ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್ಡಿಕೆ ನಡುವಿನ ವಾಕ್ಸಮರ ಯಾಕೋ ಕೊನೆಗಾಣುವಂತೆ ಕಾಣುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಹೆಚ್ಡಿಕೆ ಸುಮಲತಾ ವಿರುದ್ಧ ಹೇಳಿಕೆ ನೀಡಿದ್ದರು . ಇದೀಗ ಹೆಚ್ಡಿಕೆ ವಿರುದ್ಧ ಹರಿಹಾಯ್ದಿರುವ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಎಲ್ಲಾ ಕಡೆ ನಾನು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ಕರೆತಂದೆ ಎಂದು ಹೇಳುತ್ತಾರೆ. ಆದರೆ ಇಂತಹ ಮಾತುಗಳು ಹೇಸಿಗೆ ಎನಿಸುತ್ತವೆ. ಅಂಬರೀಶ್ಗೆ ಈ ರಾಜ್ಯದ ಜನತೆ ಗೌರವ ನೀಡಿದ್ದಾರೆ. ಯಾವುದೋ ನಾಯಕನಿಂದ ಅಂಬರೀಶ್ ಗೌರವ ಪಡೆದುಕೊಂಡಿಲ್ಲ ಎಂದಿದ್ದಾರೆ.

ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಹೆಚ್ಡಿ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾನು ದ್ವೇಷ ಮಾಡಿದ್ದೇನಾ ಅಥವಾ ಅವರ ಕುಟುಂಬ ದ್ವೇಷ ಮಾಡಿದೆಯಾ ಅನ್ನೋದನ್ನು ರಾಜ್ಯದ ಜನತೆ ನೋಡಿದ್ದಾರೆ. ಈಗ ಏನೇನೋ ಹೇಳಿಕೆ ನೀಡಿ ಜನರ ದಾರಿ ತಪ್ಪಿಸೋಕೆ ಪ್ಲಾನ್ ಮಾಡ್ತಿದ್ದಾರೆ ಅಂತಾ ಆಕ್ರೋಶ ಹೊರ ಹಾಕಿದ್ರು.
ಜೆಡಿಎಸ್ ಮಂಡ್ಯದಲ್ಲಿ 7ಕ್ಕೆ 7 ಸೀಟು ಗೆಲ್ಲೋಕೆ ಅಂಬರೀಶ್ ಕಾರಣ ಎಂದು ಈ ಹಿಂದೆ ಸುಮಲತಾ ಹೇಳಿದ್ದರು. ಆದರೆ ಈ ಮಾತನ್ನು ಜೆಡಿಎಸ್ ನಾಯಕರು ಒಪ್ಪಿಕೊಂಡಿರಲಿಲ್ಲ . ಇಂದು ಈ ವಿಚಾರವಾಗಿಯೂ ಮಾತನಾಡಿದ ಅವರು, ಜೆಡಿಎಸ್ನವರು ಇದನ್ನೆಲ್ಲ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ. ಜೆಡಿಎಸ್ ನವರು ಅಂಬರೀಶ್ರನ್ನು ಸಂಪರ್ಕಿಸಲು ನಮ್ಮ ಮನೆಗೆ ಬಾಗಿಲಿಗೆ ಎಷ್ಟು ಬಾರಿ ಬಂದಿದ್ರು ಅನ್ನೋದು ನನಗೆ ಗೊತ್ತಿದೆ ಎಂದಿದ್ದಾರೆ.












