ ಕಾರಣಕ್ಕಾಗಿ ನಾನು ಡಿಸಿಎಂ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದರು. ಜೊತೆಗೆ ನಿಮ್ಮ ಆಸೆಯಂತೆ ನಾನು ಸಿಎಂ ಆಗುವ ಸಮಯವೂ ಬರುತ್ತದೆ ಎನ್ನುವ ಮೂಲಕ ಅಧಿಕಾರ ಹಂಚಿಕೆ ಆಗಿದೆ ಅನ್ನೋದನ್ನು ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದರು. ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಮಾತನಾಡಿದ್ದ ಡಿ.ಕೆ ಶಿವಕುಮಾರ್, ನಿಮಗೆಲ್ಲ ನಾನು ಸಿಎಂ ಆಗಬೇಕು ಎಂಬ ಆಸೆ ಇತ್ತು. ಅಧಿಕಾರ ನಶ್ವರ, ನಾವು ಮಾಡುವ ಕೆಲಸ ಅಜರಾಮರ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ, ಅವಕಾಶ ಸಿಗುತ್ತೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ನಾನೇ ಅಂತಾ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ಬಣ ಟಾಂಟ್ ಕೊಡುವ ಕೆಲಸ ಮಾಡಿದೆ.
ಕ್ಯಾಬಿನೆಟ್ ಸಚಿವರನ್ನೇ ಬಳಸಿಕೊಂಡ್ರಾ ಸಿದ್ದರಾಮಯ್ಯ..?

ಕನಕಪುರದಲ್ಲಿ ನಾನು ಮುಂದಿನ ಮುಖ್ಯಮಂತ್ರಿ ಅನ್ನುತ್ತಿರುವಾಗಲೇ ಅತ್ತ ಮಂಡ್ಯದಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಸಿಎಂ ಆಗದೆ ಇರುವುದಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ಬೇಸರ ಇಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಜವಾಬ್ದಾರಿ ಅವರ ಮೇಲಿತ್ತು. ಡಿ.ಕೆ ಶಿವಕುಮಾರ್ ಸೇರಿ ಒಟ್ಟು 34 ಜನರಿಗೂ ಸಿದ್ದರಾಮಯ್ಯ ಸಿಎಂ ಆಗಿರೋದು ಸಂತೋಷ ಇದೆ. ನಾವು 34 ಜನರೂ ಮುಖ್ಯಮಂತ್ರಿಗಳೇ ಎಂದಿರುವ ಚಲುವರಾಯಸ್ವಾಮಿ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸ್ತೀವಿ ಎಂದಿದ್ದಾರೆ. ಅತ್ತ ಯಾದಗಿರಿಯಲ್ಲಿ ಮಾತನಾಡಿರುವ ಸಚಿವ ಶರಣಬಸಪ್ಪ ದರ್ಶನಾಪುರ, ಕಾಂಗ್ರೆಸ್‌ನಲ್ಲಿ ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ. ಎಲ್ಲಾದ್ರೂ ಬರವಣಿಗೆಯಲ್ಲಿ ನೋಡಿದ್ದೀರಾ..? ಡಿ.ಕೆ ಶಿವಕುಮಾರ್ ಎಲ್ಲಾದ್ರೂ ಅಧಿಕಾರ ಹಂಚಿಕೆ ಬಗ್ಗೆ ಹೇಳಿದ್ದಾರಾ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.
ಉತ್ತಮ ಕೆಲಸ ಮಾಡಿದ್ರೆ 2028ಕ್ಕೆ ಡಿಕೆಶಿ ಫಿಕ್ಸ್..!

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅನ್ನೋದು ಒಕ್ಕಲಿಗ ಸಮುದಾಯದ ಭಾವನೆ ಇರಬಹುದು. ಆದರೆ ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಅವರ ಒರಟುತನ ಕೆಲವರ ವಿರೋಧಕ್ಕೂ ಕಾರಣ ಆಗಿರಬಹುದು. ಈ ಬಾರಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿ ಸೈ ಎನಿಸಿಕೊಂಡರೆ ಮುಂಬರುವ 2028ರ ವಿಧಾನಸಭೆಯಲ್ಲಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಪರಿಗಣನೆ ಆಗಬಹುದು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಮಾತು. ಈ ಅವಧಿಯಲ್ಲೇ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಆಗುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಬೆಂಬಲಿಗರು ಒಪ್ಪಲು ತಯಾರಿಲ್ಲ. ಹೀಗಾಗಿ ಡಿ.ಕೆ ಶಿವಕುಮಾರ್ 2028ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಟ್ಟಿಕೊಳ್ಳಬಹುದು. ಅಥವಾ ಕೊನೆಯ ವರ್ಷ ಚುನಾವಣೆಗೆ ಹೋಗುವುದಕ್ಕೆ ಉತ್ಸಾಹ ಬರಲಿ ಅನ್ನೋ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಅನ್ನೋ ಮಾತುಗಳು ಕೇಲಿ ಬರುತ್ತಿವೆ. ಕಾಂಗ್ರೆಸ್ ಉತ್ತಮ ಆಡಳಿತ ಭರವಸೆ ನಡುವೆ ಮುಖ್ಯಮಂತ್ರಿ ಹುದ್ದೆ ಕಿತ್ತಾಟ ಆಗಾಗ ನಡೆಯುತ್ತಿರೋದು ಮಾತ್ರ ಖಚಿತ.
ಕೃಷ್ಣಮಣಿ