ಹುಬ್ಬಳ್ಳಿ : ಲಿಂಗಾಯತ ನಾಯಕತ್ವ ಇಲ್ಲದೆಯೂ ನಾವು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಸಾಬೀತುಪಡಿಸುವ ಸಲುವಾಗಿ ಬಿಎಲ್ ಸಂತೋಷ್ ಈ ರೀತಿಯ ಎಲ್ಲಾ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನನಗೆ ಬಿಜೆಪಿಯಿಂದಾದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ರಿಗೂ ಆಗಿದೆ. ಅವರಿಗೆ ಬಿಜೆಪಿಯಿಂದ ಟಿಕೆಟ್ ಮಿಸ್ ಆಗಲು ಇದೇ ಬಿ.ಎಲ್ ಸಂತೋಷ್ ಕಾರಣ ಎಂದು ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಗುಡುಗಿದ್ದಾರೆ.
ನಾನು ಬಿಜೆಪಿಯಲ್ಲಿದ್ದರೆ ಪ್ರಬಲ ಪ್ರತಿಸ್ಪರ್ಧಿಯಾಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಯ್ತು. ಇವರಿಗೆ ಲಿಂಗಾಯತ ನಾಯಕನಿಲ್ಲದ ಸರ್ಕಾರ ರಚನೆ ಮಾಡಬೇಕಿದೆ. ಈ ಮೂಲಕ ಶೆಟ್ಟರ್ ನಾಯಕತ್ವ ಕೊನೆಗಾಣಿಸಲು ಸಂಚು ನಡೆಯಿತು ಎಂದು ಆರೋಪಿಸಿದ್ದಾರೆ.
ಇಡೀ ದೇಶದಲ್ಲಿ ನಾನೇ ಮೊದಲು ಬಿಎಲ್ ಸಂತೋಷ್ ವಿರುದ್ಧ ಮಾತನಾಡಿದವನು. ಅವರ ವಿರುದ್ಧ ಮಾತನಾಡಿದ್ದಕ್ಕೆ ಇದೆಲ್ಲ ಸೂಚನೆ ಬಂದಿದೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಮುಗಿಸೋದೇ ಬಿಎಲ್ ಸಂತೋಷ್ ಉದ್ದೇಶ ಎಂದು ಶೆಟ್ಟರ್ ಕಿಡಿಕಾರಿದ್ದಾರೆ.