ಬಿಜೆಪಿ ಎಂಬ ರಾಜಕೀಯ ಪಕ್ಷವು ಮೂಲಭೂತವಾದಿ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆ ಸಂಘದ ಮೂಲಕ ಬಿಜೆಪಿಯನ್ನು ನಿಯಂತ್ರಿಸಲು ನಿಯೋಜನೆಗೊಂಡಂತ ರಾಜಕೀಯ ಪರಿಜ್ಞಾನವೆ ಇಲ್ಲದ ವ್ಯಕ್ತಿಗಳಿಂದ ಎಂತಹ ಅನಾಹುತಗಳು ಘಟಿಸುತ್ತವೆ ಎನ್ನಲು ಈ ಬಿ ಎಲ್ ಸಂತೋಷ ಉತ್ತಮ ಉದಾಹರಣೆ. ಕಳೆದ ಐದಾರು ವರ್ಷಗಳಿಂದ ಬಿಜೆಪಿಯನ್ನು ಎಲ್ಲಾ ಬಗೆಯಲ್ಲೂ ಪ್ರಪಾತಕ್ಕೆ ತಳ್ಳಿದ ಶ್ರೇಯ ಈ ಹೊಣೆಗೇಡಿˌ ಮುಖಗೇಡಿˌ ಹಾಗು ಪಿತೂರಿಕಾರನೆಂದು ಬಿಜೆಪಿ ಅತೃಪ್ತರು ಆರೋಪಿಸುವ ಸಂತೋಷಗೆ ಸಲ್ಲಬೇಕು. ಯಡಿಯೂರಪ್ಪ ಮುಂತಾದ ಶೂದ್ರರು ಬೆವರು ಹರಿಸಿ ಕಟ್ಟಿದ ಬಿಜೆಪಿ ಎಂಬ ಬ್ರಾಹ್ಮಣರ ಪಕ್ಷವು ಇಂದು ಅದೇ ಬ್ರಾಹ್ಮಣನೊಬ್ಬನಿಂದ ಕರ್ನಾಟಕದಲ್ಲಿ ಅವಸಾನ ಹೊಂದುತ್ತಿರುವುದು ರಾಜ್ಯದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯೆ ಆಗಿದೆ.

ಸಂತೋಷ್ ತರಹದ ಮದುವೆಯಾಗದೆ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುವ ಅನೇಕ ವ್ಯಕ್ತಿಗಳನ್ನು ಸೃಷ್ಟಿಸಿರುವ ಸಂಘವು ಅವರ ಮೂಲಕ ಬಿಜೆಪಿಯನ್ನು ಬೆವರು ಹರಿಸಿ ಕಟ್ಟಿದ ಶೂದ್ರ ನಾಯಕರ ಮೇಲೆ ಸವಾರಿ ಮಾಡಿಸುವ ಸಂಗತಿ ಹಳೆಯದಾದರೂ ಕರ್ನಾಟಕದ ಪಾಲಿಗೆ ಹೊಸದು. ರಾಜ್ಯದ ಜನರಿಗೆ ಬಿಜೆಪಿಯ ಪರಿಚಯವಿದೆಯೆ ವಿನಃ ಸಂಘದ ಪರಿಚವ ಆಗಿರಲಿಲ್ಲ. ಈಗ ಸಂಘದ ಅತ್ಯಂತ ಅಪಾಯಕಾರಿ ಹಾಗು ಜನತಂತ್ರ ವಿರೋಧಿ ನಿಲುವುಗಳನ್ನು ಮನವರಿಕೆ ಮಾಡಿಸಿದ್ದು ಮಾತ್ರ ಈ ಸಂತೋಷ್ ಮತ್ತು ಸೂಲಿಬೆಲೆ ತರಹದ ಸಂಘದ ಪೂರ್ಣಾವಧಿ ಕಾರ್ಯಕರ್ತರು. ಈ ಪೂರ್ಣಾವಧಿ ಸಂಘಿಗಳಿಗೆ ಸುಳ್ಳು ಭಾಷಣ ಮಾಡುವ ತರಬೇತಿ ನೀಡುವ ಸಂಘ ಜನಸಾಮಾನ್ಯರನ್ನು ಸಮೂಹ ಸನ್ನಿಗೊಳಪಡಿಸಲು ಇವರನ್ನು ಬಳಸಿಕೊಳ್ಳುತ್ತದೆ. ಸೂಲಿಬಲೆಯಂತಹ ಸಂಘದಿಂದ ತರಬೇತಿ ಪಡೆದ ಟಿವಿ ವಿಧೂಷಕರು ಕರ್ನಾಟಕದಲ್ಲಿ ಸೃಷ್ಟಿಸಿದ ಕೋಮುವಾದಿ ಮತ್ತು ಗಲಭೆಕೋರ ವಾತಾವರಣ ನಾವೆಲ್ಲರು ನೆನಪಿನಲ್ಲಿಡಬೇಕು. ಈಗ ಈ ಸೂಲಿಬಲೆ ಕೂಡ ಅಧಿಕಾರದ ಹಗಲುಗನಸು ಕಾಣುತ್ತಿರುವುದು ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿ ಕಂಡರೂ ವಾಸ್ತವ.

ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಪಡೆಯಬೇಕಾದರೆ ಸಾಮಾನ್ಯವಾಗಿ ಒಂದು ಬಲಾಢ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಕ್ರೀಯಾಶೀಲರಾಗಿಬೇಕು. ಈ ಹಿನ್ನೆಲೆಗಳಗಿದ್ದಾಗ್ಯೂ ಯಡಿಯೂರಪ್ಪ ಹಾಗೂ ದೇವೇಗೌಡರಂಥವರಿಗೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಪಡೆಯುವುದು ಅಷ್ಟು ಸುಲಭವಾಗಲಿಲ್ಲ. ಇವರಿಬ್ಬರೂ ಹಗಲಿರಳು ರಾಜಕೀಯದಲ್ಲಿ ದುಡಿದವರುˌ ಹೋರಾಟದ ಹಿನ್ನೆಲೆಯುಳ್ಳವರುˌ ತಮ್ಮ ತಮ್ಮ ಪಕ್ಷಗಳನ್ನು ತಳಮಟ್ಟದಿಂದ ಕಟ್ಟಿದವರು. ಅದಗ್ಯೂ ಇವರಿಬ್ಬರು ಅಧಿಕಾರಕ್ಕೆ ಬರಲು ಪಟ್ಟ ಪಾಡು ಬಹುಶಃ ಕರ್ನಾಟಕದ ರಾಜಕೀಯದಲ್ಲಿ ಬೇರೆ ಯಾರೂ ಪಟ್ಟಿಲ್ಲ. ಆದರೆˌ ಇತ್ತಿಚೀನ ಮೋದಿ-ನಿಯಂತ್ರಿತ ಬಿಜೆಪಿಯಲ್ಲಿ ಪಕ್ಷಕ್ಕಾಗಿ ಆರಂಭದಿಂದ ದುಡಿದವರನ್ನು ಮೂಲೆಗುಂಪು ಮಾಡುತ್ತಿರುವ ಸಂಘ ಮೂಲದ ಸಂತೋಷ್ ಬಿಜೆಪಿಯನ್ನು ತನ್ನ ಹಿಂದುತ್ವದ ಪ್ರಯೋಗಗ ಮೂಲಕ ದುರ್ಬಲಗೊಳಿಸುತ್ತಿರುವುದಂತೂ ಸತ್ಯ.

