~ಡಾ. ಜೆ ಎಸ್ ಪಾಟೀಲ
ನೆಹರು-ಇಂದಿರಾ ಆಡಳಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ನಾಯಕರಿಗೆ ವಿಫುಲ ರಾಜಕೀಯ ಸ್ಥಾನಮಾನಗಳು ನೀಡಿದ್ದು ಈಗ ಇತಿಹಾಸ. ನಿಜಲಿಂಗಪ್ಪ, ಕಂಠಿ, ಜತ್ತಿ, ಮತ್ತು ವಿರೇಂದ್ರ ಪಾಟೀಲ ಈ ನಾಲ್ಕು ಜನರನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಿತ್ತು ಮತ್ತು ಜತ್ತಿಯವರಿಗೆ ಉಪರಾಷ್ಟ್ರಪತಿ/ಹಂಗಾಮಿ ರಾಷ್ಟ್ರಪತಿ ಹುದ್ದೆ ನೀಡಿತ್ತು. ಇಂದು ಬಹುತೇಕ ಈ ನಾಯಕರ ಸಂಬಂಧಿಗಳು ಮತ್ತು ಕುಟುಂಬದವರು ಕಾಂಗ್ರೆಸ್ ಪಕ್ಷವನ್ನು ಮರೆತು ಪುರೋಹಿತರು ಸ್ಥಾಪಿಸಿರುವ ಬಿಜೆಪಿಯ ಬೆಂಬಲಿಗರಾಗಿರುವುದು ದುರಂತದ ಸಂಗತಿ. ಇಂದಿರಾ ಗಾಂಧಿಯವರು ರಾಜಕೀಯದಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದರು. ಅವಕಾಶ ವಂಚಿತ ಜನರಿಗೆ ರಾಜಕೀಯ ಅವಕಾಶ ನೀಡಿದ್ದು ನೈಜ ಲಿಂಗಾಯತನಾದವರು ಸ್ವಾಗತಿಸಲೇಬೇಕಿತ್ತು ˌ ಆದರೆ ಲಿಂಗಾಯತರು ಬಸವ ತತ್ವವನ್ನು ಅನುಸರಿಸಲೇಯಿಲ್ಲ.
ಆದರೆ ಹಿಂದುಳಿದ ವರ್ಗಕ್ಕೆ ಇಂದಿರಾ ನೀಡಿದ ಅವಕಾಶವನ್ನು ಆ ವರ್ಗದ ಬಹುತೇಕ ನಾಯಕರು ಕೇವಲ ತಮ್ಮ ಸ್ವಂತದ ಮತ್ತು ಕುಟುಂಬದ ಅಭಿವೃದ್ಧಿಗೆ ಬಳಸಿಕೊಂಡು ತಾವು ಪ್ರತಿನಿಧಿಸುವ ವರ್ಗಗಳ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎನ್ನುವುದು ಬೇರೆ ವಿಷಯ. ಹೀಗೆ ಸ್ವಾತಂತ್ರಾ ನಂತರದ ೭೫ ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಎಲ್ಲಾ ಪಕ್ಷಗಳಿಂದ ಮುಖ್ಯಮಂತ್ರಿಯಾಗಿ ಲಿಂಗಾಯತರು ಸುಮಾರು ಎರಡುವರೆಯಿಂದ ಮೂರು ದಶಕಗಳ ದೀರ್ಘ ಅವಧಿ ಆಡಳಿತ ಮಾಡಿದ್ದನ್ನು ನಾವು ಜ್ಞಾಪಿಸಿಕೊಳ್ಳಬೇಕು. ಇಂದಿರಾ ವಿರೋಧಿ ಅಲೆಯ ಸಂದರ್ಭದಲ್ಲಿ ಜನತಾ ಪರಿವಾರ ಹುಟ್ಟಿಕೊಂಡು ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ವಿಮುಖರಾದರು. ಆನಂತರ ದೇವೇಗೌಡರ ಸ್ವಾರ್ಥ ಹಾಗು ಕುಟುಂಬ ಪ್ರೇಮ ಮತ್ತು ಹೆಗಡೆಯವರ ಬಿಜೆಪಿ ತರವಾದ ಗುಪ್ತ ಒಲವುಗಳ ಕಾರಣದಿಂದ ಕರ್ನಾಟಕದಲ್ಲಿ ಜನತಾ ಪರಿವಾರ ವಿಘಟನೆಯಾಯಿತು.
