ಇನ್ನೇನು ಕೆಲವೇ ದಿನಗಳಲ್ಲಿ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸಿದ್ದಾರೆ. ಜೆಡಿಎಸ್‌ನಿಂದ ಪುತ್ರ ಕುಮಾರಸ್ವಾಮಿ ಬೆಂಬಲಕ್ಕೆ ಖುದ್ದು ಹೆಚ್.ಡಿ.ದೇವೇಗೌಡರು ಅಖಾಡಕ್ಕಿಳಿದಿದ್ದಾರೆ. ಇಂದು ಹೆಚ್‌ಡಿಕೆ ಅವರ ಆರೋಗ್ಯ (Health) ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ (Channapatna Constituency) ಹೆಚ್‌ಡಿಕೆ ಪರ ಪ್ರಚಾರ ಮಾಡಿದ ಅನಿತಾ ಕುಮಾರಸ್ವಾಮಿ, ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡುತ್ತಾ, ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಜನ ಬುದ್ಧಿವಂತರಾಗಿದ್ದು, ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಕ್ಯಾಂಡಿಡೇಟ್, ಅವರನ್ನ ಗೆಲ್ಲಿಸಿದ್ರೆ ಕ್ಷೇತ್ರಕ್ಕೆ ಅನ್‌ಲಿಮಿಟೆಡ್ ಅನುದಾನ ಸಿಗಲಿದೆ. ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಭರವಸೆ ನೀಡಿದ್ರು.