ಮಂಗಳೂರು : ಬಿಹಾರದಲ್ಲಿ ಪ್ರಧಾನಿ ಮೋದಿ ದಾಳಿಗೆ ಸಂಚು ರೂಪಿಸಿದ ಪ್ರಕರಣದ ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ ಹಲವೆಡೆಗಳಲ್ಲಿ ಮನೆ, ಕಚೇರಿ ಹಾಗೂ ಒಂದು ಆಸ್ಪತ್ರೆ ಮೇಲೆ ದಾಳಿ ನಡೆದಿದೆ.
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಮಾಡುತ್ತಿರುವ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಎನ್ಐಎ ದಕ್ಷಿಣ ಭಾರದಲ್ಲಿ ಪಿಎಫ್ಐ ಹವಾಲಾ ಹಣದ ಜಾಲವನ್ನು ಭೇದಿಸುತ್ತಿದೆ. ಇದೇ ಪ್ರಕರಣದಲ್ಲಿ 16 ಕಡೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ಫುಲ್ವಾರಿ ಶರೀಫ್ ಪ್ರಕರಣದ ಭಾಗವಾಗಿ ಈ ತನಿಖೆ ನಡೆದಿದೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಮೂಲಕ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಲಾಗಿತ್ತು. ಇದೇ ಪ್ರಕರಣದ ಜಾಡು ಹಿಡಿದಿದ್ದ ಎನ್ಐಎ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೂ ಎಂಟ್ರಿ ನೀಡಿತ್ತು.