ರಾಜ್ಯ ಸರ್ಕಾರದ ಗ್ಯಾರಂಟಿ ಇವತ್ತು ಜಾರಿ ಆಗ್ತಿಲ್ಲ. ಜೂನ್ 1 ರಂದು ಸಚಿವ ಸಂಪುಟ ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯ, ಇಂದಿನ ಸಭೆಯನ್ನು ನಾಳೆಗೆ ಮುಂದೂಡಿದ್ದಾರೆ. ಇಂದು ಪಂಚ ಗ್ಯಾರಂಟಿಗಳು ಘೋಷಣೆ ಆಗುತ್ತವೆ ಎಂದುಕೊಂಡಿದ್ದ ಜನರು ಇನ್ನೊಂದು ದಿನ ಕಾಯಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಬುಧವಾರ ನಡೆದ ಸಚಿವರು ಹಾಗು ಅಧಿಕಾರಿಗಳ ಸಭೆಯಲ್ಲಿ ಮಹತ್ವದ ಅಂಶಗಳನ್ನು ಅಧಿಕಾರಿಗಳು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಇನ್ನೂ ಒಂದಿಷ್ಟು ತಿದ್ದುಪಡಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಆ ಸಿದ್ಧತೆಗಳನ್ನು ಇವತ್ತು ಮತ್ತೊಮ್ಮೆ ಪರಿಶೀಲನೆ ನಡೆಸಲಿದ್ದು, ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಘೋಷಣೆ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
3 ಗ್ಯಾರಂಟಿಗಳಿಗೆ ಮಾತ್ರ ಸರ್ಕಾರದ ಅಸ್ತು..!
ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಘೋಷಣೆ ಮಾಡ್ತೇವೆ ಎಂದಿದ್ದ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್, ಇದೀಗ ಮೊದಲಿಗೆ ಮೂರು ಗ್ಯಾರಂಟಿಗಳನ್ನು ಮಾತ್ರ ಜಾರಿ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ಮೂರು ಯೋಜನೆಗಳನ್ನು ಜಾರಿ ಮಾಡಿ ಇನ್ನೆರಡು ಯೋಜನೆಗಳನ್ನು ನಿಧಾನವಾಗಿ ಜಾರಿ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ವಿಧಾನಸೌಧದಿಂದ ಹೊರಬಿದ್ದಿದೆ. ಮನೆಗೆ 200 ಯೂನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ, ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಉಚಿತ ಅಕ್ಕಿ ಹಾಗು ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಸರ್ಕಾರ ಅಸ್ತು ಎಂದಿದೆ. ಇನ್ನುಳೀದ ಎರಡು ಗ್ಯಾರಂಟಿಗಳನ್ನು ಪಡೆಯಲು ಇನ್ನೂ ಸ್ವಲ್ಪ ದಿನಗಳು ಕಾಯಬೇಕಾಗಿದೆ.
ಗೃಹಲಕ್ಷ್ಮೀ, ಯುವನಿಧಿ ಯೋಜನೆ ತಡ ಯಾಕೆ..?