ಅಲ್ಲಿದ್ದ ಜಾತ್ಯಾತೀತ ಮನಸ್ಥಿತಿಯ ನಾಯಕರೆಲ್ಲ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದರೆ ಸಂಪ್ರದಾಯವಾದಿಗಳು ಬಿಜೆಪಿ ಸೇರಿದರು. ಕಾಂಗ್ರೆಸ್ ಪಕ್ಷ ವಿರೇಂದ್ರ ಪಾಟೀಲರನ್ನು ಅಮಾನುಷವಾಗಿ ನಡೆಸಿಕೊಂಡ ಕಾರಣದಿಂದ ಲಿಂಗಾಯತರು ಬಿಜೆಪಿ ಪಕ್ಷದಲ್ಲಿರುವ ಯಡಿಯೂರಪ್ಪನವರನ್ನು ಭಾಗಶಃ ಅಪ್ಪಿಕೊಳ್ಳಬೇಕಾಯಿತು. ಯಡಿಯೂರಪ್ಪನವರು ಎಷ್ಟೇ ಪ್ರಯತ್ನಿಸಿದರೂ ವಿರೇಂದ್ರ ಪಾಟೀಲರಂತೆ ಲಿಂಗಾಯತ ಸಮುದಾಯದ ಸರ್ವಸಮ್ಮತ ನಾಯಕರಾಗಿ ಹೊರಹೊಮ್ಮಲಿಲ್ಲ ಎನ್ನುವುದಕ್ಕೆ ಅವರು ಐದು ದಶಕಗಳ ಅವಿರತ ಪ್ರಯತ್ನದ ನಂತರವೂ ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತ ಪಡೆಯಲಿಲ್ಲ ಎನ್ನುವುದೇ ಸಾಕ್ಷಿ. ಬಿಜೆಪಿಯ ಬಲಪಂಥೀಯ ಅಸಹಿಷ್ಣು ಸಿದ್ಧಾಂತವನ್ನು ಒಪ್ಪದ ಜಾತ್ಯಾತೀತ ಲಿಂಗಾಯತರು ಕಾಲಾನಂತರದಲ್ಲಿ ಸಿದ್ಧರಾಮಮ್ಯನವರನ್ನು ಬೆಂಬಲಿಸಿದರೇ ಹೊರತು ಯಡಿಯೂರಪ್ಪನವರನ್ನಲ್ಲ.
ಈಗ ಯಡಿಯೂರಪ್ಪನವರ ಕಾಲ ಮುಗಿಯುತ್ತ ಬರುತ್ತಿದೆ. ಬಿ ಬಿ ಶಿವಪ್ಪನವರಿಂದ ಮೊದಲ್ಗೊಂಡು ಇಲ್ಲಿಯವರೆಗೆ ಯಡಿಯೂರಪ್ಪನವರು ಬಿಜೆಪಿ ಮತ್ತು ಬೇರೆ ಪಕ್ಷದ ಲಿಂಗಾಯತ ನಾಯಕರನ್ನು ಬೆಳೆಸಲಿಲ್ಲ ಎನ್ನುವ ಆರೋಪವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಈಗ ಅವರು ಸಂಧ್ಯಾ ಕಾಲದಲ್ಲಿ ಬಿಜೆಪಿಯಲ್ಲಿ ತಮಗೆ ಹೆಗಲಿಗೆ ಹೆಗಲು ಕೊಟ್ಟು ಬೆಂಬಲಿಸಿದ ಲಿಂಗಾಯತ ನಾಯಕರನ್ನು ಕಡೆಗಣಿಸಿ ತಮ್ಮ ಮಗನನ್ನು ಮುನ್ನೆಲೆಗೆ ತಂದಿರುವುದು ಬಿಜೆಪಿಯೊಳಗಿನ ಲಿಂಗಾಯತ ನಾಯಕರಿಗೆ ಭ್ರಮನಿರಸ ಉಂಟುಮಾಡಿದೆ. ಈಗ ಕೇಶವ ಕೃಪಾದವರ ನಿರಂತರ ಕುತಂತ್ರದಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ಸಂಘಿಗಳು ಯಡಿಯೂರಪ್ಪನವರ ಜಾಗದಲ್ಲಿ ತಮ್ಮ ಜಾತಿಯವನೊಬ್ಬನನ್ನು ಮುಖ್ಯಮಂತ್ರಿ ಮಾಡುವ ಎಲ್ಲ ಸಿದ್ಧತೆಗಳು ಮಾಡಿಕೊಂಡಿದ್ದರು. ಆದರೆ ಕೇಶವಕೃಪಾದವರ ಆಟ ಈ ವಿಷಯದಲ್ಲಿ ನಡೆಯಲಿಲ್ಲ.
