ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಗಾದಿಗೆ ಪಬ್ರಲ ಸ್ಪರ್ಧೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ವರಿಷ್ಠರು ರೂಪಿಸಿರುವ ರಾಜಿ ಸೂತ್ರಕ್ಕೆ ಒಪ್ಪಿಕೊಂಡಿರುವ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರಿಗೆ ಭರವಸೆ ಕೊಟ್ಟಿದೆ. ಅದನ್ನು ಈಡೇರಿಸಬೇಕಾದುದು ನಮ್ಮ ಆದ್ಯತೆಯಾಗಿದೆ. ಕೆಲವೊಮ್ಮೆ ನಾನು ಮುಂದಿಟ್ಟ ಹೆಜ್ಜೆ ಹಿಂದಿಡಬೇಕಾಗುತ್ತದೆ (Sometimes I should break) ಎಂದು ಹೇಳಿದ್ದಾರೆ. ಏನು ಮಾಡುವುದು, ಎಐಸಿಸಿ ಅಧ್ಯಕ್ಷರು ಮತ್ತು ನಾಯಕರ ಮಾತಿಗೆ ಕಿವಿಗೊಡಬೇಕಾಗುತ್ತದೆ. ಪಕ್ಷದ, ಕರ್ನಾಟಕದ ಹಿತದೃಷ್ಟಿಯಿಂದ ನಾನು ರಾಜಿಸೂತ್ರಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಬೇಸರ

ಅಣ್ಣನಿಗೆ ಸಿಎಂ ಸ್ಥಾನ ಸಿಗದಿರುವುದಕ್ಕೆ ಕಾಂಗ್ರೆಸ್ ಸಂಸದ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಪೂರ್ತಿಯಾಗಿ ಸಂತೋಷವಾಗಿಲ್ಲ, ಆದರೆ ನಮ್ಮ ರಾಜ್ಯದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ. ಅದಕ್ಕಾಗಿಯೇ ಡಿಕೆ ಶಿವಕುಮಾರ್ ಒಪ್ಪಿಕೊಳ್ಳಬೇಕಾಯಿತು. ಭವಿಷ್ಯದಲ್ಲಿ ನಾವು ನೋಡುತ್ತೇವೆ, ಸಾಗಲು ಬಹಳ ದೂರವಿದೆ. ನನ್ನ ಹಾರೈಕೆ (ಡಿ.ಕೆ.ಶಿವಕುಮಾರ್ ಗೆ ಸಿಎಂ ಹುದ್ದೆ) ಆಗಲಿಲ್ಲ, ಕಾದು ನೋಡೋಣ ಎಂದು ಹೇಳಿದ್ದಾರೆ.






