ʼಸಮಾಜದಲ್ಲಿನ ಜಾತಿ ತಾರತಮ್ಯ, ಶೋಷಣೆ, ದಬ್ಬಾಳಿಕೆ, ಕಂದಾಚಾರಗಳನ್ನು ಕಂಡ ಬಸವಣ್ಣನವರು ಇದರ ಬಗ್ಗೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡು, ಯಾರಿಗೂ ಹೆದರದೇ ತಮ್ಮ ಮನಸ್ಸಿನಲ್ಲಿ ಬಂದ ಸತ್ಯವನ್ನು ಸಮಾಜಕ್ಕೆ ತಿಳಿಸಿದರು. ಅದೇ ಸತ್ಯದ ಮಾರ್ಗದಲ್ಲಿ ನಡೆಯುವ ಮೂಲಕ ಬಸವಣ್ಣನವರು ಇಡೀ ದೇಶ ಹಾಗೂ ಸಮಾಜಕ್ಕೆ ಬೆಳಕಾಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಸವಣ್ಣನ ಗುಣಗಾನ ಮಾಡಿದರು.
ಬಸವ ಜಯಂತಿ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿ ಬಸವಣ್ಣನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ವಿವಿಧ ಸ್ವಾಮೀಜಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಬಸವಣ್ಣನವರ ಜಯಂತಿ ದಿನ ನಾನು ಇಲ್ಲಿಗೆ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ. ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದು ಆತಿಥ್ಯ ನೀಡಿದ್ದೀರಿ ನಿಮಗೆ ಧನ್ಯವಾದಗಳು. ಸ್ವಾಮೀಜಿಗಳು ತಮ್ಮ ಭಾಷಣದ ವೇಳೆ ಹಿಂದಿಯಲ್ಲಿ ನನಗೆ ಅರ್ಥ ಮಾಡಿಸಿದರು ಅದಕ್ಕಾಗಿ ನಾನು ಅವರಿಗೂ ಧನ್ಯವಾದಗಳು.
ಬಸವಣ್ಣನವರು ಲೋಕತಂತ್ರದ ದಾರಿಯನ್ನು ಭಾರತ ಹಾಗೂ ಪ್ರಪಂಚಕ್ಕೆ ಪರಿಚಯಿಸಿದರು. ಇದು ಸತ್ಯವಾಗಿದ್ದು, ಇದನ್ನು ನಾಶಪಡಿಸಲು ಸಾಧ್ಯವಿಲ್ಲ. ನಂತರ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದ್ದು, ಸಂಸತ್ತು, ಅಧಿಕಾರ ಬಂದಿದೆ. ಬಸವಣ್ಣನವರ ಆದರ್ಶಗಳು ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಡಗಿದೆ. ನಿಮ್ಮಲ್ಲಿ ಕತ್ತಲು ಆವರಿಸಿದರೆ, ಎಲ್ಲೋ ಒಂದು ಕಡೆಯಿಂದ ಬೆಳಕು ಗೋಚರಿಸುತ್ತದೆ. ಅದೇ ರೀತಿ ಸಮಾಜದಲ್ಲಿ ಸಮಾಜದಲ್ಲಿ ಕತ್ತಲು ಆವರಿಸಿದಾಗ ಬಸವಣ್ಣನವರು ಬೆಳಕಾಗಿ ಮೂಡಿದರು. ವ್ಯಕ್ತಿಗಳು ಸುಕಾಸುಮ್ಮನೆ ಬೆಳಕು ನೀಡುವುದಿಲ್ಲ.
ಅವರು ಮೊದಲು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಬೇರೆಯವರನ್ನು ಪ್ರಶ್ನೆ ಮಾಡಬಹುದು ಬಹಳ ಸುಲಭ, ಆದರೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವುದು ಬಹಳ ದೊಡ್ಡ ವಿಚಾರ. ಸ್ವಾಮೀಜಿಗಳು ಹೇಳಿದ ಪ್ರಕಾರ ಬಸವಣ್ಣನವರು 8ನೇ ವಯಸ್ಸಿನಲ್ಲೇ ಉಪನಯನ ನಿರಾಕರಿಸಿದರು. ಅನೇಕರು ಈ ವಿಚಾರವಾಗಿ ತಮಗೆ ತಾವೇ ಪ್ರಶ್ನಿಸುವುದಿಲ್ಲ, ಆದರೆ ಬಸವಣ್ಣನವರು ಪ್ರಶ್ನಿಸಿದರು.
ಇಲ್ಲಿ ಸ್ವಾಮೀಜಿಯವರನ್ನು ಕೇಳಿದೆ, ಬಸವಣ್ಣನವರಿಗೆ 8ನೇ ವಯಸ್ಸಿನಲ್ಲಿ ಈ ವಿಚಾರ ಹೇಗೆ ಅರ್ಥವಾಯಿತು ಎಂದು. ಅದಕ್ಕೆ ಅವರು ಹೇಳಿದರು. ಬಸವಣ್ಣನವರಿಗೆ ಬೇರೆ ಜಾತಿಯ ಸ್ನೇಹಿತರಿದ್ದರು. ಸಮಾಜ ಅವರ ಮೇಲೆ ದಾಳಿ ನಡೆಸಿದಾಗ ಬಸವಣ್ಣನವರು ತಮ್ಮ ಸ್ನೇಹಿತನ ಮೇಲೆ ದಾಳಿ ಯಾಕೆ ನಡೆಯುತ್ತಿದೆ ಎಂದು ತಮಗೆ ತಾವೇ ಪ್ರಶ್ನೆ ಕೇಳಿಕೊಂಡರು. ಅವರು ಜೀನವ ಪೂರ್ತಿ ಜಾತಿ ವ್ಯವಸ್ಥೆ, ದ್ವೇಷ, ಲೋಕತಂತ್ರದ ಬಗ್ಗೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡರು. ಈ ಪ್ರಶ್ನೆ ಕೇಳಿಕೊಂಡ ನಂತರ, ಅವರಿಗೆ ತಮ್ಮ ಮನದಲ್ಲಿ ಕಂಡುಕೊಂಡ ಸತ್ಯವನ್ನು ಜೀವನಪೂರ್ತಿ ಆ ಸತ್ಯವನ್ನು ಬಿಡಲಿಲ್ಲ.