ಬಿಜೆಪಿಯಲ್ಲಿ ಸಂಘ ಮೂಲದವರು ಪಕ್ಷ ಸಂಘಟನೆಯ ಹೆಸರಿನಲ್ಲಿ ನಿಯೋಜನೆಗೊಳ್ಳುವುದು ಹೊಸತೇನಲ್ಲ. ಆದರೆ ಅದು ಯಾವುದೋ ಒಂದು ಮಂತ್ರಿಸ್ಥಾನಕ್ಕೊ ಅಥವಾ ಪಕ್ಷದ ಹಿಂದುತ್ವದ ಅಜೆಂಡಾಗಳ ಅಳವಡಿಕೆಗೊ ಮಾತ್ರ ಸೀಮಿತವಾಗಿರುತ್ತಿತ್ತು. ಉದಾಹರಣೆಗೆ ಈ ಹಿಂದೆ ಗೋವಿಂದಾಚಾರ್ಯ ಎಂಬ ಸಂಘ ಮೂಲದ ವಟುವೊಬ್ಬ ಕೇಂದ್ರದ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದು. ಕ್ರಮೇಣ ಈ ಪದ್ದತಿ ವಿಸ್ತಾರಗೊಂಡು ಉಮಾಭಾರತಿಗೆ ರಾಜ್ಯವೊಂದರ ಮುಖ್ಯಮಂತ್ರಿ ಮಾಡುವ ವರೆಗೆ ಹೋಯಿತು. ಅದರ ಫಲವೇ ಆದಿತ್ಯನಾಥ ಮುಂತಾದವರು ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಆಯ್ಕೆಯಾದರು. ಬಿಜೆಪಿಯನ್ನು ನಿಯಂತ್ರಿಸಲು ಮತ್ತು ಅದನ್ನು ಸದಾ ಬ್ರಾಹ್ಮಣ ಹಿತಾಸಕ್ತಿಯಿಂದ ವಿಮುಖಗೊಳ್ಳದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು ಸಂಘದ ಮುಖ್ಯ ಉದ್ದೇಶ. ಆ ಕಾರಣದಿಂದ ಸಂಘ ನಿಯೋಜಿಸುವ ಈ ಸಂಘಟನಾ ಕಾರ್ಯದರ್ಶಿಯ ಹುದ್ದೆಯಲ್ಲಿರುವವರು ಬಹುತೇಕ ಬ್ರಾಹ್ಮಣರಾಗಿರುತ್ತಾರೆ.

ಈ ಸಂಘಟನಾ ಕಾರ್ಯದರ್ಶಿಗಳು ಯಾವತ್ತೂ ಕೆಳಮಟ್ಟದಿಂದ ಪಕ್ಷ ಸಂಘಟಿಸಿದ ಅನುಭವ ಇಲ್ಲದಿರುವವರು. ಯಾವತ್ತೂ ಜನರ ಸಂಪರ್ಕದಲ್ಲಾಗಲಿˌ ಪಕ್ಷ ಸಂಘಟನೆಯಲ್ಲಾಗಲಿ ತಮ್ಮನ್ನು ತೊಡಗಿಸಿಕೊಳ್ಳದೆ ಇರುವವರನ್ನೆ ಸಂಘಟನಾ ಕಾರ್ಯದರ್ಶಿ ಮಾಡುವ ಸಂಘದ ಉದ್ದೇಶ ಸ್ಪಷ್ಟ ಹಾಗು ಸೋಜಿಗದ್ದು. ಈ ಪೂರ್ಣಾವಧಿ ಕಾರ್ಯಕರ್ತರು ತಮ್ಮ ಬದುಕಿಡೀ ವಿದ್ಯಾರ್ಥಿ ಪರಿಷತ್ ಸಕ್ರೀಯ ಕಾರ್ಯಕರ್ತರಾಗಿˌ ಹಾಗು ಮುಂದೆ ಸಂಘದ ಸ್ವಯಂಸೇವಕರಾಗಿ ಸದಾ ಕಂಡವರ ಮನೆಯಲ್ಲಿ ಪುಕ್ಕಟ್ಟೆ ಉಂಡು ಬೆಳೆದವರು. ೧೯೯೪-೯೫ ರಲ್ಲಿ ಬೀದರನಲ್ಲಿ ನಡೆದ ೧೪ ನೇ ವಿದ್ಯಾರ್ಥಿ ಪರಿಷತ್ ಅಧಿವೇಶನದಲ್ಲಿ ದತ್ತಾತ್ರೇಯ ಹೊಸಬಾಳೆ ಎನ್ನುವ ವ್ಯಕ್ತಿಯನ್ನು ನನ್ನ ಸ್ನೇಹಿತರೊಬ್ಬರು ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಬಂದದ್ದು ನನಗಿನ್ನೂ ನೆನಪಿದೆ.
