~ ಡಾ. ಜೆ ಎಸ್ ಪಾಟೀಲ
ನವದೆಹಲಿ:ಏ.೦೨: ನರೇಂದ್ರ ದಾಮೋದರದಾಸ್ ಮೋದಿ, ಈ ಹೆಸರು ಭಾರತದ ರಾಜಕೀಯ ಕ್ಷೇತ್ರದಲ್ಲಿ ಮಾಡಿದಷ್ಟು ಸದ್ದು ಬಹುಶಃ ಬೇರಾವುದೇ ವ್ಯಕ್ತಿಗಳ ಹೆಸರುಗಳು ಮಾಡಿರಲಿಕ್ಕಿಲ್ಲ. ಜನಪರ ಹೊರಾಟ, ತ್ಯಾಗ, ಶ್ರೀಮಂತಿಕೆ, ರಾಜಕೀಯ ಹಿನ್ನೆಲೆ ಇವು ಯಾವುವೂ ಇಲ್ಲದೆ ಕೇವಲ ಸಂಘದ ಹಿನ್ನೆಲೆ ಮತ್ತು ಒಂದಷ್ಟು ಮಸಾಲೆ ಕತೆಗಳ ಮೂಲಕವೆ ಅತಿ ಕ್ಷೀಪ್ರಗತಿಯಲ್ಲಿ ಭಾರತದ ಬುದ್ದಿಹೀನ ಜನರ ಮಿದುಳನ್ನು ಆವರಿಸಿದ ವ್ಯಕ್ತಿ ಅಂದರೆ ಅದು ಮೋದಿಯವರು. ಅಷ್ಟೇ ತನ್ನ ಅತಿರಂಚಿತ ಮಾತುಗಳಿಂದ ಬುದ್ದಿವಂತ ಜನರ ಅಪಹಾಸ್ಯಕ್ಕೆ ಗುರಿಯಾದ ವ್ಯಕ್ತಿ ಕೂಡ ಮೋದಿ ಒಬ್ಬರೆ ಅಂದರೆ ತಪ್ಪಾಗಲಿಕ್ಕಿಲ್ಲ. ಸಮಯಕ್ಕೆ ತಕ್ಕಂತೆ ಸತ್ಯದ ತಲೆ ಮೇಲೆ ಹೊಡೆದಂತೆ ಮೋದಿ ಮಾತನಾಡುತ್ತಾರೆ. ಆದರೆ ಅವರು ಹೇಳಿದ್ದೆಲ್ಲವೂ ಸಂಪೂರ್ಣ ಸತ್ಯವಲ್ಲ ಎನ್ನುವುದು ವಿಚಾರ ಶಕ್ತಿಯ ಕೊರತೆಯಿರುವ ಜನರಿಗೆ ತಿಳಿಯುವುದಿಲ್ಲ.
ಹಿಂದೊಮ್ಮೆ ಮೋದಿಯವರು ಬಾಂಗ್ಲಾದೇಶದ ಪ್ರವಾಸಕ್ಕೆ ತೆರಳಿದ್ದರು. ಕೊರೋನ ಸಂಕಷ್ಟದ ಆ ಒಂದು ವರ್ಷ ಅವಧಿಯಲ್ಲಿ ಮೋದಿಯವರು ವಿದೇಶ ಪ್ರವಾಸವಿಲ್ಲದೆ ಸಾಕಷ್ಟು ಮಾನಸಿಕ ಹಿಂಸೆಗೆ ಗುರಿಯಾದಂತೆ ತೋರುತ್ತಿತ್ತು. ದೇಶ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಮೋದಿಯವರು ತಮಗೆ ತಿರುಗಾಡಲೆಂದೇ ಎರಡು ಐಷಾರಾಮಿ ವಿಮಾನಗಳನ್ನು ಖರೀದಿಸಿ ಇಟ್ಟಿದ್ದಾರೆ. ಅವುಗಳನ್ನು ಬಳಸುವ ಸಂದರ್ಭಕ್ಕಾಗಿ ಹಾತೊರೆಯುತ್ತಿದ್ದ ಮೋದಿಯವರು ಆಗ ಪಶ್ಚಿಮ ಬಂಗಾಳದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಂಗ್ಲಾ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಹೋಗಿ ಮೋದಿಯವರು ತಾನು ೧೯೭೧ ರ ಬಾಂಗ್ಲಾ ವಿಮೋಚನೆಯಲ್ಲಿ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದೆ ಎಂದು ಸಾರ್ವಜನಿಕವಾಗಿ ಹೇಳಿ ಜನರ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಆ ಸಂಗತಿ ಕುರಿತು ನಾನು ಈ ಲೇಖನದ ಕೊನೆಯಲ್ಲಿ ವಿವರಿಸುತ್ತೇನೆ.
