ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗಿದೆ. ಕೊರೊನಾ ಮಾರಿಯಿಂದ ಪಾರಾದೆವು ಅಂದುಕೊಳ್ಳುವಷ್ಟರಲ್ಲಿ ದೇಶದಲ್ಲಿ ಮತ್ತೆ ಕೊರೊನಾ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6050 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ 13 ಪ್ರತಿಶತ ಏರಿಕೆ ಕಂಡಂತಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ, ಕೊರೊನಾದಿಂದಾಗಿ 14ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟೂ ಸಂಖ್ಯೆ 5,30,943 ಆಗಿದೆ.ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟೂ ಸಂಖ್ಯೆ 4,41,85,858 ತಲುಪಿದೆ.

ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣದಿಂದ ಆತಂಕ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹಿರಿಯ ಆರೋಗ್ಯ ಅಧಿಕಾರಿಗಳ ಜೊತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.