ಸಂಘದ ಈ ಪೂರ್ಣಾವಧಿ ಕಾರ್ಯಕರ್ತರಿಗೆ ತಮ್ಮದೆಯಾದ ಸ್ವಂತದ ದುಡಿಮೆ ಇರುವುದಿಲ್ಲ. ಇವರು ಯಾವತ್ತೂˌ ಜನರೊಡನೆ ಸಂಪರ್ಕದಲ್ಲಿರುವುದಿಲ್ಲ. ಇವರೆಂದಿಗೂ ದೇಶದ ಬಹುಜನರ ಸಮಸ್ಯೆಗಳ ಕುರಿತಾಗಲಿˌ ಅನ್ನದಾತ ರೈತರ ಕಷ್ಟಕಾರ್ಪಣ್ಯಗಳ ಬಗ್ಗೆಯಾಗಲಿ ಅಥವಾ ಬಡವರˌ ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತಾಗಲಿ ಮಾತನಾಡುವುದಿಲ್ಲ. ಇವರು ಕೇವಲ ಹಿಂದುತ್ವದ ಅಪಾಯಕಾರಿ ಅಜೆಂಡಾಗಳನ್ನು ಪಕ್ಷದ ನೀತಿಯಾಗಿಸಲು ನಿಯೋಜನೆಗೊಂಡಿರುತ್ತಾರೆ. ಸಂಘ ಮೂಲದ ಈ ಜನರು ಬಹುಜನರಿಂದ ಆಯ್ಕೆಯಾದ ಪಕ್ಷದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತ ˌ ಎಲ್ಲ ಹಣ ಮಾಡುವ ಆಯಕಟ್ಟಿನ ಸ್ಥಾನಗಳಲ್ಲಿ ಸಂಘಿ ಮನಸ್ಥಿತಿಯ ಜನಗಳನ್ನು ನೇಮಿಸುವುದುˌ ಸಂಘದ ಚಟುವಟಿಕೆಗಳಿಗೆ ಹಣಕಾಸಿನ ಸಂಪನ್ಮೂಲಗಳನ್ನು ಕ್ರೂಢೀಕರಿಸುವುದುˌ ಹಾಗು ಆಡಳಿತದಲ್ಲಿ ಸಂಘದ ಕಾರ್ಯಸೂಚಿಗಳನ್ನು ಪ್ರತಿಷ್ಠಾಪಿಸುವ ಕಾರ್ಯ ತೆರೆಮರೆಯಲ್ಲಿ ಸದ್ದಿಲ್ಲದೆ ಮಾಡುತ್ತಿರುತ್ತಾರೆ. ಆದರೆ ಈ ಸಂತೋಷ್ ಆ ಎಲ್ಲಾ ಸೀಮೆಗಳನ್ನು ಮೀರಿ ಕರ್ನಾಟಕದಲ್ಲಿ ಬಿಜೆಪಿಯ ಆಡಳಿತದಲ್ಲಿ ಅದ್ವಾನಗಳನ್ನೆ ಸೃಷ್ಟಿಸಿದ ಮನುಷ್ಯ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಗು ವಿಷೇಶವಾಗಿ ಬೊಮ್ಮಾಯಿ ಆಡಳಿತದಲ್ಲಿ ಅತಿ ಹೆಚ್ಚು ರಾಜಕೀಯ ಹಸ್ತಕ್ಷೇಪ ಮಾಡಿದ್ದು ಈ ಸಂತೋಷ ಎನ್ನುವ ಸಂಗತಿ ಬಿಜೆಪಿಯ ಮೊಗಸಾಲೆಯಲ್ಲಿ ಕೇಳಿಬರುವ ಪಿಸುಮಾತಷ್ಟೇ ಆಗಿರದೆ ಈಗ ಅದು ಜಗದೀಶ್ ಶೆಟ್ಟರ್ ಮೂಲಕ ಬಟಾ ಬಯಲಾಗಿದ್ದನ್ನು ನಾವು ನೋಡಿದ್ದೇವೆ. ಶೆಟ್ಟರ್ ಅವರ ಆರೋಪಗಳಿಗೆ ಆತ ಪ್ರತಿಕ್ರೀಯಿಸುವ ಗೊಡವೆಗೆ ಹೋಗಿಲ್ಲದಿರುವುದು ಪಕ್ಷದ ಆಗುಹೋಗುಗಳು ಮತ್ತು ಸರಕಾರದ ನೀತಿ ನಿರೂಪಣೆಗಳಲ್ಲಿ ಆತನ ಅನಗತ್ಯ ಮೂಗು ತೂರಿಸುವಿಕೆಯನ್ನು ಆತನೆ ಸಹಮತಿಸಿದಂತಾಗಿದೆ. ಈಗ ಬಿಜೆಪಿಯ ಅವಸಾನದ ಮುಖ್ಯ ರೂವಾರಿ ಯಾರು ಎಂದು ಕೇಳಿದರೆ ಚಿಕ್ಕ ಮಕ್ಕಳು ಕೂಡ ಈ ಸಂತೋಷನ ಕಡೆ ಬೆರಳು ಮಾಡುತ್ತಾರೆ.