ಯಡಿಯೂರಪ್ಪನವರು ತಾನು ಕಟ್ಟಿದ ಬಿಜೆಪಿ ಭದ್ರ ಕೋಟೆ ಬ್ರಾಹ್ಮಣರ ಪಾಲಾಗಬಾರದೆಂದು ತಮ್ಮ ಪರಮಾಪ್ತ ಬಸವರಾಜ್ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ಕೇಶವ ಕೃಪಾದ ಮಂಡಿವಂತರಿಗೆ ಬಲವಾದ ಏಟನ್ನು ನೀಡಿದ್ದಾರೆ. ಬಿಜೆಪಿಯೊಳಗಿದ್ದುಕೊಂಡೇ ಸಂಘಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಭಾರತದ ಏಕೈಕ ಬಿಜೆಪಿ ನಾಯಕ ಎಂದರೆ ಯಡಿಯೂರಪ್ಪ ಎಂದರೆ ತಪ್ಪಿಲ್ಲ. ಯಡಿಯೂರಪ್ಪನವರ ನಂತರ ಬಿಜೆಪಿ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಉತ್ತರ ಭಾರತದಂತೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರಣೀತ ಹಿಂದೂತ್ವ ಸಿದ್ಧಾಂತದ ಮೇಲೆ ಕತ್ತೆಯನ್ನಾದರೂ ನಿಲ್ಲಿಸಿ ಗೆಲ್ಲಿಸಬಹುದು ಎನ್ನುವ ಮಾತು ಕರ್ನಾಟಕದ ಮಟ್ಟಿಗೆ ಯಶಸ್ಸು ಕಂಡಿಲ್ಲ. ಅದು ಯಶಸ್ಸು ಕಾಣಲು ಯಡಿಯೂರಪ್ಪ ಬಿಟ್ಟಿಲ್ಲ. ಬಿಜೆಪಿಯನ್ನು ಯಡಿಯೂರಪ್ಪ ಕೇಂದ್ರಿತ ಬಿಜೆಪಿಯಾಗಿ ಕಟ್ಟಲಾಯಿತೆ ಹೊರತು ಸಂಘ ಪರಿವಾರದ ಬಿಜೆಪಿಯಾಗಿ ಕಟ್ಟಲಿಲ್ಲ.