ಈಗ ನಾವು ಮೋದಿಯವರ ಕುರಿತು ಹರಡಲಾದ ಹಲವಾರು ಕತೆಗಳ ಕುರಿತು ಒಂದು ಸಂಕ್ಷೀಪ್ತ ಅವಲೋಕನವನ್ನು ಮಾಡೋಣ:
೧. ನಮ್ಮೆಲ್ಲರಿಗೆ ಒಂದೊಂದೇ ಜನ್ಮ ದಿನಾಂಕಗಳಿದ್ದರೆ ಪ್ರಧಾನಿ ಮೋದಿಯವರಿಗೆ ಎರಡು ಜನ್ಮ ದಿನಾಂಕಗಳಿರುವುದು ವಿಶೇಷ. ಅವರ ಶೈಕ್ಷಣಿಕ ದಾಖಲೆಗಳಲ್ಲಿರುವಂತೆ ಮೊದಿಯವರ ಜನ್ಮ ದಿನಾಂಕ ೨೦ ಆಗಸ್ಟ್ ೧೯೪೯. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಅವರ ಜನ್ಮ ದಿನಾಂಕ ೧೭ ಸೆಪ್ಟೆಂಬರ್ ೧೯೫೦. ಇದು ಮೋದಿಯವರು ಸೃಷ್ಠಿಸಿದ ಸುಳ್ಳು ಎಂದು ನಾನು ಹೇಳಲಾರೆ. ಏಕೆಂದರೆ, ಅಷ್ಟೇನು ಸುಶಿಕ್ಷಿತರಲ್ಲದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಮೋದಿ ಈ ರೀತಿ ಎರಡು ಜನ್ಮ ದಿನಾಂಕ ಹೊಂದಿರುವ ಸಾಧ್ಯತೆಗಳು ಅವರ ಪಾಲಕರ ಅಚಾತುರ್ಯದಿಂದ ಆಗಿರುವ ಸಾಧ್ಯತೆಗಳಿವೆ. ಅದರಲ್ಲಿ ಮೋದಿಯವರ ತಪ್ಪಿದೆ ಎಂದು ನನಗೆ ಅನ್ನಿಸುವುದಿಲ್ಲ. ಆದರೂ ಎಲ್ಲರಲ್ಲಿ ಪಾರದರ್ಶಕತೆ ಬಯಸುವ ಮೋದಿಯವರ ಎಲ್ಲ ವೈಯಕ್ತಿಕ ಸಂಗತಿಗಳು ಕೂಡ ಪಾರದರ್ಶಕವಾಗಿರಲಿ ಎಂದು ನಾನು ಇಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದ್ದೇನೆ.
೨. ಮೋದಿಯವರು ೨೦೧೪ ರ ಸಾರ್ವತ್ರಿಕ ಚುನಾವಣೆಗೆ ಮೊದಲು ತಾನು ೬ ವರ್ಷದ ಬಾಲಕನಾಗಿದ್ದಾನ ಗುಜರಾತಿನ ವಡ್ನಾಗರ ರೈಲು ನಿಲ್ದಾಣದಲ್ಲಿ ಚಹ ಮಾರಿದ್ದಾಗಿ ಹೇಳಿಕೊಂಡಿದ್ದರು. ಮೋದಿ ಚಹ ಮಾರಿದ ಮಾತನ್ನು ಛೇಡಿಸಿ ಕಾಂಗ್ರೆಸ್ ಪಕ್ಷದ ಮಣಿಶಂಕರ್ ಅಯ್ಯರ್ ಅಂದು ನೀಡಿದ್ದ ಹೇಳಿಕೆಯನ್ನು ಭಾವನಾತ್ಮಕಗೊಳಿಸಿ ಚುನಾವಣೆ ಗೆಲ್ಲಲು ಮೋದಿ ಮೆಟ್ಟಿಲಾಗಿ ಹೇಗೆ ಬಳಸಿದ್ದರು ಎನ್ನುವ ಸಂಗತಿ ನಾವು ಬಲ್ಲೆವು. ಆದರೆ, ೧೯೪೯ ಅಥವ ೧೯೫೦ ರಲ್ಲಿ ಹುಟ್ಟಿದ ಮೋದಿ ಆರು ವರ್ಷದ ಬಾಲಕನಾಗಿದ್ದಾಗ ವಡ್ನಾಗರ ರೈಲು ನಿಲ್ದಾಣದಲ್ಲಿ ಚಹ ಮಾರಿದ್ದು ಸತ್ಯವೇ ಎಂದು ಹುಡುಕುತ್ತ ಹೊರಟಾಗ, ಆಗ ವಡ್ನಾಗರದಲ್ಲಿ ಕೇವಲ ರೈಲು ಹಳಿಗಳು ಹಾದು ಹೋಗಿದ್ದವೇ ಹೊರತು ರೈಲು ನಿಲ್ದಾಣ ಇನ್ನೂ ನಿರ್ಮಾಣವಾಗಿರಲಿಲ್ಲ. ಅಲ್ಲಿ ರೈಲು ನಿಲ್ದಾಣ ನಿರ್ಮಾಣವಾಗಿದ್ದು ೧೯೭೩ ರಲ್ಲಿ. ಆಗ ಮೋದಿಯವರಿಗೆ ೨೩ ವರ್ಷ ವಯಸ್ಸು. ಈ ವಿಷಯದ ಕುರಿತು ಉನ್ನತ ಮಟ್ಟದ ತನಿಖೆ ಅಥವಾ ಸಂಶೋಧನೆಯಾಗಿ ಈ ಮಹಾನ್ ನಾಯಕನ ಚರಿತ್ರೆಗೆ ಒಂದು ನಿರ್ಧಿಷ್ಟ ರೂಪು ಬರಲಿ ಎಂದು ಆಶಿಸುತ್ತೇನೆ.

