ಇನ್ನೇನು ಕೆಲವೇ ದಿನಗಳಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಂತೂ ಚುನಾವಣೆ ಕಾವು ಜೋರಾಗಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಚುನಾವಣೆ ಹಂತದಲ್ಲಿರುವ ರಾಜಕೀಯ ನಾಯಕರ ನಡುವೆ ವಾಕ್ಸಮರವೂ ನಡೀತಿದೆ. ಇಂದು ಯಾದಗಿರಿ (Yadgiri) ಜಿಲ್ಲೆಯ ಶಹಪುರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಪರ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕಾಂಗ್ರೆಸ್ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೂ ಬರಲಿ, ಲೋಕಲ್ನವರೂ ಬರಲಿ. ಕೇಸರಿ ಅಲೆಯನ್ನು ತಡೆಗಟ್ಟಲಿ ನೋಡೋಣ. ಇಷ್ಟು ವರ್ಷ ದೇಶವನ್ನು ಮೋಸ, ಸುಳ್ಳಿನಿಂದ ಕಾಂಗ್ರೆಸ್ನವರು ಆಳ್ವಿಕೆ ಮಾಡಿದ್ದಾರೆ. ಇನ್ನುಮುಂದೆ ನಿಮ್ಮ ಆಟ, ಸುಳ್ಳು ನಡೆಯುವುದಿಲ್ಲ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ʻಸ್ವಾತಂತ್ರ್ಯ ಬಂದ್ಮೇಲೆ ದೇಶ ಒಡೆದಿರಿ. ಆ ನಂತರ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದೀರಿ. ವೀರಶೈವ ಲಿಂಗಾಯತರನ್ನು ಒಡೆಯಲು ಹೋಗಿ ಮಣ್ಣು ಮುಕ್ಕಿದ್ದೀರಿ. ಈಗ ಅದೇ ತಪ್ಪನ್ನು ಮಾಡುತ್ತಿದ್ದೀರಿ. ತಾಕತ್ ಇದ್ದರೆ, ಧಮ್ ಇದ್ದರೆ ಮೀಸಲಾತಿಯನ್ನು (Reservation) ಮುಟ್ಟಿ ನೋಡಿ. ಈ ಕೇಸರಿ ಅಲೆಯನ್ನು ನಿಲ್ಲಿಸಿ ಅಂತ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ (Congress) ನಾಯಕರಿಗೆ ಓಪನ್ ಚಾಲೆಂಜ್ ಹಾಕಿದ್ರು.