ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿರುವ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಬಿಜೆಪಿ ನಾಯಕರು ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಹೌದು.. ಶಿವಮೊಗ್ಗದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಸಮಾಜದ ಸಮಾವೇಶದಲ್ಲಿ ಆಯೋಜಕರು ತಮಿಳು ನಾಡಗೀತೆ ಪ್ಲೇ ಮಾಡಿದ್ದಾರೆ. ಸಮಾವೇಶ ಆರಂಭಕ್ಕೂ ಮುನ್ನ ಸಂಘಟಕರು ತಮಿಳು ನಾಡಗೀತೆ ಆಡಿಯೋ ಪ್ಲೇ ಮಾಡಿದ್ದಾರೆ. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮಿಳು ನಾಡಗೀತೆಗೆ ಎದ್ದುನಿಂತು ಗೌರವ ಸೂಚಿಸಿದ್ದಾರೆ. ವಿಧಾನಸಭಾ ಚುನಾವಣಾ ಕರ್ನಾಟಕ ಸಹ ಪ್ರಭಾರಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.
ಕೆಲಕಾಲ ನಾಡಗೀತೆ ಪ್ಲೇ ಆಗುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚೆತ್ತುಕೊಂಡಿದ್ದು, ಕೂಡಲೇ ಡಯಾಸ್ ಬಳಿ ತೆರಳಿ ತಮಿಳು ನಾಡಗೀತೆ ನಿಲ್ಲಿಸುವಂತೆ ಸಂಘಟಕರಿಗೆ ಸೂಚನೆ ನೀಡಿದ್ರು. ಬಳಿಕ ಕನ್ನಡ ನಾಡಗೀತೆ ಹಾಕಿಸಿ ಈಶ್ವರಪ್ಪ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ್ರು. ಸಮಾವೇಶದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ ಭಾಗಿಯಾಗಿದ್ದರು