ಬೀದರ್ : ಮಾ.೨೯: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ಘೋಷಿಸಿದ್ದಾರೆ. ಬೀದರ್ ತಾಲೂಕಿನ ಕಮಠಾಣ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಒತ್ತಾಸೆಯ ಮೇರೆಗೆ ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಎಲ್ಲರೂ ನನ್ನೊಂದಿಗೆ ಕಡೆವರೆಗೂ ಇರುತ್ತೀರಿ ಎನ್ನುವ ನಂಬಿಕೆ ನನಗಿದೆ. ಬೀದರ್ ದಕ್ಷಿಣ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಕ್ಷೇತ್ರದ ಕಾರ್ಯಕರ್ತರು ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಬೇಕಿದೆ. ಕಾರ್ಯಕರ್ತರನ್ನು ಬೆಳೆಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಖಂಡಿತ ಕಣಕ್ಕಿಳಿಯುತ್ತೇನೆ ಎಂದು ತಿಳಿಸಿದರು.
ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಕಾರಣ ನೀಡಲಾಗುತ್ತಿದೆ. ಆದರೆ, ನಾನು ಮಾಜಿ ಮುಖ್ಯಮಂತ್ರಿ ದಿ.ಎನ್.ಧರ್ಮಸಿಂಗ್ ಅವರ ಅಳಿಯ ಎಂದು ಕುಟುಂಬವನ್ನು ನಡುವೆ ತರುತ್ತಿದ್ದಾರೆ. ಅವರ ಅಳಿಯ ಎಂದು ನಾನು ಟಿಕೆಟ್ ಕೇಳಿಲ್ಲ. 12 ವರ್ಷ ಪಕ್ಷ ಸಂಘಟಿಸಿ ಟಿಕೆಟ್ ಕೇಳಿದ್ದೇನೆ. ಆದರೂ, ಕಾಂಗ್ರೆಸ್ ನಾಯಕರು ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಬಾರಿ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಏನೆಂಬುದ್ದನ್ನು ತೋರಿಸಬೇಕಿದೆ.
ಕೂರಲು, ನಿಲ್ಲಲು, ನಡೆದಾಡಲು ಬಾರದ ಅಶೋಕ ಖೇಣಿ ಈ ಬಾರಿ ಕೇವಲ 5ಸಾವಿರ ಮತಗಳನ್ನೂ ಪಡೆಯುವುದಿಲ್ಲ. ಎರಡು ಬಾರಿ ಸಚಿವರಾಗಿ, ಮೂರು ಬಾರಿ ಶಾಸಕರಾಗಿ ಬಂಡೆಪ್ಪ ಕಾಶೆಂಪುರ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.ಕೋವಿಡ್ ಬಂದಾಗ ಬಂಡೆಪ್ಪ ಖಾಶೆಂಪುರ ಮನೆ ಬಿಟ್ಟು ಹೊರ ಬರಲೇ ಇಲ್ಲ. ಅಶೋಕ ಖೇಣಿ ಅಮೆರಿಕದ್ದಲ್ಲಿದ್ದರು. ಬಿಜೆಪಿ ಪಕ್ಷ ಕೇವಲ ಆಶ್ವಾಸನೆ ಮಾತ್ರ ನೀಡುತ್ತದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಆಗುವವರು ಬ್ರೋಕರ್ ಆಗಿ ಕೆಲಸ ಮಾಡುತ್ತಾರೆ ಎಂದು ದೂರಿದರು. ಎಷ್ಟೇ ಒತ್ತಡ ಬಂದರೂ ನಾನು ಹಿಂದೆ ಸರಿಯಲ್ಲ. ಈ ಬಾರಿ ನಾನು ಜನರೊಂದಿಗೆ ನಿಲ್ಲುವೆ. ಕುಟುಂಬದ ಒತ್ತಡಕ್ಕೂ ಮಣಿಯಲಾರೆ ಎಂದು ಸ್ಪಷ್ಟಪಡಿಸಿದರು. ಚಂದ್ರಾಸಿಂಗ್ ಚುನಾವಣೆಗೆ ಸ್ಪರ್ಧಿಸಬಾರದು. ಅವರು ಗೆದ್ದರೆ ಮುಂದಿನ 30-40 ವರ್ಷ ಕ್ಷೇತ್ರ ಬಿಡಲಾರರು ಎನ್ನುವ ಏಕೈಕ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿಸಲಾಗಿದೆ. ಜಿಲ್ಲೆಯಿಂದ ರಾಜ್ಯ ಮಟ್ಟದವರೆಗೆ ಇದರಲ್ಲಿ ಕುತಂತ್ರ ಮಾಡಲಾಗಿದೆ ಎಂದರು.
ಮುಖಂಡ ಯೂಸೂಫ್ ಅಲಿ ಜಮಾದಾರ್, ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣರಾವ್ ಭಂಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಫ್ರೋಜ್ ಖಾನ್, ಶಶಿಕಾಂತ ಪಾಟೀಲ ಚೌಳಿ, ಡಾ.ಎನ್.ಎ.ಖಾದ್ರಿ, ಶಿವರಾಜ ನೀಲಾ ಮೊದಲಾದವರು ಮಾತನಾಡಿ, ಚಂದ್ರಾಸಿಂಗ್ ಅವರನ್ನು ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದರು. ಪ್ರಮುಖರಾದ ಗೌಸೊದ್ದಿನ್ ಕಮಠಾಣ, ಅಶೋಕ ರೆಡ್ಡಿ ಬೇಮಳಖೇಡ, ವೈಜನಾಥ ಬೇಮಳಖೇಡ, ನಾಗಶೆಟ್ಟಿ ಮೀನಕೇರಾ, ಮಲ್ಲಿಕಾರ್ಜುನ ಕಾಶೆಂಪುರ, ವಿಜಯಕುಮಾರ ಬರೂರು, ಜೇಮ್ಸ್ ಕೊಳಾರ, ಮಾರುತಿ ಮಾಸ್ಟರ್, ದಶರಥ, ಪ್ರಕಾಶ್, ಸಾಬೇರ್, ಸುಧಾಕರ, ಶಂಕ್ರೆಪ್ಪ ಇದ್ದರು.