ಕರ್ನಾಟಕದಲ್ಲಿ ಗುಜರಾತ್ ಮಾದರಿಯನ್ನು ಅಳವಡಿಸಲು ಹೋಗಿ ಬಿಜೆಪಿ ಹಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ರಿಗೂ ಟಿಕೆಟ್ ನಿರಾಕರಿಸಿದ್ದು, ಅವರು ತಮ್ಮ ನೋವನ್ನು ಹೊರ ಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ರಘುಪತಿ ಭಟ್, ನನಗಿನ್ನೂ 54 ವರ್ಷ, ಹೋರಾಟದ ಕಿಚ್ಚಿದೆ. ಸುಮ್ಮನೆ ಮನೆಯಲ್ಲಿ ಕೂರುವವನಲ್ಲ. ಯಾರೇ ನಿಂತರೂ ಗೆಲ್ಲುವ ಹಾಗೆ ಉಡುಪಿಯಲ್ಲಿ ಪಕ್ಷ ಕಟ್ಟಿದ್ದೇನೆ, ಆದರೆ, ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲವಾಗಿದೆ. ಪಾರ್ಟಿ ಬಗ್ಗೆ ಬೇಸರವಿಲ್ಲ, ಆದರೆ, ಪಕ್ಷ ನಡೆಸಿಕೊಂಡ ರೀತಿಗೆ ನನಗೆ ಬೇಸರವಿದೆ ಎಂದು ರಘುಪತಿ ಭಟ್ ನೋವು ತೋಡಿಕೊಂಡಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ ಅನ್ನುವುದು ಗೊತ್ತಿತ್ತು. ನನ್ನ ಕಾರ್ಯಕರ್ತರಲ್ಲೂ ಅದನ್ನೇ ಹೇಳಿದ್ದೆ, 2004 ರಲ್ಲಿ ಮೊದಲ ಬಾರಿ ಶಾಸಕನಾಗಿದ್ದಾಗ ನಾನು ಒಂದು ಮಾತು ಹೇಳಿದ್ದೆ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲುವ ಹಾಗೆ ಪಕ್ಷ ಕಟ್ಟುತ್ತೇನೆ ಎಂದು, ನನಗೆ ಅದರಲ್ಲಿ ಸಮಾಧಾನವಿದೆ, ಪಕ್ಷ ಈಗ ಬೆಳೆದಿದೆ, ಹಾಗಾಗಿ ನಾನು ಬೇಡವಾಗಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಏನೂ ಇಲ್ಲದ ನನಗೆ ಮೂರು ಬಾರಿ ಶಾಸಕನಾಗಲು ಪಕ್ಷ ಅವಕಾಶ ಕೊಟ್ಟಿದೆ, ಆದರೆ, ನಾಯಕರು ನಡೆಸಿಕೊಂಡಿರುವ ರೀತಿಯಿಂದ ಬೇಸರಾವಾಗಿದೆ. ಪಾರ್ಟಿ ಈಗ ಬೆಳೆದಿದೆ, ನನ್ನ ಅವಶ್ಯಕತೆ ಇಲ್ಲವಾಗಿದೆ. ನಾನೊಬ್ಬ ಜಾತಿ ಇಲ್ಲದವ, ಸಣ್ಣ ವ್ಯಕ್ತಿ, ಹಾಗಾಗಿ ನನ್ನನ್ನು ಈಗ ಯಾರಿಗೂ ಬೇಡವಾಗಿದೆ. ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ಕರೆ ಮಾಡಿದ್ದಾರೆ. ನಾನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ನನಗೆ ಕೇವಲ ಒಬ್ಬ ಜಿಲ್ಲಾಧ್ಯಕ್ಷ ಕರೆ ಮಾಡಿ ಕಾರಣ ತಿಳಿಸಿದ್ದರೂ ಸಾಕಿತ್ತು. ಸೌಜನ್ಯಕ್ಕೂ ಯಾವ ನಾಯಕರೂ ಕರೆ ಮಾಡಿಲ್ಲ, ಪಕ್ಷಕ್ಕಾಗಿ ಹೀಗೆ ದುಡಿದವರಿಗೆ ಕೊಡುವ ಗೌರವ ಇದಲ್ಲ ಎಂದು ಭಟ್ ಹೇಳಿದ್ದಾರೆ.

ಇನ್ನು ಸುಳ್ಯ ಶಾಸಕ, ಮೀನುಗಾರಿಕಾ ಸಚಿವ ಎಸ್.ಅಂಗಾರ ಕೂಡಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪಕ್ಷ ಟಿಕೆಟ್ ನೀಡದ ನೋವಿನಲ್ಲಿ ರಾಜಕಾರಣಕ್ಕೆ ಅವರು ಗುಡ್ ಬೈ ಅಂದಿದ್ದಾರೆ. ಅಲ್ಲದೆ, ಪಕ್ಷದ ಪರ ಪ್ರಚಾರಕ್ಕೂ ಹೋಗಲ್ಲ ಎಂದು ಅವರು ಹೇಳಿದ್ದಾರೆ.
ನಾನು ಪ್ರಾಮಾಣಿಕ ರಾಜಕಾರಣ ಮಾಡಿದೆ. ಯಾವುದೇ ಲಾಬಿ ಮಾಡಿಲ್ಲ, ಅದೇ ನನಗೆ ಮುಳುವಾಯ್ತು, ಪಕ್ಷ ಟಿಕೆಟ್ ನೀಡದಿರುವ ಕುರಿತು ನನಗೆ ಅಸಮಾಧಾನ ಇಲ್ಲ. ಆದರೆ, ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ. ನಾನು ಇನ್ನು ರಾಜಕಾರಣದಲ್ಲಿ ಇರಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಅಂಗಾರ ಹೇಳಿದ್ದಾರೆ.











