ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಮುಂದಿನ ಸಿನಿಮಾ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಇದೆ. ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.

ಇತ್ತೀಚೆಗಷ್ಟೇ ಅಖಿಲ್ ಹುಟ್ಟುಹಬ್ಬದ ಪ್ರಯುಕ್ತ ಅವರ ಖಡಕ್ ಲುಕ್‌ನ ಪೋಸ್ಟರ್‌ವೊಂದನ್ನ ರಿಲೀಸ್ ಮಾಡಲಾಗಿತ್ತು. ಇದೀಗ ʻಏಜೆಂಟ್ʼ ಚಿತ್ರತಂಡದಿಂದ ಮತ್ತೊಂದು ಪೋಸ್ಟರ್ ಅನಾವರಣ ಆಗಿದೆ. ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ.

ಹೌದು.. ಬಾಲಿವುಡ್ ನಟ ದಿನೋ ಮೋರಿಯಾ ʻಏಜೆಂಟ್ʼ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ನಲ್ಲಿ ‘ರಾಝ್’, ‘ಅಕ್ಸರ್’, ‘ಜೂಲಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ದಿನೋ ಮೋರಿಯಾ ಸಾಕಷ್ಟು ಬೇಡಿಕೆ ಹೊಂದಿದ್ದಾರೆ.

ಇದೀಗ ಅವರು ‘ಏಜೆಂಟ್’ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದು, ದಿನೋ ಮೋರಿಯಾ ಅವರ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಉದ್ದ ಕೂದಲು, ಮುಖದ ಮೇಲೆ ಗಾಯದ ಗುರುತು, ಕೈಯ್ಯಲ್ಲಿ ಗನ್ ಹಿಡಿದು ಅವರು ರಗಡ್ ಆಗಿ ಪೋಸ್ ಕೊಟ್ಟಿದ್ದಾರೆ. ಆ ಮೂಲಕ ಚಿತ್ರದ ಬಗೆಗಿನ ಕೌತುಕ ಹೆಚ್ಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ‘ಏಜೆಂಟ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೇ ಏಪ್ರಿಲ್ 28ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.