೩. ಇನ್ನು ಮೋದಿಯವರು ತಾವೇ ಅನೇಕ ವೇಳೆ ಹೇಳಿಕೊಂಡಂತೆ ಅವರು ಚಿಕ್ಕವರಿರುವಾಗ ಮೊಸಳೆ ಮರಿಯನ್ನು ಹಿಡಿದು ತಂದದ್ದು, ಆಮೇಲೆ ಅವರ ತಾಯಿಯವರು ಬೈದು ಬುದ್ದಿ ಹೇಳಿದ ಮೇಲೆ ಅದನ್ನು ಮರಳಿ ಹೊಳೆಯಲ್ಲಿ ಬಿಟ್ಟು ಬಂದದ್ದು, ಹಾಗು ಚಿಕ್ಕಂದಿನಲ್ಲಿ ತೊಳೆಯದೆ ಮಾವಿನ ಹಣ್ಣುಗಳನ್ನು ತಿಂದದ್ದು ಮುಂತಾದ ರೋಚಕ ಕಥೆಗಳು ನಮ್ಮ ಕನ್ನಡದ ಖ್ಯಾತ ಸಾಹಿತಿ ಅನಂತಮೂರ್ತಿಯವರ ಕಾದಂಬರಿಯಲ್ಲಿ ಬರುವ ಬಾಲ್ಯದಲ್ಲಿ ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಸಂಗತಿಗಳಿಗಿಂತ ಭಿನ್ನವೂ ಅಲ್ಲ ಹಾಗು ಈ ಕತೆಗಳಲ್ಲಿ ಯಾವ ವಿಶೇಷತೆಯೂ ಇಲ್ಲ. ಏಕೆಂದರೆˌ ಇವು ನಾವೆಲ್ಲರೂ ಬಾಲ್ಯದಲ್ಲಿ ಕುತೂಹಲಕ್ಕಾಗಿ ಮಾಡಿದ ಸಹಜ ಹುಡುಗಾಟಿಕೆಯ ಕೆಲಸಗಳು. ಹಾಗಾಗಿ ಮೋದಿಯವರು ಈ ವಿಷಯದಲ್ಲಿ ಸುಳ್ಳು ಹೇಳಿದ್ದಾರೆಂದು ನನಗೆ ಅನ್ನಿಸುವುದಿಲ್ಲ. ಆದರೆ ಅತಿರಂಜಿಸಿ ಹೇಳಿದ್ದಾರೆ ಎಂದು ಖಂಡಿತ ಹೇಳಬಹುದು.
೪. ಮೋದಿಯವರು ೩೨ ವರ್ಷ ತಾವು ಭಿಕ್ಷೆ ಬೇಡಿ ಬದುಕ್ಕಿದ್ದಾಗಿ ಇನ್ನೊಂದು ಸಂದರ್ಭದಲ್ಲಿ ಹೇಳಿಕೊಂಡಿರುವ ಸುದ್ದಿಯಾಗಿತ್ತು. ಈಗ ಅವರಿಗೆ ೭೪-೭೫ ವರ್ಷ ವಯಸ್ಸು. ಕಳೆದು ೦೯ ವರ್ಷಗಳಿಂದ ದೇಶದ ಪ್ರಧಾನಿಯಾಗಿ, ಅದಕ್ಕೆ ಮೊದಲು ೧೩ ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಒಟ್ಟು ಇದುವರೆಗೆ ೨೨ ವರ್ಷ ಸುದೀರ್ಘ ಅವಧಿ ಅಧಿಕಾರ ಅನುಭವಿಸುತ್ತಿದ್ದಾರೆ. ಬಹುಶಃ ನೆಹರು ಮನೆತನ ಮತ್ತು ಜೋತಿ ಬಸು ನಂತರ ಅತ್ಯಂತ ಹೆಚ್ಚು ಅವಧಿ ಉನ್ನತ ಅಧಿಕಾರ ಅನುಭವಿಸಿದ ವ್ಯಕ್ತಿ ಎಂದರೆ ಮೋದಿ. ಅಂದರೆ ಅವರು ಮುಖ್ಯಮಂತ್ರಿಯಾದಾಗ ಅವರಿಗೆ ಅಂದಾಜು ೫೦ ವರ್ಷ ವಯಸ್ಸು. ಅವರು ಮನೆ ಬಿಟ್ಟು ಓಡಿ ಹೋಗಿದ್ದು ಅಂದಾಜು ಅವರ ೧೬-೧೮ ನೇ ವಯಸ್ಸಿನಲ್ಲಿ ಅಂತಿಟ್ಟುಕೊಂಡರೆ ಅವರು ತಮ್ಮ ೫೧ ನೇ ವಯಸ್ಸಿನ ತನಕ ಭಿಕ್ಷೆ ಬೇಡುತ್ತ ಅಜ್ಞಾತ ಬದುಕಿನಲ್ಲಿರಬೇಕಿತ್ತು. ಆದರೆ ಅವರು ಅಷ್ಟರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ಅವರು ಭಿಕ್ಷೆ ಬೇಡಿದ ಯಾವುದೇ ದಾಖಲೆಗಳು ನಮಗೆ ಸಿಗುವುದಿಲ್ಲ. ಈ ವಿಷಯದಲ್ಲಿ ಮೋದಿಯವರು ಸಾರ್ವಜನಿಕವಾಗಿ ಸ್ಪಷ್ಟನೆ ಕೊಡಬೇಕು. ಬಾಯಿ ತಪ್ಪಿನಿಂದ ೩೨ ವರ್ಷ ಭಿಕ್ಷೆ ಬೇಡಿದ್ದಾಗಿ ಹೇಳಿರುವ ಸಾಧ್ಯತೆಗಳಿರುತ್ತವೆ. ಅದಾಗ್ಯೂ ಭಿಕ್ಷೆ ಯಾಕೆ ಬೇಡಿದರು ಎನ್ನುವ ಕುರಿತು ಸ್ಪಷ್ಟನೆ ಕೊಟ್ಟರೆ ಇನ್ನೂ ಚಂದ.