ಮೊದಲ ಆಡಳಿತಾವಧಿಯಲ್ಲಿ ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪ ಹೊರೆಸಿ ಪಕ್ಷ ಅವರ ರಾಜೀನಾಮೆ ಕೇಳಿದಾಗ ಯಡಿಯೂರಪ್ಪ ಸಂತೋಷ ಹಣ ಮಾಡಿದ್ದನ್ನು ದೊಡ್ಡ ಧನಿಯಲ್ಲಿ ಪ್ರಶ್ನಿಸಿದ್ದರೆಂದು ಆ ದಿನಗಳಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಹರಿದಾಡಿದನ್ನು ನಾವಿನ್ನೂ ಮರೆತಿಲ್ಲ. ಆಗ ಸಂಘದಲ್ಲಿ ಈ ಸಂತೋಷನೊಂದಿಗೆ ಜಯದೇವ ಎನ್ನುವ ಇನ್ನೊಬ್ಬ ಹಿರಿಯ ಸಂಘಿ ಸದಸ್ಯರಿದ್ದರು. ಅವರು ಕಳೆದ ಕೆಲವು ವರ್ಷಗಳ ಹಿಂದೆ ಲಿಂಗೈಕ್ಯರಾದರು. ಸಂತೋಷಗಿಂತ ವಯಸ್ಸಿನಲ್ಲಿ ಹಿರಿಯರು ಮತ್ತು ಶುದ್ಧಹಸ್ತರೂ ಆಗಿದ್ದ ಜಯದೇವ ಜೀವಂತವಿರುವಷ್ಟು ದಿನ ಯಡಿಯೂರಪ್ಪನವರಿಗೆ ಒಂದಷ್ಟು ಧೈರ್ಯವಿತ್ತು. ಅವರು ಕಾಲವಾದ ಮೇಲೆ ಈ ಸಂತೋಷನಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತೆ ಆಯಿತು. ಈಗ ರಾಜ್ಯ ಬಿಜೆಪಿಯಲ್ಲಿ ಈ ಸಂತೋಷ್ ಆಡಿದ್ದೆ ಆಟವಾಗಿದೆ.