ಆ ಅಸಮದಾನ ಬಿಜೆಪಿಯನ್ನು ನಿಯಂತ್ರಿಸುವ ಸಂಘದ ಆಚಾರ್ಯರಿಗೆ ಇರುವುದರಿಂದಲೇ ಯಡಿಯೂರಪ್ಪನವರನ್ನು ಹೆಜ್ಜೆಹೆಜ್ಜೆಗೂ ತೊಂದರೆ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗು ಗೊತ್ತಿರುವ ಸಂಗತಿ. ಬಿಜೆಪಿ ಬಲಹೀನವಾದರೆ ಈಗ ಅದರ ಲಾಭ ಕಾಂಗ್ರೆಸ್ ಪಡೆದುಕೊಳ್ಳುವ ಕಾರ್ಯ ಮಾಡಬೇಕಿದೆ. ಆ ದಿಶೆಯಲ್ಲಿ ಹಿರಿಯರುˌ ಹಾಗು ಅಂದಿನ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್ ಆರ್ ಪಾಟೀಲರಿಗೆ ಲಿಂಗಾಯತ ಮಠಾಧೀಶರನ್ನು ಭೇಟಿಯಾಗಿ ಬೆಂಬಲ ಯಾಚಿಸುವ ಜವಾಬ್ದಾರಿ ಕಾಂಗ್ರೆಸ್ ನೀಡಿತ್ತು. ಆನಂತರ ಯಾವಯಾವುದೊ ಕಾರಣಗಳಿಂದ ಎಸ್ ಆರ್ ಪಾಟೀಲರು ಬಹುದಿನಗಳಿಂದ ಪ್ರತಿನಿಧಿಸುತ್ತಿದ್ದ ವಿಧಾನ ಪರಿಷತ್ ಟಿಕೇಟ್ ನಿಂದ ವಂಚಿತರಾದರು. ಈಗ ಕಾಂಗ್ರೆಸ್ ವರಿಷ್ಟರು ತಮ್ಮ ಪಕ್ಷದಲ್ಲಿ ಲಿಂಗಾಯತ ನಾಯಕತ್ವ ಬೆಳೆಸುವ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾದ ಅಗತ್ಯವಿದೆ.
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ಶಾಸಕರ ಸಂಖ್ಯೆಗೇನೂ ಕೊರತೆಯಿಲ್ಲ. ಅಂದಾಜಿನ ಪ್ರಕಾರ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಲಿಂಗಾಯತ ಮತದಾರರ ಸಂಖ್ಯೆಯೇ ಹೆಚ್ಚು. ಆದರೆ ಯಡಿಯೂರಪ್ಪನವರಿಗಾಗಿ ಬಿಜೆಪಿ ಬೆಂಬಲಿಸಿದಂತೆ ಕಾಂಗ್ರೆಸ್ ಪಕ್ಷವನ್ನು ಲಿಂಗಾಯತರು ವ್ಯಕ್ತಿ ಕೇಂದ್ರಿತ ನೆಲೆಯಲ್ಲಿ ಬೆಂಬಲಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಜನತಾ ಪರಿವಾರ ಮೂಲದ ಮತ್ತು ಮೂಲ ಕಾಂಗ್ರೆಸ್ ಪಕ್ಷದ ನಾಯಕರ ವೈಯಕ್ತಿಕ ವರ್ಚಸ್ಸೇ ಕಾಂಗ್ರೆಸ್ ಪಕ್ಷ ಲಿಂಗಾಯತ ಮತದಾರರನ್ನು ಆಕರ್ಶಿಸಲು ಮುಖ್ಯ ಕಾರಣ. ಆದರೆ, ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಯಡಿಯೂರಪ್ಪನವರ ನಿರ್ಗಮನದ ತರುವಾಯ ಕಾಂಗ್ರೆಸ್ ಪಕ್ಷವು ಸೂಕ್ತ ಲಿಂಗಾಯತ ನಾಯಕತ್ವಕ್ಕೆ ಮನ್ನಣೆ ನೀಡುವ ಅನಿವಾರ್ಯತೆ ತಲೊದೋರಿದೆ. ಏಕೆಂದರೆ ಕಾಂಗ್ರೆಸ್ ಪಕ್ಷ ನೆಚ್ಚಿಕೊಂಡಿರುವ ಬಹುತೇಕ
ಹಿಂದುಳಿದ ವರ್ಗದ ಮತದಾರರು(ಕುರುಬರನ್ನು ಹೊರತು ಪಡಿಸಿ) ಇಂದು ಕಾಂಗ್ರೆಸ್ಸಿನೊಂದಿಗಿಲ್ಲ.