ಮೋದಿ ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ. ಅವರೇ ಸಾಮಾಜಿಕ ಜಾಲತಾಣಗಳಲ್ಲಿ ತಾವು ಅಮೆರಿಕ ಮುಂತಾದ ವಿದೇಶಗಳ ಪ್ರವಾಸ ಮಾಡಿದ ಫೋಟೊಗಳನ್ನು ಹರಿ ಬಿಟ್ಟಿದ್ದಾರೆ. ಹಾಗಾದರೆ, ಅವರು ಭಿಕ್ಷೆ ಬೇಡುವಷ್ಟು ಬಡವರಾಗಿರಲಿಲ್ಲ. ಅಷ್ಟಕ್ಕೂ ಅವರು ಭಿಕ್ಷೆ ಬೇಡುವ ಪರಿಸ್ಥಿತಿ ಯಾಕೆ ಬಂತು ಎನ್ನುವುದು ಯಾರಿಗೂ ತಿಳಿದಿಲ್ಲ. ಅವರೂ ಕೂಡ ವಿವರಿಸಿಲ್ಲ. ಇನ್ನೊಂದು ಸಂಗತಿ ಏನೆಂದರೆ ಮೋದಿಯವರು ಈ ಅವಧಿಯಲ್ಲಿ ಹಿಮಾಲಯದಲ್ಲಿ ಉಗ್ರ ತಪ್ಪಸ್ಸು ಮಾಡುತ್ತಿದ್ದರು ಎಂದು ಮೋದಿ ಕುರಿತು ಒಂದು ರಂಜಕ ಕತೆ ಚಾಲ್ತಿಯಲ್ಲಿದೆ. ಮೋದಿ ಆಡಳಿತಾವಧಿಯಲ್ಲಿ ಮೋದಿ ಭಜನಾ ನಿರತ ಮಾಧ್ಯಮಗಳು ಈ ತರಹದ ಅನೇಕ ಕತೆಗಳು ಹರಡಿದ್ದಿದೆ. ಅವನ್ನು ಮೋದಿಯವರು ಅಲ್ಲಗಳೆಯದೆ ಇದ್ದದ್ದು ಇನ್ನೂ ಆಶ್ಚರ್ಯದ ಸಂಗತಿಯಾಗಿದೆ. ಇಂದಿಗೂ ಮೋದಿಯವರ ಅತಿಮಾನುಷ ಶಕ್ತಿಗಳ ಕುರಿತು ಕನ್ನಡದ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರೆನ್ನಿಸಿಕೊಂಡಿರುವ ಎಚ್ ಆರ್ ರಂಗನಾಥ ಮತ್ತು ಅಜೀತ್ ಹನುಮಕ್ಕನವರ್ ತಮ್ಮ ವಾಹಿನಿಗಳಲ್ಲಿ ಅತಿರಂಜಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ.
ಇಲ್ಲಿ ಮೋದಿಯವರು ಹೇಳಿದಂತೆ ಅವರು ೩೨ ವರ್ಷಗಳ ಭಿಕ್ಷಾಟನಾ ಬದುಕು, ಅವರ ವಿದೇಶಿ ಪ್ರವಾಸ, ಅವರ ಹಿಮಾಲಯದ ತಪಸ್ಸು ಮತ್ತಿತರ ಅತಿಮಾನುಷ ಶಕ್ತಿಯ ಕಥೆಗಳ ಕಾಲಮಾನ ಒಂದಕ್ಕೊಂದು ತಾಳೆಯಾಗುವುದಿಲ್ಲ. ಆದರೆ, ಮೋದಿಯವರು ಬಾಲ್ಯದಲ್ಲಿಯೇ ಸಂಘ ಪರಿವಾರ ಸೇರಿಕೊಂಡು ಮನೆಯ ಜವಾಬ್ದಾರಿ ಮರೆತು ದೇಶಾಂತರ ತಿರುಗುವುದರಿಂದ ಬೇಸತ್ತ ಅವರ ತಂದೆ ಮದುವೆ ಮಾಡಿದರೆ ಮಗ ಸರಿಹೋಗಬಹುದೆಂದು ಮದುವೆ ಮಾಡಿದ್ದರೆಂತಲು, ಹೆಂಡತಿಯೊಂದಿಗೆ ಸಂಸಾರ ಮಾಡಲಾಗದೆ ಮೋದಿಯವರು ಮನೆ ಬಿಟ್ಟು ಓಡಿ ಹೋದರೆಂತಲು ಕಥೆಗಳು ಜನಜನಿತವಾಗಿವೆ. ನಮ್ಮೂರಕಡೆಗೆ ಒಂದು ಮಾತಿದೆˌ ಅದೇನೆಂದರೆ; “ದೇಶಭಕ್ತಿಯ ಹೆಸರಲ್ಲಿ ಶಾನುಭೋಗರ ಸಂಗಕ್ಕೆ ಸೇರ್ಕೊಂಡ ಶೂದ್ರರ ಮಕ್ಕಳು ಉಡಾಳರಾಗುತ್ತವೆ, ಹುಷ್ಯಾರು” ಎನ್ನುವ ಎಚ್ಚರಿಕೆಯ ಮಾತು. ಆ ಮಾತು ಮೋದಿಯವರ ವಿಷಯದಲ್ಲಿ ಎಷ್ಟು ಸತ್ಯ ಎನ್ನುವ ಜಿಜ್ಞಾಸೆ ನನಗೆ.
ಸಾರ್ವಜನಿಕ ಜೀವನದಲ್ಲಿರುವ ಮೋದಿಯವರು ಒಮ್ಮೆಯೂ ತಮಗೆ ಮದುವೆಯಾಗಿತ್ತು ಎನ್ನುವ ಸಂಗತಿ ಬಹಿರಂಗ ಪಡಿಸಲಿಲ್ಲ. ಅಷ್ಟೇ ಅಲ್ಲದೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪ್ರಮಾಣಪತ್ರದಲ್ಲೂ ಈ ಸಂಗತಿ ನಮೂದಿಸಿರಲಿಲ್ಲ. ಪ್ರಧಾನಿಯಾದ ಮೇಲೆ ವೀರೋಧ ಪಕ್ಷಗಳು ತಕರಾರು ಎತ್ತಿದ ಮೇಲೆ ಮುಂದಿನ ಚುನಾವಣೆಯಲ್ಲಿ ಈ ಸಂಗತಿ ನಮೂದಿಸಿದರೇ ಹೊರತು ಆ ಕುರಿತು ಸಾರ್ವಜನಿಕವಾಗಿ ಒಂದೇ ಒಂದು ಶಬ್ಧ ಮೋದಿಯವರು ಮಾತನಾಡಲಿಲ್ಲ. ಮತ್ತೊಬ್ಬರಿಂದ ಪಾರದರ್ಶಕತೆ ಬಯಸುವ ಮೋದಿಯವರ ಜೀವನದ ನಿಘೂಡ ಸಂಗತಿಗಳು ಹೊರಬಂದಾಗ ಅನೇಕ ಅನುಮಾನಗಳು ಮೂಡುವುದು ಸಹಜ.
