ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಸಿಎಂ ಹಾಗೂ ಡಿಸಿಎಂ ಸ್ಥಾನದ ಜೊತೆಗೆ ಸಚಿವ ಸ್ಥಾನದ ಲಾಬಿಯೂ ಜೋರಾಗಿ ನಡೆಯುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡಬೇಕೆಂದು ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಸಚಿವ ಸ್ಥಾನಕ್ಕೆ ಒತ್ತಾಯಿಸಿ ಡಿಕೆಶಿ, ಸಿದ್ದರಾಮಯ್ಯ, ಖರ್ಗೆಗೆ ರಕ್ತದಲ್ಲಿ ಪತ್ರ:
ಹೌದು, ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರು ಸತತವಾಗಿ ಮೂರನೇ ಬಾರಿ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇವರ ಅಪ್ಪಟ ಅಭಿಮಾನಿಯಾಗಿರುವ ಕ್ಷೇತ್ರದ ಹರೀಶ್ ಕುಮಾರ್ ಮತ್ತು ಆತನ ಸ್ನೇಹಿತರು ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಸಚಿವ ಸ್ಥಾನ ನೀಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ:
ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹರೀಶ್ ಕುಮಾರ್ ಸೇರಿದಂತೆ 10ಕ್ಕೂ ಹೆಚ್ಚು ಅಭಿಮಾನಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹರೀಶ್ ಕುಮಾರ್, ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರು ಹಲವಾರು ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ ಇವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಗೆದ್ದಿರುವ ನಾಲ್ವರಲ್ಲಿ ನಾನೇ ಹಿರಿಯವನು:
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಎಸ್ಎನ್ ನಾರಾಯಣಸ್ವಾಮಿ, ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಲ್ವರು ಗೆದ್ದಿದ್ದಾರೆ. ಆ ನಾಲ್ಕೂ ಜನರಲ್ಲಿ ನಾನು ಹಿರಿಯವನಾಗಿದ್ದೇನೆ. ಸತತವಾಗಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಮೇಲ್ಜಾತಿಯವರು ಟಚಬಲ್ಸ್ ಗೆ ಮಾತ್ರವೇ ಅವಕಾಶ ನೀಡ್ತಾರೆ. ಅನ್ ಟಚಬಲ್ಸ್ ಮೂರು ಬಾರಿ ಗೆಲ್ಲುವುದು ಪ್ರಾಯಾಸವೇ ಸರಿ. ಹಿಂದೆ 40 ವರ್ಷಗಳ ಹಿಂದೆ ಚೆನ್ನಯ್ಯ ಎಂಬುವರು ಮಂತ್ರಿ ಆಗಿದ್ದರು. ಅದು ಬಿಟ್ರೆ ಜಿಲ್ಲೆಯಲ್ಲಿ ಬಲಗೈ ಸಮುದಾಯಕ್ಕೆ ಇದುವರೆಗೂ ಮಂತ್ರಿ ಸ್ಥಾನ ಕೊಟ್ಟಿಲ್ಲ.ಕೋಲಾರ ಜಿಲ್ಲೆಯಲ್ಲಿ ಬಲಗೈ ಸಮುದಾಯದವರು ಹೆಚ್ಚಾಗಿ ಇರುವುದರಿಂದ ನಮ್ಮ ಸಮುದಾಯಕ್ಕೆ ಅವಕಾಶ ಸಿಗಲಿ ಅಂತ ಒತ್ತಾಯ ಮಾಡ್ತಿದ್ದಾರೆ. ನಮ್ಮ ಬೆಂಬಲಿಗರು ಸಹ ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಹೇಳ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಬಳಿ ಮನವಿ ಮಾಡಿದ್ದೇವೆ ಎಂದರು.
ಯಾರು ಸಿಎಂ ಆಗ್ತಾರೋ ಅವರ ಬಳಿ ಹೋಗಿ ಸಚಿವ ಸ್ಥಾನಕ್ಕೆ ಒತ್ತಾಯ:
ನನ್ನ ಮೇಲಿನ ಅಭಿಮಾನದಿಂದ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ನಿನ್ನೆ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಬಣ್ಣವನ್ನು ತನ್ನ ಮೈಗೆ ಬಳಿದುಕೊಂಡಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎರಡು ಕಣ್ಣಗಳು ಇದ್ದಂತೆ. ಬಹುಮತ ಸರ್ಕಾರ ಬರವು ಇವರಿಬ್ಬರೂ ಕಾರಣ. ಇವರಿಬ್ಬರಲ್ಲಿ ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಯಾರು ಸಿಎಂ ಆಗ್ತಾರೋ ಅವರ ಬಳಿ ಹೋಗಿ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತೇನೆ ಎಂದು ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.