ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಪ್ರಮುಖ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆಯನ್ನು ಮಾಡುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆ.ಎಸ್ ಈಶ್ವರಪ್ಪಗೆ ಫೋನ್ ಮಾಡಿ ಮಾತನಾಡಿರುವ ವಿಚಾರ ಕಾಂಗ್ರೆಸ್ ವಾಕ್ಸಮರಕ್ಕೆ ಆಹಾರ ಆದಂತಿದೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ಫೋನ್ ಮಾಡಿ ಮಾತನಾಡಿದ್ದು ನನಗೆ ಖುಷಿ ಹಾಗೂ ಆಶ್ಚರ್ಯವನ್ನ ತಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಈಶ್ವರಪ್ಪ, ನಾನು ಹಿರಿಯರ ಸೂಚನೆ ಪ್ರಕಾರ ನಿವೃತ್ತಿ ಪತ್ರ ಬರೆದಿದ್ದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಜಗದೀಶ್ ಶೆಟ್ಟರ್ ಪಕ್ಷ ಬಿಡುವಾಗಲೂ ಅವರಿಗೆ ಪತ್ರ ಒಂದನ್ನು ಬರೆದಿದ್ದೆ. ಸಾಮಾನ್ಯ ಕಾರ್ಯಕರ್ತರನ್ನ ಪಕ್ಷ ಮರೆಯಲ್ಲ ಎಂದಿದ್ದಾರೆ ನರೇಂದ್ರ ಮೋದಿ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ತರವುದು ಮೋದಿ ಅವರ ಪ್ಲ್ಯಾನ್..!
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಸ್ವತಃ ಪ್ರಧಾನಿ ಅವರೇ ಈಶ್ವರಪ್ಪಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ರಾಜ್ಯ ರಾಜಕೀಯ ಪರಿಸ್ಥಿತಿಯನ್ನ ಅವರಿಂದ ತಿಳಿದುಕೊಂಡು, ಅವರಿಗೂ ದೈರ್ಯವನ್ನು ತುಂಬಿದ್ದಾರೆ. ಇದು ಪ್ರಧಾನಿ ಅವರ ಸೌಜನ್ಯಕ್ಕೆ ಮೆರುಗು. ಇದರಿಂದ ಈಶ್ವರಪ್ಪ ಕುಟುಂಬದವರು ಸಂತೋಷದಿಂದ ಇದ್ದಾರೆ ಎಂದಿದ್ದಾರೆ. ಕರ್ನಾಟಕದಲ್ಲಿ ಹೆಚ್ಚು ಸಮಯ ಕೊಟ್ಟು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಅಂತ ಅವರಿಗೆ ಸ್ಪಷ್ಟ ಕಳಕಳಿ ಇದೆ. ಎಲ್ಲರ ಸಹಕಾರದಿಂದ ಸ್ಪಷ್ಟ ಬಹುಮತ ಪಡೆದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರ್ತಿವಿ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಆದರೆ ನರೇಂದ್ರ ಮೋದಿ ಪಕ್ಷದ ಓರ್ವ ನಾಯಕನ ಸಮಾಧಾನ ಮಾಡಲು ಕರೆ ಮಾಡಿದ್ದು ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಮಾಡಿದೆ.
ಕಮಿಷನ್ ಪಡೆದು ರಾಜೀನಾಮೆ ಕೊಟ್ಟಿದ್ದ ಈಶ್ವರಪ್ಪ..!

ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿದ್ದರು. ಇನ್ನೊಂದು ಕಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂದ ಬೇರೆ ಸಾಕ್ಷಿ ಬೇಕೆ..? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ರೌಡಿಗಳಿಗೆ ಕೈ ಮುಗಿಯುತ್ತಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಗುತ್ತಿಗೆದಾರನ ಸಾವಿಗೆ ಕಾರಣವಾದ ಕೆ.ಎಸ್ ಈಶ್ವರಪ್ಪಗೆ ಕರೆ ಮಾಡಿ ಮಾತನಾಡುವ ಮೂಲಕ ಪ್ರೋತ್ಸಾಹಿಸುತ್ತಾರೆ. ಆದರೆ ಭ್ರಷ್ಟಾಚಾರದ ಬಗ್ಗೆ ಸ್ವತಃ ಪ್ರಧಾನಿಗೆ ದೂರುಗಳ ಪತ್ರಗಳಿಗೆ ಮಾತ್ರ ಮೌನವಹಿಸುತ್ತಾರೆ. ನೆರೆ ಸಂತ್ರಸ್ತರ ಗೋಳುಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಅಪರೂಪದ ಪ್ರಧಾನಿ ನರೇಂದ್ರ ಮೋದಿ ಎಂದು ವ್ಯಂಗ್ಯವಾಡಿದೆ ಕಾಂಗ್ರೆಸ್.

ಪ್ರಧಾನಿ ಮೇಲಿನ ಆರೋಪಗಳಿಗೆ ತಾಳೆ ಆಗುತ್ತಾ..?
ಪ್ರಧಾನಿ ನರೇಂದ್ರ ಮೋದಿ ಸತತವಾಗಿ 2023ರಲ್ಲಿ 8 ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮೇಲಿರುವ ಅಭಿಮಾನ ಎಂದಿದ್ದರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಆದರೆ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಪ್ರಧಾನಿ ಬೆಂಗಳೂರಿಗೆ ಬಂದರೂ ಕರ್ನಾಟಕದ ಬಗ್ಗೆ ಒಂದಿಷ್ಟು ಮಾತನಾಡಿರಲಿಲ್ಲ. ಆ ಬಳಿಕ ಸರ್ಕಾರಕ್ಕೆ ಬೇಕಾದಾಗ ಅನುದಾನ ನೀಡಲಿಲ್ಲ. ಈಗ ಚುನಾವಣೆ ಕಾರ್ಯಕ್ಕೆ ಮಾತ್ರ ದಂಡೆತ್ತಿ ಬರುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಪ್ರಧಾನಿ ಆದವರು ಪಕ್ಷದ ನಾಯಕ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದೆ ತಟಸ್ಥವಾಗಿದ್ದಾನೆ ಎನ್ನುವ ಕಾರಣಕ್ಕೆ ಪ್ರಧಾನಿಯೇ ಕರೆ ಮಾಡಿ ಸಮಾಧಾನ ಮಾಡುತ್ತಾರೆ ಎಂದರೆ ಪಕ್ಷದ ಮೇಲೆ ಇರುವ ನಿಷ್ಠೆ, ರಾಜ್ಯದ ಮೇಲೆ ಯಾಕೆ ಇರಲಿಲ್ಲ ಎನ್ನುವುದು ವಿಪಕ್ಷಗಳ ಆರೋಪ. ಪ್ರಧಾನಿ ಮೋದಿ ನಡೆದುಕೊಂಡಿರುವುದು ಹಾಗು ಈಗ ಪ್ರಧಾನಿ ಅವರು ರಾಜ್ಯ ಚುನಾವಣೆ ಮೇಲೆ ತೋರಿಸುತ್ತಿರುವ ಕಾಳಜಿ ನೋಡಿದಾಗ ವಿರೋಧ ಪಕ್ಷಗಳ ಆರೋಪ ಸರಿ ಎನಿಸುತ್ತದೆ ಅಲ್ಲವೇ..?