೫. ಮೋದಿಯವರ ಶೈಕ್ಷಣಿಕ ಅರ್ಹತೆಯ ಕುರಿತು ಅನೇಕ ವಿವಾದಗಳಿವೆ. ಅದಕ್ಕೆ ಕಾರಣ ಅವರೊಂದಿಗೆ ಕೂಡಿ ಓದಿದ್ದೇವೆ ಎಂದು ಇಲ್ಲಿಯವರೆಗೆ ಯಾವೊಬ್ಬ ಸಹಪಾಠಿಯೂ ಬಹಿರಂಗವಾಗಿ ಹೇಳಿಕೊಂಡ ದೃಷ್ಟಾಂತವಿಲ್ಲ. ಅವರಿಗೆ ಭೋದಿಸಿದ ಅಧ್ಯಾಪಕರೂ ಕೂಡ ಇದುವರೆಗೆ ಪತ್ತೆಯಾಗಿಲ್ಲ. ಮೋದಿಯವರು ತಾವೇ ಹೇಳಿಕೊಂಡಂತೆ ೧೯೭೮ರ ತುರ್ತುಪರಿಸ್ಥಿತಿಯಲ್ಲಿ ಭೂಗತರಾಗಿದ್ದರೆನ್ನುವ ಸಂಗತಿ. ಆದರೆ ಅದೇ ವರ್ಷ ಅವರು ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು ಎನ್ನುತ್ತವೆ ದಾಖಲೆಗಳು. ಮುಂದೆ ೧೯೮೩ ರಲ್ಲಿ ಗುಜರಾತ ವಿವಿ ಯಿಂದ ಸಮಗ್ರ ರಾಜಕೀಯಶಾಸ್ತ್ರ (Entier Political Science) ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೆನ್ನುತ್ತವೆ ಮತ್ತಷ್ಟು ದಾಖಲೆಗಳು. ಈ ಸಮಗ್ರ ರಾಜಕೀಯ ಶಾಸ್ತ್ರ ಎನ್ನುವ ವಿಷಯ ಇಡೀ ಜಗತ್ತಿನ ಯಾವುದಾದರೂ ವಿವಿಗಳಲ್ಲಿ ಒಂದು ಅಚ್ಛಿಕ ಅಧ್ಯಯನ ವಿಷಯವಾಗಿದೆಯಾ ಎನ್ನುವ ಅನುಮಾನ ನನಗೆ. ಈ ಅಧ್ಯಯನ ವಿಷಯದ ಕುರಿತು ಗುಜರಾತ್ ವಿವಿಯ ಪ್ರಾಧ್ಯಾಪಕರಿಗು ಕೂಡ ಗೊತ್ತಾಗಿದ್ದು ೨೦೧೪ ರಲ್ಲಿಯೆ ಎನ್ನುತ್ತಾರೆ ಕೆಲವರು. ಇದು ನಿಜವಾಗಿಯೂ ಸೋಜಿಗದ ಸಂಗತಿಯಾಗಿದೆ.
೧೯೮೦-೯೦ ರ ನಡುವೆ ಕನ್ನಡದಲ್ಲಿ ಜನಪ್ರೀಯವಾಗಿದ್ದ ತರಂಗ ವಾರಪತ್ರಿಕೆಯಲ್ಲಿ ಮೋದಿ ಒಬ್ಬ ಮೆಕ್ಯಾನಿಕಲ್ ಇಂಜಿನೀಯರ್ ಪದವಿಧರ ಎಂದು ಬರೆಯಲಾಗಿತ್ತು. ಮೋದಿಯವರ ಶೈಕ್ಷಣಿಕ ವಿವರಗಳ ಕುರಿತು ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯಿಂದ ಕೆರಳಿದ ಗುಜರಾತ್ ವಿವಿ ಅವರ ವಿರುದ್ಧ ಮೊಕದ್ದಮೆ ಹೂಡಿತ್ತು. ಇತ್ತೀಚಿಗೆ ನ್ಯಾಯಾಲಯ ಮೋದಿಯವರ ಕುರಿತು ಹೀಗೆಲ್ಲ ಮಾಹಿತಿ ಕೇಳಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ೨೫ ಸಾವಿರ ರೂಪಾಯಿ ದಂಡ ವಿಧಿಸಿದ್ದು ಇನ್ನೂ ಸೋಜಿಗದ ಸಂಗತಿಯಾಗಿದೆ. ಇದಲ್ಲದೆ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ತಾವೇ ಒಂದು ಟಿವಿ ಸಂದರ್ಶನದಲ್ಲಿ ತಾವು ಹೈಸ್ಕೂಲ್ ವರೆಗೆ ಮಾತ್ರ ಶಿಕ್ಷಣ ಪಡೆದದ್ದಾಗಿ ಹೇಳಿಕೊಂಡಿದ್ದರು. ಇವೆಲ್ಲ ಬೆಳವಣಿಗೆಗಳು ಅವರ ಶಿಕ್ಷಣದ ಕುರಿತು ಅನೇಕ ಶಂಕೆಗಳನ್ನು ಹುಟ್ಟುಹಾಕಿವೆ. ಅದನ್ನು ಮೋದಿಯವರೆ ನಿವಾರಣೆ ಮಾಡಬೇಕಾಗಿದೆ.