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಘೋಷಣೆಯನ್ನು ಸದ್ಯಕ್ಕೆ ಘೋಷಣೆ ಮಾಡದಿರಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ. ಇದಕ್ಕೆ ಕಾರಣ, ಪ್ರತಿಯೊಂದು ಕುಟುಂಬದಲ್ಲಿ ಮಹಿಳೆಯರು ಇರುತ್ತಾರೆ. ಯಾರನ್ನು ಆಯ್ಕೆ ಮಾಡುವುದು ಅನ್ನೋ ಗೊಂದಲ ಶುರುವಾಗಿದೆ. ಅತ್ತೆ ಮನೆ ಯಜಮಾನಿಯೋ..? ಸೊಸೆ ಯಜಮಾನಿಯೋ ಅನ್ನೋ ಗೊಂದಲ ಎದುರಾಗಿದೆ. ಇನ್ನು ಗೃಹಲಕ್ಷ್ಮೀ ಯೋಜನೆ ಜಾರಿ ಬಳಿಕ ವಯೋವೃದ್ಧ ಮಹಿಳೆಯರಿಗೆ ಕೊಡುತ್ತಿರುವ ವೃದ್ಧಾಪ್ಯ ವೇತನ ಹಾಗು ವಿಧವಾ ವೇತನ ನಿಲ್ಲಿಸುವುದು ಸೂಕ್ತವೇ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ರೇಷನ್ ಕಾರ್ಡ್‌ನಲ್ಲಿ ಎಷ್ಟು ಜನರಿದ್ದಾರೆ, ಅದರಲ್ಲಿ ಯಾರು ಮನೆ ಯಜಮಾನಿಯಾಗಿ ಕಾಣಿಸಿಕೊಂಡಿದ್ದಾರೆ ಅವರಿಗೆ ಮಾತ್ರ 2 ಸಾವಿರ ನೀಡುವಂತೆಯೂ ಸಲಹೆಗಳು ಸರ್ಕಾರವನ್ನು ತಲುಪಿವೆ ಎನ್ನಲಾಗಿದೆ.
ಯುವನಿಧಿ ಯೋಜನೆ ಜಾರಿಯಲ್ಲೇ ಕಾಲಾವಕಾಶ ಇದೆ..
ಯುವನಿಧಿ ಯೋಜನೆಯಲ್ಲಿ ಪದವಿ ಹಾಗು ಡಿಪ್ಲೊಮಾ ಮುಗಿಸಿ ಯುವ ಜನಾಂಗಕ್ಕೆ 2 ವರ್ಷಗಳ ಕಾಲ 3 ಸಾವಿರ ಹಾಗು ಒಂದೂವರೆ ಸಾವಿರ ಸಹಾಯ ಧನ ನೀಡುವ ಘೋಷಣೆ ಮಾಡಲಾಗಿದೆ. ಪದವಿ ಅಥವಾ ಡಿಪ್ಲೊಮಾ ಮುಗಿಸಿದ ಯುವಕ, ಯುವತಿಯರು ಮುಂದಿನ 180 ದಿನಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಯುವಕರಿಗೆ 2 ವರ್ಷಗಳ ಕಾಲ ಸಹಾಯಧನ ಕೊಡಲಾಗುತ್ತದೆ. ಜೊತೆಗೆ ತರಬೇತಿ ಕೊಟ್ಟು ಕೆಲಸ ಪಡೆಯುವಂತೆ ಮಾಡುವ ಯೋಜನೆ ಜಾರಿ ಮಾಡಬೇಕಿದೆ. ಇದಕ್ಕೆ ಸೂಕ್ತ ಕಾಲಾವಕಾಶ ಬೇಕಿದೆ. ಇನ್ನು ಇದೀಗ ಪದವಿ ಮುಗಿಸಿ ಹೊರ ಬಂದಿರುವ ಯುವ ಜನಾಂಗ 180 ದಿನಗಳನ್ನು ಕಳೆಯಬೇಕಿದೆ. ಆ ಬಳಿಕವಷ್ಟೇ ಯೋಜನೆ ಜಾರಿ ಮಾಡಲಾಗುತ್ತದೆ. ಇನ್ನು ಯುವ ಜನಾಂಗಕ್ಕೆ ತರಬೇತಿ ಕೊಡುವಾಗ ಅವರನ್ನು ಹೇಗೆ ಕರೆಸಬೇಕು. ತರಬೇತಿ ಹೊಣೆಯನ್ನು ಯಾವ ಇಲಾಖೆಗೆ ವಹಿಸಬೇಕು ಅನ್ನೋ ಬಗ್ಗೆಯೂ ಚರ್ಚೆ ನಡೀತಿದೆ. ಇದೇ ಕಾರಣಕ್ಕೆ 2 ಯೋಜನೆಗಳ ಜಾರಿಗೆ ಕೊಂಚ ಸಮಯಾವಕಾಶ ಕೇಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕೃಷ್ಣಮಣಿ