ಅನೇಕರು ಪ್ರಶ್ನೆ ಕೇಳುತ್ತಾರೆ, ಸತ್ಯವನ್ನು ಅರಿಯುತ್ತಾರೆ. ಆದರೆ, ತಾವು ಅರಿತ ಸತ್ಯವನ್ನು ಸಮಾಜದಲ್ಲಿ ಹೇಳಲು ಹಿಂಜರಿಯುತ್ತಾರೆ. ಅನೇಕರಿಗೆ ಸತ್ಯ ಗೊತ್ತಿರುತ್ತದೆ, ಆದರೂ ಅವರು ಆ ಸತ್ಯದ ಬಗ್ಗೆ ಧ್ವನಿ ಎತ್ತುವುದಿಲ್ಲ. ಕಾರಣ ಅವರು ಹೆದರುತ್ತಾರೆ. ಆದರೆ ಬಸವಣ್ಣನವರು ಹೆದರಲಿಲ್ಲ, ತಮಗೆ ಅರಿವಾದ ಸತ್ಯವನ್ನು ಸಮಾಜದ ಮುಂದೆ ಇಟ್ಟರು. ಇದೇ ಕಾರಣಕ್ಕೆ ಅವರು ಇತರರಿಗಿಂತ ಬೇರೆಯದಾಗಿ ನೀಂತರು. ಇಂದು ನಾವು ಅವರು ಪ್ರತಿಮೆ ಮುಂದೆ ಫುಷ್ಪ ಅರ್ಪಣೆ ಮಾಡಲು ಕಾರಣವಿದೆ.
ಸಮಾಜದ ಮುಂದೆ ಸತ್ಯ ನುಡಿಯುವುದು ಸುಲಭದ ವಿಚಾರವಲ್ಲ. ಇಂದು ನಾವು ಬಸವಣ್ಣನವರ ಮುಂದೆ ಹೂವ ಇಡುತ್ತಿದ್ದೇವೆ. ಆದರೆ ಇವರು ಜೀವಂತವಾಗಿದ್ದಾಗ ಸತ್ಯ ನುಡಿದಿದ್ದರೆ ಅವರ ಮೇಲೆ ದಾಳಿ ಮಾಡಲಾಗುತ್ತಿತ್ತು. ಅವರಿಗೆ ಹೆದರಿಸುವ ಪ್ರಯತ್ನ ನಡೆಯುತ್ತಿತ್ತು, ಆದರೆ ಅವರು ಹೆದರಲಿಲ್ಲ, ಸತ್ಯದ ಮಾರ್ಗವನ್ನು ಬಿಡಲಿಲ್ಲ. ಇದೇ ಕಾರಣಕ್ಕೆ ನಾವಿಂದು ಅವರ ಮುಂದೆ ಹೂವ ಇಟ್ಟು ಗೌರವಿಸುತ್ತಿದ್ದೇವೆ.
ಸಮಾಜದಲ್ಲಿನ ತಪ್ಪುಗಳ ವಿಚಾರವಾಗಿ ಸತ್ಯ ಮಾತನಾಡದಿದ್ದರೆ, ಅವರಿಗೆ ಇಂತಹ ಗೌರವಗಳು ಸಿಗುವುದಿಲ್ಲ. ಹೆದರಿದರೆ, ಸತ್ಯದಿಂದ ದೂರ ಹೋದರೆ ನಮ್ಮ ಮುಂದೆ ಹೂವ ಇಡುವುದಿಲ್ಲ. ಇಂದು ಇಲ್ಲಿಗೆ ಬಂದು ನನಗೆ ಸಂತೋಷವಾಗಿದೆ. ಇಂದು ನಾನು ಸ್ವಾಮೀಜಿಗಳ ಭಾಷಣ ಕೇಳಿ, ಬಸವಣ್ಣನವರ ಹೋರಾಟ ಮಾಡಿದ ವಿಚಾರಕ್ಕೆ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ ಎಂಬುದು ಅರ್ಥವಾಗಿದೆ. ನನಗೆ ಇಂದು ಕಲಿಯಲು ಸಾಕಷ್ಟು ವಿಚಾರ ಸಿಕ್ಕಿತು. ನಾನು ಈ ಹಿಂದೆ ಬಸವಣ್ಣನವರ ಬಗ್ಗೆ ಓದಿ, ಕೇಳಿ ತಿಳಿದಿದ್ದೇನೆ. ಬಸವಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.
ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನು ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಅನೇಕರು ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಅದನ್ನು ಪಾಲಿಸುತ್ತಾರೆ. ಈ ಕೆಲವರಲ್ಲಿ ಬಸವಣ್ಣನವರೂ ಒಬ್ಬರು. ಇದೇ ಕಾರಣಕ್ಕೆ ನಮಗೆ ನಮ್ಮ ದೇಶಕ್ಕೆ ಬೆಳಕಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.