ಇನ್ನೊಂದು ಸೋಜಿಗದ ಸಂಗತಿ ಏನೆಂದರೆ ೧೯೭೮-೮೩ ರ ವರೆಗೆ ವಿವಿಗಳ ಪದವಿ ಪ್ರಮಾಣ ಪತ್ರ ಮತ್ತು ಅಂಕಪತ್ರಗಳು ಕೈಯಲ್ಲಿ ಬರೆಯುವ ಪದ್ದತಿ ಜಾರಿಯಲ್ಲಿತ್ತು. ಅದೇ ಆಗ ಭಾರತಕ್ಕೆ ಕಂಪ್ಯೂಟರ್ ಬಂದಿದ್ದರೂ ಕೂಡ ವ್ಯವಸ್ಥೆ ಇನ್ನೂ ಗಣಕೀಕರಣಗೊಂಡಿರಲಿಲ್ಲ. ಆದರೆ ಆ ಕಾಲದಲ್ಲಿ ಮೋದಿಯವರ ಪದವಿ ಪ್ರಮಾಣ ಪತ್ರ ಮತ್ತು ಅಂಕಪತ್ರಗಳು ಕಂಪ್ಯೂಟರ್ ಮುದ್ರಣ ರೂಪದಲ್ಲಿವೆ ಎನ್ನುವುದು ಆಶ್ಚರ್ಯದ ಸಂಗತಿ. ೧೯೯೨ ರಲ್ಲಿ ಮೈಕ್ರೋಸಾಫ್ಟ್ ಪೇಟೆಂಟ್ ಪಡೆದ ಫಾಂಟನ್ನಲ್ಲಿ ೧೯೭೮ ರಲ್ಲೇ ಮೋದಿಯವರ ಪ್ರಮಾಣಪತ್ರಗಳು ಮುದ್ರಣಗೊಂಡಿದ್ದು ಇನ್ನೂ ಆಶ್ಚರ್ಯದ ಸಂಗತಿ. ಅದೂ ಅಲ್ಲದೆ, ಮೋದಿಯವರ ಪ್ರಮಾಣ ಪತ್ರಗಳು ಮುದ್ರಿಸಿದ ದಿನಾಂಕ ಪರಿಶೀಲಿಸಿದಾಗ ಅದು ಭಾನುವಾರದ ರಜಾ ದಿನವನ್ನು ತೋರಿಸುತ್ತವೆ ಎನ್ನುತ್ತವೆ ಕೆಲವು ಮೂಲಗಳು. ಇದು ಇನ್ನೂ ಆಶ್ಚರ್ಯದ ಸಂಗತಿ. ಮೋದಿಯವರ ಮೂಲ ಅಂಕಪತ್ರ ಮತ್ತು ಪದವಿಪತ್ರಗಳು ಕಾಣೆಯಾಗಿದ್ದಲ್ಲಿ ಅವರು ಆಮೇಲೆ ಕಂಪ್ಯೂಟರೀಕೃತ ಪ್ರಮಾಣಪತ್ರಗಳು ಪಡೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ.
೬. ಮೋದಿಯವರು ಮತ್ತೊಂದು ಕಡೆ ೧೯೮೮ ಕ್ಕಿಂತ ಮೊದಲೆ ತಾವು ಡಿಜಿಟಲ್ ಕ್ಯಾಮೆರ ಉಪಯೋಗಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆ ಕ್ಯಾಮೆರದಿಂದ ತೆಗೆದ ಫೋಟೊಗಳನ್ನು ತಮ್ಮ ಗುರು ಅಡ್ವಾಣಿಯವರಿಗೆ ಇ-ಮೇಲ್ ಮುಖಾಂತರ ಕಳಿಸುತ್ತಿದ್ದರೆಂತಲೂ ಅವರು ಹೇಳಿಕೊಂಡಿದ್ದಾರೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶಗಳೆಂದರೆ ೧೯೮೮ ಕ್ಕೆ ಮುಂಚೆ ಭಾರತದಲ್ಲಿ ಇನ್ನೂ ಡಿಜಿಟಲ್ ಕ್ಯಾಮೆರಗಳ ಬಳಕೆ ಆರಂಭಗೊಂಡಿರಲಿಲ್ಲ. ಆಗಿನ್ನೂ ಭಾರತದಲ್ಲಿ ಇ-ಮೇಲ್ ಸೌಲಭ್ಯ ಕೂಡ ಬಳಕೆಯಲ್ಲಿರಲಿಲ್ಲ. ಮೋದಿಯವರು ಯಾವ ಡಿಜಿಟಲ್ ಕ್ಯಾಮೆರದಿಂದ ಫೋಟೊ ತೆಗೆದು ಅವುಗಳನ್ನು ಯಾವ ಇ-ಮೇಲ್ಗಳ ಮೂಲಕ ಅಡ್ವಾಣಿಯವರಿಗೆ ಕಳುಹಿಸಿದ್ದರೆನ್ನುವುದು ಸೋಜಿಗದ ಸಂಗತಿ. ಈ ಕುರಿತು ಮೋದಿಯವರೆ ಬಹಿರಂಗವಾಗಿ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟಪಡಿಸಬೇಕು.
ಆದರೆˌ ಯಾಕೊ ಗೊತ್ತಿಲ್ಲ ಮೋದಿಯವರಿಗು ಪತ್ರಿಕಾ ಗೋಷ್ಠಿಗೂ ಎಣ್ಣೆ ಸೀಗೆ ಸಂಬಂಧ. ಪ್ರಧಾನಿ ಮೋದಿಯವರ ಅಧಿಕಾರಾವಧಿಯ ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಯಾವುದೇ ಬಹಿರಂಗ ಪತ್ರಿಕಾಗೋಷ್ಠಿ ಕರೆದ ಉದಾಹರಣೆ ಇಲ್ಲ. ಒಮ್ಮೆ ಅದ್ಯಾವುದೊ ವಿಷಯದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರೂ ಕೂಡ ಅಲ್ಲಿ ಮಾತನಾಡಿದ್ದು ಪಕ್ಕಕ್ಕೆ ಕುಳಿತಿದ್ದ ಅಮಿತ್ ಶಾ ಹೊರತು ಮೋದಿಯವರಲ್ಲ. ಇದಷ್ಟೆ ಅಲ್ಲದೆ ಅವರು ನಿಷ್ಟುರ ಹಾಗು ಪ್ರಖ್ಯಾತ ಪತ್ರಕರ್ತರೊಂದಿಗೆ ಸಂದರ್ಶನ ನಡೆಸಿದ ಉದಾಹರಣೆ ಕೂಡ ಇಲ್ಲ. ಪತ್ರಕರ್ತರಲ್ಲದ ಸಿನೆಮಾ ನಟರೊಂದಿಗೆ ಮತ್ತು ಬಿಜೆಪಿಯೊಂದಿಗೆ ಸಖ್ಯ ಹೊಂದಿರುವ ಹಾಗು ಮೋದಿಯವರ ಅನುಯಾಯಿಗಳಾಗಿರುವ ಕೆಲವು ಆಯ್ದ ಪತ್ರಕರ್ತರೊಂದಿಗೆ ಮಾತ್ರ ಮೋದಿಯವರು ಕೆಲವು ಪೂರ್ವನಿರ್ಧಾರಿತ ಸಂದರ್ಶನಗಳು ನೀಡಿದ್ದಾರೆ.
ಇದಷ್ಟೇ ಅಲ್ಲದೆ ಮೋದಿಯವರು ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಮತ್ತು ನೆಹರು ಕುಟುಂಬದ ಬಗ್ಗೆ ಅನೇಕ ಕತೆಗಳನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ರಾಜಕೀಯ ಕಾರಣಗಳಿಂದ ದೇಶದ ಅಲ್ಪಸಂಖ್ಯಾತರ ಓಲೈಕೆ ಮಾಡಿರಬಹುದು, ಹಾಗೆಂದು ಆ ಪಕ್ಷ ಪಾಕಿಸ್ತಾನವನ್ನು ಓಲೈಸುವ ಕೆಲಸ ಎಂದೂ ಮಾಡಿದಂತೆ ನನಗೆ ಕಾಣುವುದಿಲ್ಲ. ದೇಶದ ಅಲ್ಪಸಂಖ್ಯಾತರ ಓಲೈಕೆಯ ಸಂಗತಿ ಮತ್ತು ಪಾಕಿಸ್ತಾನದ ಓಲೈಕೆ ಇವೆರಡು ವಿಭಿನ್ನ ವಿಷಯಗಳು. ಆದರೆ ಬಿಜೆಪಿ ಬೆಂಬಲಿತ ಐಟಿ ಸೆಲ್ಲಗಳು ನೆಹರು ಅವರು ಮುಸ್ಲಿಮರಾಗಿದ್ದರು ಎನ್ನುವ ಸುಳ್ಳು ಸುದ್ದಿ ಹರಿಬಿಡುವುದು ನಾವು ಗಮನಿಸಿದ್ದೇವೆ. ನೈಜದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಪ್ರಧಾನಿಗಳೂ ಕೂಡ ಪಾಕಿಸ್ತಾನಕ್ಕೆ ಭೇಟಿಕೊಟ್ಟ ಉದಾಹರಣೆ ಇಲ್ಲ.
ಕಾಂಗ್ರೆಸ್ ಆಡಳಿತದಲ್ಲಿ ಪಾಕಿಸ್ತಾನದೊಂದಿಗೆ ಮೂರು ಸಲ ಯಶಸ್ವಿ ಯುದ್ಧ ಮತ್ತು ಚೈನಾದೊಂದಿಗೆ ಒಂದು ವಿಫಲ ಯುದ್ಧ ನಡೆದಿವೆ. ಪಾಕಿಸ್ತಾನಕ್ಕೆ ಮೊದಲು ಭೇಟಿ ನೀಡಿದ ಭಾರತದ ಪ್ರಧಾನಿ ಬಿಜೆಪಿ ಪಕ್ಷಕ್ಕೆ ಸೇರಿದ ವಾಜಪೇಯಿ ಮತ್ತು ಆನಂತರ ಮೋದಿ. ಒಮ್ಮೆ ಅಡ್ವಾಣಿಯವರು ಸಹ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟದ್ದಿದೆ. ಆದರೆ, ಪಾಕಿಸ್ತಾನದೊಂದಿಗೆ ಮೋದಿ ಇಟ್ಟುಕೊಂಡ ಸಂಬಂಧಗಳು ಸಂಪೂರ್ಣ ಸ್ವಹಿತಾಸಕ್ತಿ ಹೊಂದಿವೆ ಎಂದು ವಿರೋಧಿಗಳು ಅಪಾದಿಸುತ್ತಾರೆ. ಮೋದಿ ಸರಕಾರದಲ್ಲಿ ರಕ್ಷಣಾ ಸಲಹೆಗಾರರಾಗಿರುವ ಅಜೀತ್ ದೋಬಲ್ ಮಗನ ಮತ್ತು ಮೋದಿ ಆಪ್ತ ಅದಾನಿಯ ಉದ್ಯಮ-ವ್ಯವಹಾರಗಳು ಪಾಕಿಸ್ತಾನದಲ್ಲಿರುವ ಸಂಗತಿ ನಾವೆಲ್ಲ ಬಲ್ಲೆವು. ಮೋದಿವರು ಮತ್ತವರ ಪಕ್ಷದವರು ತಮ್ಮನ್ನು ಪ್ರಶ್ನಿಸಿದವರನ್ನೆಲ್ಲ ಪಾಕೀಸ್ತಾನಕ್ಕೆ ಹೋಗಿ ಅಂತ ಹೇಳುತ್ತಲೆ ಪಾಕಿಸ್ತಾನದೊಂದಿಗೆ ಗುಪ್ತ ವ್ಯವಹಾರಗಳು ಹೊಂದಿದ್ದಾರೆ ಎನ್ನುತ್ತಾರೆ ಅವರ ವಿರೋಧಿಗಳು.
