ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ. ನಾಳೆ ಮೈಸೂರಿಗೆ ಪ್ರಿಯಾಂಕ ಗಾಂಧಿ ಆಗಮಿಸಲಿದ್ದು, ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಪ್ರಿಯಾಂಕ ಗಾಂಧಿ ಆಗಮನಕ್ಕೆ ಸಕಲ ಸಿದ್ಧತೆ ನಡೆದಿದ್ದು, ನರಸೀಪುರ ಮತ್ತು ಕೆ.ಆರ್.ನಗರದಲ್ಲಿ ಸಮಾವೇಶ ಆಯೋಜಿಸಲಾಗಿದೆ. ನಂಜನಗೂಡು ನರಸೀಪುರ ಮುಖ್ಯರಸ್ತೆಯ ಬನ್ನಳ್ಳಿ ಸಮೀಪ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಜವಾಬ್ದಾರಿಯನ್ನ ಮಾಜಿ ಸಚಿವ ಮಹದೇವಪ್ಪ ಹೊತ್ತಿಕೊಂಡಿದ್ದಾರೆ. ಸಮಾವೇಶದಲ್ಲಿ 50ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಮಹಿಳೆಯರು ಮತ್ತು ಗ್ರಾಮೀಣ ಮತದಾರರನ್ನ ಸೆಳೆಯಲು ಕಾಂಗ್ರೆಸ್ ತಯಾರಿ ನಡೆಸಿದೆ. ನೆನ್ನೆಯಷ್ಟೇ ರಾಹುಲ್ ಗಾಂಧಿ ಕೂಡ ಬಸವ ಕಲ್ಯಾಣದಲ್ಲಿ ಪ್ರಚಾರ ನಡೆಸಿದರು. ಇದೀಗ ನಾಳೆ ಅವರ ಸಹೋದರಿ ಪ್ರಿಯಾಂಕ ಗಾಂಧಿಯಿಂದ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ನಡೆಯಲಿದೆ. ಇನ್ನು ಈ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ನ ಶಾಸಕರು, ಮಾಜಿ ಶಾಸಕರು ಭಾಗಿಯಾಗಲಿದ್ದಾರೆ.
ಇನ್ನು ವಿಧಾನಸಭಾ ಚುನಾವಣೆಗೆ ಬಿಜೆಪಿ ಕೂಡ ಕಣಕ್ಕಿಳಿದಿದ್ದು, ಇಂದು ಹಳೆ ಮೈಸೂರು ಭಾಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚಾರ ನಡೆಸಲಿದ್ದಾರೆ. ಬೆಂಗಳೂರಿನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬಳಿಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ನಾಡ ಅದಿ ದೇವತೆ ದರ್ಶನ ಪಡೆದು, ಬಳಿಕ ಚಾಮರಾಜನಗರದತ್ತ ಅಮಿತ್ ಶಾ ತೆರಲಿದ್ದಾರೆ. ಗುಂಡ್ಲುಪೇಟೆಯಲ್ಲಿ ರೋಡ್ ಶೋನಲ್ಲಿ ಅಮಿತ್ ಶಾ ಭಾಗಿಯಾಗಿ, ಗುಂಡ್ಲುಪೇಟೆಯಲ್ಲಿ ಚಾಮರಾಜನಗರ ಭಾಗದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಅಮಿತ್ ಶಾ ಅವರು ಹಾಸನ ಜಿಲ್ಲೆಗೆ ತೆರಳಲಿದ್ದು, ಹಾಸನ ಪ್ರವಾಸದ ಬಳಿಕ ಮತ್ತೆ ಮೈಸೂರಿಗೆ ಆಗಮಿಸಿ, ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಲಿದ್ಧಾರೆ.
ಇನ್ನು ಚುನಾವಣೆ ಅಖಾಡಕ್ಕೆ ದೊಡ್ಡಗೌಡ್ರು ದುಮುಕಿದ್ದು, ಈ ಬಾರಿ, ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಕೂಡ ಪೈಪೋಟಿಗಿಳಿದಿದೆ. ಅನಾರೋಗ್ಯದ ಕಾರಣ ಚುನಾವಣೆ ಪ್ರಚಾರಗಳಿಂದ ದೇವೇಗೌಡರು ದೂರ ಉಳಿದಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ. ದೊಡ್ಡಗೌಡ್ರು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ನಾಳೆ ಮೈಸೂರು ಜಿಲ್ಲೆಗೆ ಹೆಚ್.ಡಿ.ದೇವಗೌಡರು ಆಗಮಿಸಲಿದ್ದು, ಪಿರಿಯಾಪಟ್ಟಣ ಮತ್ತು ಕೆಆರ್ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ, ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಪಿರಿಯಾಪಟ್ಟಣಕ್ಕೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿ, ಮದ್ಯಾಹ್ನ 2.15ಕ್ಕೆ ಕೆ.ಆರ್ ನಗರಕ್ಕೆ ಗೌಡ್ರು ಭೇಟಿ ನೀಡಲಿದ್ದಾರೆ. ಸಭೆಯ ಬಳಿಕ ಬೆಂಗಳೂರಿನತ್ತ ವಾಪಾಸ್ ಪಯಣ ಬೆಳೆಸಲಿದ್ದಾರೆ.