ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಈ ಹಿಂದೆ ಕೆಲ ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದಿದ್ದರು. ಈ ಬಗ್ಗೆ ಸುದೀಪ್ ಆಪ್ತ ಜಾಕ್ ಮಂಜು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಪ್ರಕರಣವನ್ನ ಸಿಸಿಬಿ ತನಿಖೆ ನಡೆಸುತ್ತಿದ್ದರೂ ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ದೊಮ್ಮಲೂರಿನ ಪೋಸ್ಟ್ ಆಫೀಸ್ ಒಂದರಲ್ಲಿ ಕಿಡಿಗೇಡಿಗಳು ಸ್ವಿಫ್ಟ್ ಕಾರ್‌ನಲ್ಲಿ ಬಂದು ಪತ್ರವನ್ನ ಪೋಸ್ಟ್ ಮಾಡಿದ್ದನ್ನ ಸಿಸಿಬಿ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಪತ್ತೆಹಚ್ಚಿದ್ದರು. ಆದ್ರೆ ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ಪತ್ರವನ್ನು ಪೋಸ್ಟ್ ಮಾಡಿದ್ದು ಮುಂದಿನ ತನಿಖೆಯಿಂದ ತಿಳಿದು ಬಂತು.
ಈಗ ಇದೇ ಪ್ರಕರಣದಲ್ಲಿ ಸುದೀಪ್ ಅವರ ಮಾಜಿ ಕಾರ್ ಚಾಲಕನನ್ನ ವಿಚಾರಣೆ ನಡೆಸಲಾಗಿದೆ. ಜಾಕ್ ಮಂಜು ನೀಡಿದ್ದ ದೂರಿನನ್ವಯ, ಸುದೀಪ್‌ರ ಮಾಜಿ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತನ ಮೊಬೈಲ್ ಫೋನ್ಅನ್ನ ಪರಿಶೀಲನೆ ಮಾಡಲಾಗಿದೆ. ಆದರೆ ಆತನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದು ಸಿಸಿಬಿ ಪೊಲೀಸರಿಗೆ ತಿಳಿದು ಬಂದಿದೆ.
ಆತ ಮೂರು ವರ್ಷಗಳ ಹಿಂದೆಯೇ ಸುದೀಪ್ ಅವರ ಬಳಿ ಕೆಲಸ ಬಿಟ್ಟು ಸಂಪರ್ಕ ಕಡಿದುಕೊಂಡಿದ್ದಾನೆ. ದೂರು ನೀಡಿದ್ದ ಜಾಕ್ ಮಂಜು ಮಾಜಿ ಕಾರು ಚಾಲಕನ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರ ಹೊರತಾಗಿ ಇನ್ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ಇದು ತನಿಖಾಧಿಕಾರಿಗಳ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಿದೆ.