ಮುಂಬೈ : ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿದ್ದರೂ ಸಹ ಇಂದಿಗೂ ಅಭಿಮಾನಿಗಳ ಪಾಲಿನ ನೆಚ್ಚಿನ ಟೀಂ ಇಂಡಿಯಾ ನಾಯಕ ಎಂದೇ ಎನಿಸಿದ್ದಾರೆ. ಈ ಬಾರಿ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನ ತಮ್ಮ ಕೊನೆಯ ಆವೃತ್ತಿಯನ್ನು ಆಡುತ್ತಿದ್ದಾರೆ. ಹೀಗಾಗಿ ಈ ಬಾರಿ ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಕಣ್ತುಂಬಿಕೊಳ್ಳಲೆಂದೇ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ.
ಟೀಂ ಇಂಡಿಯಾಗೆ ವಿಶ್ವಕಪ್ ಟ್ರೋಫಿ ತಂದುಕೊಟ್ಟ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಮಹೇಂದ್ರ ಸಿಂಗ್ ಧೋನಿಯ ಕ್ರಿಕೆಟ್ ಜೀವನದ ಸಾಧನೆಗೆ ಗೌರವಾರ್ಥವಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ವಿಶೇಷ ಗೌರವ ಸಲ್ಲಿಸುತ್ತಿದೆ.

2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾ ಮೊನ್ನೆ ಮೊನ್ನೆಯಷ್ಟೇ 12ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಈ ವಿನ್ನಿಂಗ್ ಶಾಟ್ ಈಗಲೂ ಕ್ರಿಕೆಟ್ ಅಭಿಮಾನಿಗಳ ಎದೆಯಲ್ಲಿ ಅಚ್ಚೊತ್ತಿದೆ. ಶ್ರೀಲಂಕಾದ ವೇಗಿ ಬೌಲರ್ ನುವಾನ್ ಕುಲಸೇಖರ ಬಾಲ್ಗೆ ಧೋನಿ ಬಾರಿಸಿದ್ದ ಸಿಕ್ಸರ್ ಕ್ರೀಡಾಂಗಣದ ಯಾವ ಆಸನದಲ್ಲಿ ಲ್ಯಾಂಡ್ ಆಯ್ತೋ ಆ ಆಸನಕ್ಕೆ ಧೋನಿ ಹೆಸರು ಇಡೋದಾಗಿ ಘೋಷಣೆ ಮಾಡಲಾಗಿತ್ತು.
ಅಂತೆಯೇ ಇದೀಗ ಆಸನಕ್ಕೆ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಇಡಲಾಗಿದ್ದು ಈ ಆಸನವನ್ನು ಸ್ವತಃ ಎಂಎಸ್ ಧೋನಿ ಉದ್ಘಾಟನೆ ಮಾಡಿದ್ದಾರೆ. ಈಗಾಗಲೇ ವಾಂಖೆಡೆ ಸ್ಟೇಡಿಯಂನಲ್ಲಿ ಸುನೀಲ್ ಗವಾಸ್ಕರ್, ಸಚಿನ್ ತೆಂಡಲ್ಕೂರ್, ವಿಜಯ್ ಮರ್ಚೆಂಟ್ ಸೇರಿದಂತೆ ಕ್ರಿಕೆಟ್ ಗಣ್ಯರ ಹೆಸರಿನಲ್ಲಿ ಸ್ಟೇಡಿಯಂ ಆಸನವಿದೆ. ಇದೀಗ ಈ ಸಾಲಿಗೆ ಧೋನಿ ಹೆಸರು ಸೇರಿಕೊಂಡತಾಗಿದೆ.