ಕೆಜೆಪಿ ಬಿಟ್ಟು ಮರಳಿ ಬಿಜೆಪಿಗೆ ಬಂದ ಯಡಿಯೂರಪ್ಪನವರನ್ನು ಹೇಗಾದರೂ ಮಾಡಿ ಮಣಿಸಲು ಮತ್ತು ನಗಣ್ಯಗೊಳಿಸಲು ಅನೇಕ ಜನರನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿ ಕಟ್ಟುವಲ್ಲಿ ಸಂತೋಷ್ ಕೈಚಳಕದ ಆರೋಪಗಳಿವೆ. ಮೊದಮೊದಲು ಈಶ್ವರಪ್ಪನನ್ನು ರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಮೂಲಕ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ದು ಹಾಗು ಆಮೇಲೆ ಅನೇಕ ಜನ ಶಾಸಕರನ್ನು ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರನ ವಿರುದ್ಧ ಮಾತನಾಡಲು ಪುಸಲಾಯಿಸಿದ್ದು ಸಂತೋಷ್ ಎಂದು ಬಿಜೆಪಿಯಲ್ಲಿ ಬಹಿರಂಗವಾಗಿ ಚರ್ಚೆಯಲ್ಲಿರುವ ವಿಷಯ. ಪಕ್ಷ ಸಂಘಟನೆಯಲ್ಲಿ ಯಾವತ್ತೂ ತೊಡಗಿಸಿಕೊಳ್ಳದ ಸೂಲಿಬೆಲೆ ಎಂಬ ಟಿವಿ ಹರಟೆ ಕಾರ್ಯಕ್ರಮ ಹಿನ್ನೆಲೆಯ ವಿಧೂಷಕ ಕೂಡ ಯಡಿಯೂರಪ್ಪನವರ ವಿರುದ್ಧ ಪಿತೂರಿ ಮಾಡಿದ ಅನೇಕ ಸಂಗತಿಗಳು ಬಿಜೆಪಿಯ ಕಾರ್ಯಕರ್ತರು ಖಾಸಗಿಯಾಗಿ ಪ್ರಾಸ್ತಾಪಿಸುತ್ತಾರೆ.
ಬಿಜೆಪಿ ಉತ್ತರ ಪ್ರದೇಶˌ ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮುಖರಹಿತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಮೇಲೆ ತಾವೂ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಣುತ್ತಿರುವವರಲ್ಲಿ ಈ ಸಂತೋಷ್ˌ ಸೂಲಿಬೆಲೆಯಂತವರು ಗೋಚರಿಸುತ್ತಾರೆ. ಈ ಹಿಂದೆ ಸಿದ್ಧರಾಮಯ್ಯ ಆಡಳಿತದಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಗಳ ಸಂದರ್ಭದಲ್ಲಿ ಈ ಬಿ ಎಲ್ ಸಂತೋಷ ಮತ್ತು ಆತನ ಪಟಾಲಮ್ ನ ನಿಘೂಡ ಚಟುವಟಿಕೆಗಳು ನಮಗೆಲ್ಲ ಗೊತ್ತು. ಬಿಜೆಪಿ ಕಾರ್ಯಕರ್ತರೇ ಮಾತಾಡಿಕೊಂಡಿದ್ದಂತೆ ಈ ಸಂತೋಷ ಮತ್ತು ಸೂಲಿಬೆಲೆಯ ಗುಂಪು ಉಪಚುನಾವಣೆಯಲ್ಲಿ ಗುಪ್ತವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದು ಅದರ ಫಲಿತಾಂಶದ ನಂತರ ಯಡಿಯೂರಪ್ಪನನ್ನು ಹಣಿಯಲು ಪಕ್ಷದಲ್ಲಿ ಅಂದು ಬಂಡಾಯ ತೀವ್ರಗೊಳಿಸಿದ್ದು ಅಂದಿನ ಗಮನಾರ್ಹ ಘಟನೆಯಾಗಿತ್ತು. ಯಡಿಯೂರಪ್ಪ ವಿರುದ್ಧದ ಈ ಎಲ್ಲ ವಿದ್ರೋಹದ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ಪ್ರೋತ್ಸಾಹ ನೀಡಿದ್ದು ಆ ದಿನದಲ್ಲಿ ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರ ಮತ್ತು ಧಾರವಾಡದ ಪ್ರಲ್ಹಾದ ಜೋಷಿ ಎಂದು ಯಡಿಯೂರಪ್ಪ ಬೆಂಬಲಿಗರು ಅಂದು ಅಳಲು ತೋಡಿಕೊಳ್ಳುತ್ತಿದ್ದರು.
