ಕನ್ನಡ ಚಿತ್ರರಂಗದ ಹಿರಿಯ ನಟ, ರೆಬಲ್ ಸ್ಟಾರ್ ಅಂಬರೀಶ್ರವರ ಸ್ಮಾರಕ ಹಾಗೂ, ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರು ಉದ್ಘಾಟನೆಗೆ ಕೌಂಟ್ಡೌನ್ ಶುರುವಾಗಿದೆ. ಇಂದು ಸಂಜೆ 5.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರೇಸ್ ಕೋರ್ಸ್ ರಸ್ತೆಯನ್ನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕಂಠೀರವ ಸ್ಟುಡಿಯೋದಲ್ಲಿರೋ ಅಂಬಿ ಸ್ಮಾರಕವನ್ನ ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ.

2018 ನವೆಂಬರ್ 24ರಂದು ನಟ ಅಂಬರೀಶ್ ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲಾಗಿತ್ತು. ಕಳೆದ ವರ್ಷ ಫೆಬ್ರವರಿ 27ರಂದು ಸಮಾಧಿ ಬಳಿ ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಸುಂದರವಾದ ಸ್ಮಾರಕ ತಲೆ ಎತ್ತಿದ್ದು ಇಂದು ಸ್ಮಾರಕ ಲೋಕಾರ್ಪಣೆ ಆಗಲಿದೆ. ಕಂಠೀರವ ಸ್ಟುಡಿಯೋದ 1 ಎಕರೆ 34 ಗುಂಟೆ ಜಾಗದಲ್ಲಿ ಅಂದಾಜು 12 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಸಿಎಂ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಭಿಮಾನಿಗಳು ಕೂಡ ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
