ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಮತ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ಹಲವು ಕಡೆ ತೆರಳಿ, ಬಿಜೆಪಿ ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎನ್ನುವ ಆರೋಪವೂ ಸುದೀಪ್ ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿದೆ. ಈ ಹಿಂದೆ ಸುದೀಪ್ ಕೊಳ್ಳೇಗಾಲ ಶಾಸಕ ನಂಜುಡಸ್ವಾಮಿ ಮಗನಿಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗಿತ್ತು.

ಇದಕ್ಕೆ ಖುದ್ದು ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಜಿ.ಎನ್. ನಂಜುಂಡಸ್ವಾಮಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕ ಎನ್. ಮಹೇಶ್ ಪರ ಸುದೀಪ್ ಪ್ರಚಾರ ಮಾಡಲು ಬರುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸಿಲ್ಲ. ಈ ಕಾರಣಕ್ಕೆ ಸುದೀಪ್ ಅವರನ್ನು ಅಣಕಿಸುವ ಕೆಲಸ ಆಗಿದೆ. ‘ಬಿಜೆಪಿ ಅಭ್ಯರ್ಥಿ ಎನ್. ಮಹೇಶ್ ಅವರು ಸುದೀಪ್ ಬರ್ತಾರೆ ಎನ್ನುತ್ತಲೇ ಇದ್ದಾರೆ. ಆದರೆ ನಮ್ಮಲ್ಲಿ ಯಾರೇ ಬಂದರೂ ಊಟ ಮಾಡಿ, ಜೇಬಿಗೆ ಹಾಕಿಕೊಂಡು ಹೋಗ್ತಾರೆ’ ಎಂದು ನಂಜುಡಸ್ವಾಮಿ ಮಗ ಜಿ.ಎನ್. ಲೋಕೇಶ್ ಹೇಳಿದ್ದರು. ಇದು ಕಿಚ್ಚ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು. ಈ ವಿಚಾರದಲ್ಲಿ ಲೋಕೇಶ್ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿ ಬಂತು. ಈ ಬೆನ್ನಲ್ಲೇ ಸುದೀಪ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ‘ಕಿಚ್ಚ ಸುದೀಪ್ ಅವರು ನಂಜುಂಡಸ್ವಾಮಿ ಮಗ ಲೋಕೇಶ್ಗೆ ಕರೆ ಮಾಡಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ’ ಎಂಬ ಟ್ವೀಟ್ ಕೂಡ ವೈರಲ್ ಆಗಿತ್ತು. ಇದನ್ನು ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ನಾನು ಯಾರಿಗೂ ಕರೆ ಮಾಡಿ ನನ್ನ ಬಳಿ ಕ್ಷಮೆ ಕೇಳಿ ಎಂದು ಹೇಳಿಲ್ಲ. ಯಾರ ಬಳಿಯೋ ಕ್ಷಮೆ ಕೇಳಿಸಿ ನಾನು ಹೆಮ್ಮೆಪಡಲ್ಲ. ಎಲ್ಲಾ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಅನ್ನೋದು ಹಳೆಯ ಮಾತು. ಅದು ನಾನು ಹೇಳಿದ್ದಲ್ಲ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.