ಕೆಜೆಪಿ ಬಿಟ್ಟು ಬಿಜೆಪಿಗೆ ಮರಳಿದ ದಿನದಿಂದಲೆ ಯಡಿಯೂರಪ್ಪನವರನ್ನು ಹಣಿಯುವ ಕಾರ್ಯ ಸಂತೋಷ್ ಮೂಲಕ ಸಂಘ ಆರಂಭಿಸಿ ಬಿಟ್ಟಿತ್ತು. ಆಗಿನ್ನೂ ಸದೃಢವಾಗಿದ್ದ ಯಡಿಯೂರಪ್ಪ ಇವರ ಕುಚೇಷ್ಟೆಗಳಿಗೆ ಎದುರೇಟು ಕೊಡುತ್ತಿದ್ದರು. ನಂಜನಗೂಡುˌ ಗುಂಡ್ಲುಪೇಟೆಯ ಉಪಚುನಾವಣೆಯ ಅಂದಿನ ಸೋಲಿನ ಮಾರನೇ ದಿನವೇ ನಿರೀಕ್ಷಿಸಿದಂತೆ ಸೂಲಿಬಲೆಯ ಟೀಕೆ ಬಂದೇಬಿಟ್ಟಿತ್ತು. ಆತನ ಟೀಕೆಗೆ ಪ್ರತ್ಯುತ್ತರವಾಗಿ ಯಡಿಯೂರಪ್ಪ ಅನುಯಾಯಿಗಳು ತಮ್ಮ ಸಮುದಾಯದ ವಾಟ್ಸಪ್ ಗ್ರುಪ್ ಮತ್ತು ಫೇಸ್ಬುಕಗಳಲ್ಲಿ ಸೂಲಿಬಲೆ ಮತ್ತು ಸಂತೋಷನ ಷಡ್ಯಂತ್ರಗಳ ಕುರಿತು ಖಾರವಾದ ಸ್ಟೇಟಸಗಳನ್ನು ಹಾಕುತ್ತ ಯಡಿಯೂಪ್ಪ ಮತ್ತು ಲಿಂಗಾಯತ ನಾಯಕತ್ವದ ವಿರುದ್ದ ಸಂಘಿಗಳ ಪಿತೂರಿಯ ಕುರಿತು ಸಮುದಾಯದ ಜನಾಭಿಪ್ರಾಯ ಕ್ರೂಢೀಕರಿಸುವ ಕೆಲಸ ತೀವ್ರವಾಗಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ಯಡಿಯೂರಪ್ಪ ಮತ್ತವರ ಅನುಯಾಯಿಗಳನ್ನು ಪಕ್ಷದಲ್ಲಿ ಸಂಪೂರ್ಣವಾಗಿ ನಿಷ್ಕ್ರೀಯಗೊಳಿಸುವಲ್ಲಿ ಸಂತೋಷ್ ಯಶಸ್ವಿಯಾದ.
ಕರ್ನಾಟಕದಲ್ಲಿ ಯಡಿಯೂರಪ್ಪ ಹೊರತು ಪಡಿಸಿದ ಬಿಜೆಪಿ ಶೂನ್ಯ ಎನ್ನುವ ಸಂದೇಶಗಳು ಯಡಿಯೂರಪ್ಪ ಅನೇಕ ವೇಳೆ ರವಾನಿಸಿದರೂ ಕೂಡ ಯಡಿಯೂರಪ್ಪನವರನ್ನು ನಗಣ್ಯಗೊಳಿಸುವಲ್ಲಿ ಸಂತೋಷ್ ವಿರಮಿಸಲಿಲ್ಲ. ಯಡಿಯೂರನವರನ್ನು ನಗಣ್ಯಗೊಳಿಸುವ ಸಂತೋಷನ ಕೆಲಸಗಳಿಂದ ಬಿಜೆಪಿ ದುರ್ಬಲಗೊಳ್ಳುತ್ತ ಸಾಗಿತು. ಈಗಿನ ಚುನಾವಣೆಯಲ್ಲಿ ಟಿಕೇಟ್ ಹಂಚಿಕೆಯಲ್ಲಾದ ಅವಘಡಗಳಿಂದ ಸಂತೋಷನ ಬಣ್ಣ ದೊಡ್ಡ ಮಟ್ಟದಲ್ಲಿ ಬಯಲಾಗಿದೆ. ಕರ್ನಾಟಕ ಮತ್ತು ಉತ್ತರದ ರಾಜ್ಯಗಳ ಜನರ ಮನಸ್ಥಿತಿಯ ನಡುವಿನ ವ್ಯತ್ಯಾಸವರಿಯದೆ ಕರ್ನಾಟಕದಲ್ಲಿ ಹಿಂದುತ್ವದ ಆಧಾರದಲ್ಲಿ ಪಕ್ಷವನ್ನು ಕಟ್ಟಬೇಕೆನ್ನುವ ಸಂಘ ಹಾಗು ಅದರ ಪ್ರತಿನಿಧಿ ಸಂತೋಷ್ ರ ಕಾರ್ಯಗಳು ಕರ್ನಾಟಕದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ವಕ್ಕಲಿಗರ ರಾಜಕೀಯ ಭವಿಷ್ಯವನ್ನು ಡೋಲಾಯಮಾನಗೊಳಿಸಿದ್ದು ಸುಳ್ಳಲ್ಲ.