ಇತ್ತೀಚಿನ ಬೆಳವಣಿಗೆಗಳಿಂದ ಪ್ರಬಲ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸೌದಿಯವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇವರಿಬ್ಬರ ಆಗಮನದಿಂದ ಲಿಂಗಾಯತ ನಾಯಕತ್ವ ಸದೃಢಗೊಂಡಂತಾಗಿದೆ. ಈ ಚುನಾವಣೆಯ ನಂತರ ಬಿಜೆಪಿ ಛಿದ್ರಗೊಳ್ಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಹಾಗೊಂದು ಬೆಳವಣಿಗೆ ಘಟಿಸಿದರೆ ಬಿಜೆಪಿಯಲ್ಲಿನ ಅಸಂಖ್ಯಾತ ಲಿಂಗಾಯತ ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರುವ ಸಾಧ್ಯತೆಗಳಿವೆ. ಬಿಜೆಪಿಯನ್ನು ನಿಯಂತ್ರಿಸುವ ಸಂಘಿ ಬ್ರಾಹ್ಮಣರ ಲಿಂಗಾಯತ ವಿರೋಧಿ ನಿಲುವು ಬಿಜೆಪಿಯನ್ನು ಕರ್ನಾಟಕದಲ್ಲಿ ಸರ್ವನಾಶಗೊಳಿಸುವುದು ನಿಶ್ಚಿತವಾಗಿದೆ.
ಕಳೆದ ಒಂದು ದಶಕದಲ್ಲಿ ೯೦% ದಲಿತ ಎಡಗೈ ಪಂಗಡ, ಅರ್ಧದಷ್ಟು ದಲಿತ ಬಲಗೈ ಪಂಗಡ, ೯೦% ಭೋವಿಗಳು, ಲಂಬಾಣಿ, ಮುಂತಾದ ಪರಿಶಿಷ್ಠ ವರ್ಗಗಳು ಕೂಡ ಬಿಜೆಪಿಯೊಂದಿಗೆ ಹೋಗಿವೆ. ಯಡಿಯೂರಪ್ಪನವರು ತಮಗೆ ಲಿಂಗಾಯತ ಸಮುದಾಯದ ಸಂಪೂರ್ಣ ಬೆಂಬಲ ಲಭ್ಯವಾಗದ ಕಾರಣ ಸಣ್ಣ ಪುಟ್ಟ ಹಿಂದುಳಿದ ವರ್ಗಗಳು ಮತ್ತು ದಲಿತ ಮತದಾರರ ಬೆಂಬಲ ಗಿಟ್ಟಿಸಿಕೊಳ್ಳಲು ಮೈಕ್ರೊ ಸೋಷನ್ ಇಂಜಿನಿಯರಿಂಗ್ ಪ್ರಯೋಗ ಮಾಡಿದ್ದು ನಾವು ಬಲ್ಲೆವು. ಮೇಲ್ವರ್ಗದ ತನ್ನ ಪಕ್ಷದ ಅಭ್ಯರ್ಥಿಗಳ ವೈಯಕ್ತಿಕ ಮತಬ್ಯಾಂಕ್ ಹೊರತಾಗಿ ಅಲ್ಪ ಸಂಖ್ಯಾತರ ಮತಗಳನ್ನು ಮಾತ್ರ ನೆಚ್ಚಿಕೊಂಡು ಕಾಂಗ್ರೆಸ್ ಗೆಲುವಿನ ದಡ ಸೇರುವುದು ಕಷ್ಟದ ಕಾರ್ಯ. ಹಾಗಾಗಿ, ಯಡಿಯೂರಪ್ಪನವರ ಅವನತಿಯ ನಂತರ ಲಿಂಗಾಯತ ನಾಯಕತ್ವವನ್ನು ಕಾಂಗ್ರೆಸ್ ಪಕ್ಷ ಬೆಳೆಸಲೇಬೇಕಿದೆ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲವೆಂದೇ ಹೇಳಬೇಕಿದೆ.
ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಅಂಥ ಲಿಂಗಾಯತ ನಾಯಕ ಯಾರಿದ್ದಾರೆ ಎನ್ನುವ ಪ್ರಶ್ನೆ ಏಳುತ್ತದೆ. ಹೌದು, ಈಗ ಕಾಂಗ್ರೆಸ್ ಪಕ್ಷದಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಆಕರ್ಶಿಸಬಲ್ಲ ನಾಯಕತ್ವ ಸಧ್ಯಕಂತೂ ಇಲ್ಲ. ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ, ಜನತಾ ಪರಿವಾರ ಮೂಲದ ಮತ್ತು ಸಿದ್ಧರಾಮಯ್ಯ ಆಪ್ತರಾಗಿದ್ದ ಹಳೆ ಮೈಸೂರಿನ ಗುಂಡ್ಲುಪೇಟೆಯ ಮಹಾದೇವಪ್ರಸಾದ್ ಅವರು ಇಂದು ಬದುಕಿಲ್ಲ. ಆದರೆ ಇರುವವರಲ್ಲೆ ಕೆಲವರನ್ನು ಗುರುತಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜನ ಲಿಂಗಾಯತ ನಾಯಕರಿದ್ದಾರೆ. ಅವರಲ್ಲೇ ಪಕ್ಷ ಈಗ ಮೆರಿಟ್ಸ್ ಮತ್ತು ಡಿಮೆರಿಟ್ಸ್ ಗಳನ್ನು ಅವಲೋಕಿಸಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವ ಲಿಂಗಾಯತ ನಾಯಕರಿಂದ ಲಾಭಕ್ಕಿಂತ ನಷ್ಟ ಹೆಚ್ಚು ಎನ್ನುವ ಕುರಿತು ಒಂದು ಚಿಂತನೆಯ ಅಗತ್ಯ ಖಂಡಿತ ಇದೆ.
ಹೌದು, ಕಾಂಗ್ರೆಸ್ ಪಕ್ಷ ಇಂದು ತನ್ನಲ್ಲಿರುವ ಲಿಂಗಾಯತ ನಾಯಕರಿಂದ ಲಾಭ ಎಷ್ಟು ಅನ್ನುವ ಮೊದಲು ನಷ್ಟ ಯಾರಿಂದ ಮತ್ತು ಏಕೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಇಲ್ಲಿ ಕೆಲವರ ಹೆಸರು ಪ್ರಸ್ತಾಪಿಸುವ ಮೂಲಕ ಎಂತಹ ಲಿಂಗಾಯತ ನಾಯಕರಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಎನ್ನುವುದನ್ನು ವಿವರಿಸಿಲಾಗಿದೆ:
ಈಶ್ವರ ಖಂಡ್ರೆ ಭೀಮಣ್ಣ ಖಂಡ್ರೆ ಮತ್ತು ಆನಂತರ ಈಶ್ವರ ಖಂಡ್ರೆ ಮೊದಲಿನಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡವರು. ಆದರೆ ಈಶ್ವರ ಖಂಡ್ರೆಯನ್ನು ಮುನ್ನೆಲೆಗೆ ತರುವ ಮೂಲಕ ಕಾಂಗ್ರೆಸ್ ಇಡೀ ಬೀದರ ಜಿಲ್ಲೆಯ ಲಿಂಗಾಯತ ಸಮುದಾಯದ ಬೆಂಬಲ ಕಳೆದುಕೊಂಡಿದೆ. ಖಂಡ್ರೆ ಕುಟುಂಬವನ್ನು ವಿರೋಧಿಸುವ ಏಕೈಕ ಕಾರಣದಿಂದ ಬಹುತೇಕ ಬೀದರ ಜಿಲ್ಲೆಯ ಲಿಂಗಾಯತ ಸಮುದಾಯ, ಸಂಘ-ಸಂಸ್ಥೆಗಳು, ಮಠಗಳು ಮತ್ತು ಮತದಾರರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿವೆ.
