ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೌತುಕ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಸಿಂಗಾಪುರಕ್ಕೆ ಹಾರಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸಿಂಗಾಪುರದಿಂದ ಆಗಮಿಸಿದ ಹೆಚ್ಡಿಕೆ ರಾಜ್ಯ ರಾಜಕಾರಣದ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಈ ಬಾರಿ ಅತಂತ್ರ ಫಲಿತಾಂಶ ಬಂದರೆ ನಿಮ್ಮ ಬೆಂಬಲ ಯಾರಿಗೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಈ ಬಾರಿ ಬಹುಮತದ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದು ಈಗಾಗಲೇ ಸೂಟು ಬೂಟು ಹೊಲಿಸಿಕೊಂಡಿದ್ದಾರೆ. ಇತ್ತ ಬಿಜೆಪಿಯೂ ಸ್ವತಂತ್ರ ಸರ್ಕಾರ ರಚನೆ ಮಾಡುವ ಯೋಚನೆಯಲ್ಲಿದೆ. ಎರಡೂ ಪಕ್ಷಗಳು ಇಷ್ಟು ಕಾನ್ಫಿಡೆನ್ಸ್ ಆಗಿರುವಾಗ ನನ್ನನ್ನು ಯಾರು ತಾನೆ ಸಂಪರ್ಕಿಸಲು ಸಾಧ್ಯ ಎಂದಿದ್ದಾರೆ.
ಚುನಾವಣೆ ಮುಗಿದ ಬಳಿಕ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ನಾನು ಸಿಂಗಾಪುರಕ್ಕೆ ತೆರಳಿದ್ದೆ. ಇಲ್ಲಿಯವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಬಹುಮತದ ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿದೆ. ಮಧ್ಯಾಹ್ನದ ಬಳಿಕ ಏನಾಗುತ್ತದೆ ನೋಡೋಣ ಎಂದಿದ್ದಾರೆ.






