ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ವಿದ್ಯಾರ್ಹತೆ ಕೊರತೆಯು ದೇಶಕ್ಕೆ ಅಪಾಯಕಾರಿ ಎಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಜೈಲಿನಿಂದಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಸೋಡಿಯಾ ಪತ್ರ ಬರೆದಿದ್ದು, ಪ್ರಧಾನಿ ಮೋದಿಯ ಶಿಕ್ಷಣದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಸಿಸೋಡಿಯಾ ದೇಶದ ಪ್ರಗತಿಗೆ ಪ್ರಧಾನಿ ಮೋದಿ ಶಿಕ್ಷಣ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ನಾವು ಇಂದು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ, ಪ್ರಪಂಚದಾದ್ಯಂತ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರತಿ ದಿನ ಹೊಸ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಐ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದ ಪ್ರಧಾನಿಗೆ ಶಿಕ್ಷಣ ಕಡಿಮೆ, ಅವರಿಗೆ ವಿಜ್ಞಾನವೇ ಅರ್ಥವಾಗುತ್ತಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
“ನಾವು ಇಂದು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಪ್ರತಿದಿನ ಪ್ರಪಂಚದಾದ್ಯಂತ ನಡೆಯುತ್ತಿವೆ. ಜಗತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದೆ … ಪ್ರಧಾನಿಯನ್ನು ನೋಡಿದರೆ ಡ್ರೈನೇಜ್ ಗ್ಯಾಸ್ ಅನು ಆಹಾರಕ್ಕೆ ಬಳಸಬಹುದು ಎಂದು ಹೇಳುತ್ತಾರೆ. ಮೋಡಗಳ ಹಿಂದೆ ಇರುವ ವಿಮಾನಗಳನ್ನು ರಾಡಾರ್‌ನಿಂದ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪ್ರಧಾನಿ ಗೇಲಿಗೊಳಗಾಗುತ್ತಿದ್ದಾರೆ. ಇಂತಹ ಹೇಳಿಕೆಗಳು ದೇಶಕ್ಕೆ ಮಾರಕ ಎಂದು ಅವರು ಹೇಳಿದ್ದಾರೆ.
ಮೋದಿ ಅವರಿಗೆ ವಿಜ್ಞಾನ ಅರ್ಥವಾಗಲ್ಲ. ಅವರಿಗೆ ಶಿಕ್ಷಣದ ಮಹತ್ವವೇ ಅರ್ಥವಾಗಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60,000 ಶಾಲೆಗಳು ಮುಚ್ಚಲ್ಪಟ್ಟಿವೆ. ಭಾರತದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಹೇಳಿರುವ ಸಿಸೋಡಿಯಾ, “ಕಡಿಮೆ ಶಿಕ್ಷಣ ಪಡೆದ ಪ್ರಧಾನಿಗೆ ಇಂದಿನ ಯುವಕರ ಕನಸುಗಳನ್ನು ನನಸು ಮಾಡುವ ಸಾಮರ್ಥ್ಯವಿದೆಯೇ, ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ 60,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು, ಏಕೆ?. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿದ್ದರೆ ಮಕ್ಕಳು ಬರುತ್ತಿದ್ದರು, ಈಗ ದೆಹಲಿಯಲ್ಲಿ ನಡೆಯುತ್ತಿರುವಂತೆ ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ”ಎಂದು ಹೇಳಿದ್ದಾರೆ.