ಭಾಲ್ಕಿ ಮಠದೊಂದಿಗಿನ ಖಂಡ್ರೆ ಕುಟುಂಬದ ವಿವಾದ ಮತ್ತು ಆನಂತರ ಭೀಮಣ್ಣ ಖಂಡ್ರೆಯವರು ಭಾಲ್ಕಿ ಮಠ ಮತ್ತು ಬಸವಾನುಯಾಯಿಗಳ ಅಭಿಲಾಶೆಗೆ ವಿರೋಧವಾಗಿ ಅಂದು ಬಸವಣ್ಣನ ನೆಲವಾಗಿರುವ ಬೀದರ ಜಿಲ್ಲೆಯಲ್ಲಿ ಬಸವಣ್ಣನವರನ್ನು ಗುರುವೆಂದು ಒಪ್ಪಿಕೊಳ್ಳದ ಮಠಾಧೀಶರ ಅಡ್ಡ ಪಲ್ಲಕ್ಕಿ ಉತ್ಸವ ಹಮ್ಮಿಕೊಂಡದ್ದು ಬೀದರ ಜಿಲ್ಲೆಯ ಬಸವಾನುಯಾಯಿ ಲಿಂಗಾಯತರಲ್ಲಿ ಬಹುದೊಡ್ಡ ಆಕ್ರೋಶವನ್ನೇ ಉಂಟು ಮಾಡಿತ್ತು. ಅದರ ತಕ್ಷಣದ ಪರಿಣಾಮದಿಂದ ಒಮ್ಮೆ ಖಂಡ್ರೆ ಕುಟುಂಬ ಚುನಾವಣೆಯಲ್ಲಿ ಸೋಲುಣ್ಣಬೇಕಾಯಿತು. ಆ ಸಿಟ್ಟು ಭವಿಷ್ಯತ್ತಿನಲ್ಲಿ ಇನ್ನಷ್ಟು ಬೃಹದಾಕಾರವಾಗಿ ಬೆಳೆಯುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಹೇಳಿಕೇಳಿ ಬೀದರ ಜಿಲ್ಲೆ ಬಸವಣ್ಣನವರ ಕರ್ಮಭೂಮಿ. ಅಲ್ಲಿನ ಬಹುತೇಕ ಲಿಂಗಾಯತರು ಬಸವಾನುಯಾಯಿಗಳು.
ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದಾಗ ಕಂದಾಯ ಇಲಾಖೆ ಕೊಡಮಾಡುವ ಜಾತಿ ಪ್ರಮಾಣಪತ್ರದಲ್ಲಿ ಲಿಂಗಾಯತ ಜೊತೆಗೆ ವೀರಶೈವ ಎಂಬ ಶಬ್ಧ ಸೇರಿಸಲು ಖಂಡ್ರೆಯವರೇ ಕಾರಣ, ಹಾಗೆ ಮಾಡಿದ ಖಂಡ್ರೆಯವರು ಲಿಂಗಾಯತ ಧರ್ಮ ಮತ್ತು ಬಸವ ತತ್ವಕ್ಕೆ ದ್ರೋಹ ಮಾಡಿದರೆನ್ನುವ ಸಿಟ್ಟು ಆ ಜಿಲ್ಲೆಯ ಲಿಂಗಾಯತ ಸಮುದಾಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಆದ್ದರಿಂದ ಇಡೀ ಜಿಲ್ಲೆಯ ಲಿಂಗಾಯತ ಸಮುದಾಯ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವಂತಾಗಿದೆ. ಈಗ ಕಾಂಗ್ರೆಸ್ ಈಶ್ವರ ಖಂಡ್ರೆಯನ್ನು ಪಕ್ಷದ ಕಾರ್ಯಾಧ್ಯಕ್ಷನನ್ನಾಗಿಸಿದೆ. ಈಶ್ವರ ಖಂಡ್ರೆ ತಂದೆಯಂತೆ ಅದೇ ವೀರಶೈವ ಮಹಾಸಭೆಯ ಪದಾಧಿಕಾರಿಯಾಗಿದ್ದು ಮಾಮೂಲಿನಂತೆ ಬಸವ ತತ್ವ ಮತ್ತು ಲಿಂಗಾಯತ ಧರ್ಮ ವಿರೋಧಿ ನಿಲುವು ಹೊಂದಿರುವುದು ಸ್ಪಷ್ಟ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮೊದಲು ಹಾನಿಯಾಗಿರುವುದು ಬೀದರ ಜಿಲ್ಲೆಯಲ್ಲಿ. ಉಳಿದ ಜಿಲ್ಲೆಗಳಲ್ಲಿ ಖಂಡ್ರೆ ಪ್ರಭಾವ ಅಷ್ಟಕ್ಕಷ್ಟೆ.
ಮುಂದುವರೆಯುವುದು….