ಇನ್ನು ಮೋದಿಯವರು ಕಳೆದ ವರ್ಷ ಬಾಂಗ್ಲಾದೇಶಕ್ಕೆ ಹೋದಾಗ ಬಾಂಗ್ಲಾ ವಿಮೋಚನೆಯಲ್ಲಿ ತಾವು ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದೆ ಎಂಬ ವಿಶ್ಮಯಕಾರಿ ಹೇಳಿಕೆಯ ವಿಷಯಕ್ಕೆ ಬರೋಣ. ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ) ವಿಮೋಚನೆಗಾಗಿ ಬಹುದೊಡ್ಡ ಚಳುವಳಿ ೧೯೭೧ ರಲ್ಲಿ ನಡೆದಿತ್ತು. ಇದು ಸಂಪೂರ್ಣ ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿತ್ತು. ಪಶ್ಚಿಮ ಪಾಕಿಸ್ತಾನದೊಂದಿಗಿನ ಭಿನ್ನಾಭಿಪ್ರಾಯಗಳಿಂದ ಪೂರ್ವ ಪಾಕಿಸ್ತಾನದ ಜನರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸಿದ್ದರು. ಈ ಹೋರಾಟ ನಡೆದ್ದದ್ದು ಅಂದಿನ ಪೂರ್ವ ಪಾಕಿಸ್ತಾನದಲ್ಲಿ. ಭಾರತದಲ್ಲಿ ಬಾಂಗ್ಲಾ ವಿಮೋಚನೆಗಾಗಿ ಯಾವುದೇ ಸತ್ಯಾಗ್ರಹಗಳು ನಡೆದಿರಲಿಲ್ಲ. ಅದಕ್ಕೂ ಭಾರತಕ್ಕೂ ಯಾವುದೇ ರೀತಿಯ ಸಂಬಂಧಗಳಿರಲಿಲ್ಲ. ಆದರೆ, ಮೋದಿಯವರು ಎಲ್ಲಿ ಸತ್ಯಾಗ್ರಹ ಮಾಡಿ ಜೈಲಿಗೆ ಹೋದರು ಎನ್ನುವುದು ರಾಷ್ಟ್ರದ ಜನರಿಗೆ ಸ್ಪಷ್ಟ ಪಡಿಸಬೇಕಾಗಿದೆ.
ಬಂಗ್ಲಾ ವಿಮೋಚನೆಗೆ ನೆರವು ನೀಡಿದ್ದು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು. ಪಾಕಿಸ್ತಾನದೊಂದಿಗೆ ಯುದ್ಧವನ್ನು ಮಾಡಿದ ಭಾರತ ಸರಕಾರ, ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ವಾಜಪೇಯಿಯವರು ಇಂದಿರಾರ ಈ ಸಾಹಸವನ್ನು ಮೆಚ್ಚಿ ಆಕೆಯನ್ನು ದುರ್ಗೆಗೆ ಹೋಲಿಸಿ ಹಾಡಿ ಹೊಗಳಿದ್ದರು. ಇದೆಲ್ಲವನ್ನು ದೇಶದ ಜನ ನೋಡಿದ್ದಾರೆ. ಆದರೆ ಆಗ ೨೦-೨೧ ವರ್ಷದವರಾಗಿದ್ದ ಮೋದಿಯವರು ಇಂದಿನ ಮಾಧ್ಯಮಗಳು ವರ್ಣಿಸುವಂತೆ ಹಿಮಾಲಯದಲ್ಲಿ ತಪಸ್ಸು ನಿರತರಾಗಿದ್ದರೊ, ಅಥವಾ ಮೋದಿಯವರೇ ಹೆಳುವಂತೆ ಭಿಕ್ಷೆ ಬೇಡುತ್ತ ಅಜ್ಞಾತವಾಗಿ ಬದುಕುತ್ತಿದ್ದರೊ ಅಥವಾ ಅವರ ಬಗ್ಗೆ ಕೇಳಿಬರುವ ಜನಜನಿತ ಕಥೆಯಂತೆ ಅವರು ನಾಟಕ ಕಂಪನಿಯೊಂದರಲ್ಲಿ ತಬಲಾ ವಾದನ ಮತ್ತು ಚಿಕ್ಕಪುಟ್ಟ ಪಾತ್ರಗಳು ಮಾಡಿಕೊಂಡಿದ್ದರೊ ಅಥವಾ ಸಂಘ ಪರಿವಾರದ ಘನಂದಾರಿ ದೇಶಭಕ್ತಿಯ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರೊ ಎನ್ನುವುದನ್ನು ದೇಶದ ಜನತೆಗೆ ಸ್ಪಷ್ಟ ಪಡಿಸಬೇಕು. ಈಗ ಬಿಜೆಪಿ ಮತ್ತು ಸಂಘ ಪರಿವಾರ ಮೋದಿ ಹೇಳಿಕೆ ಸತ್ಯ ಎಂದು ಸಾಧಿಸಲು ಹೊರಟಂತಿದೆ. ಸಂಘ ಪರಿವಾರ ಬಾಂಗ್ಲಾ ವಿಮೋಚನೆಗೆ ಸತ್ಯಾಗ್ರಹ ಮಾಡಿದ್ದು ನಿಜ ಮತ್ತು ಅಂದಾಜು ೧೦೦೦ ಸಂಘಿಗಳು ಅಂದು ಬಂಧನಕ್ಕೊಳಗಾಗಿದ್ದರು ಎಂದು ವಾದಿಸುತ್ತಿದೆ. ಸುಳ್ಳನ್ನೇ ಹಾಸಿ ಹೊದ್ದವರಿಗೆ ಇದು ಸರಿ ಎಂದು ವಾದಿಸುವುದು ಕಷ್ಟದ ಕೆಲಸವಲ್ಲ ಬಿಡಿ.
~ ಡಾ. ಜೆ ಎಸ್ ಪಾಟೀಲ