ಸಂತೋಷನ ಹೆಸರಿನ ಮೇಲೆˌ ಹಾಗು ಆತನ ಮುಖ ತೋರಿಸಿದರೆ ಪಕ್ಷಕ್ಕೆ ಮೂರೂಕಾಲು ಮತಗಳು ಬರುವುದಿಲ್ಲವಾದರೂ ಮುಂದಿನ ದಿನಗಳಲ್ಲಿ ಬ್ರಾಹ್ಮಣ್ಯ ನಿಯಂತ್ರಣದ ಹಿಂದುತ್ವದ ಆಧಾರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಲಿಂಗಾಯತರು ಮತ್ತು ವಕ್ಕಲಿಗರನ್ನು ರಾಜಕೀಯವಾಗಿ ಶಾಸ್ವತ ಮೂಲೆಗುಂಪು ಮಾಡುವ ಸಂಘದ ಮಹಾತ್ವಾಕಾಂಕ್ಷೆಗೆ ಚಾಲನೆ ಸಿಕ್ಕಿದ್ದಂತೂ ಸುಳ್ಳಲ್ಲ. ಕಳೆದ ಎರಡು-ಮೂರು ದಿನಗಳ ಹಿಂದೆ ಈ ಬಿ ಎಲ್ ಸಂತೋಷ್ ಲಿಂಗಾಯತರ ವಿರುದ್ಧ ನೀಡಿದ್ದನೆನ್ನಲಾದ ಹೇಳಿಕೆಯ ಕುರಿತು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಅದರ ಸುದ್ದಿ ಮೂಲ ಸ್ಪಷ್ಟವಾಗಿಲ್ಲ. ಆ ಸುದ್ದಿಯ ಸಾರವಂತೂ ಸುಳ್ಳಲ್ಲ ˌ ಆದರೆ ಚುವಾವಣಾ ಹೊಸ್ತಿಲಲ್ಲಿ ಸಂತೋಷ್ ಆ ರೀತಿ ಬಹಿರಂಗವಾಗಿ ಕಾರ್ಯಕರ್ತರನ್ನುದ್ದೇಶಿಸಿ ಹೇಳಿಕೆ ಕೊಡುತ್ತಾನೆಂದು ನನಗೆ ಅನ್ನಿಸುವುದಿಲ್ಲ. ಆದರೂ ಆ ಸುದ್ದಿಯ ಸಾರವಂತೂ ಸಂಘದ ಗುಪ್ತ ಅಜೆಂಡಾವನ್ನೆ ಬಹಿರಂಗಪಡಿಸುವುದರಿಂದ ಲಿಂಗಾಯತರು ಇನ್ನಾದರೂ ಬಿಜೆಪಿಯ ಸಹವಾಸದಿಂದ ಹೊರಬರುವುದೊಳಿತು ಎನ್ನುವುದು ನನ್ನ ಅಭಿಮತ.
~ ಡಾ. ಜೆ ಎಸ್ ಪಾಟೀಲ.








