ಬೆಂಗಳೂರು : ಮಾ.25: ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಟಿಕೆಟ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಎರಡು ಕ್ಷೇತ್ರಗಳಿಂದ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದೇನೆ. ಇದೀಗ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗಿದೆ. ಕೋಲಾರ ಕ್ಷೇತ್ರದ ಟಿಕೆಟ್ ಕೂಡ ಕೊಡಬೇಕು ಎಂದು ಹೈಕಮಾಂಡ್ ಬಳಿ ಮನವಿ ಮಾಡಿದ್ದೇನೆ ಎಂದಿದ್ದಾರೆ. ಕೆಲವು ಶಾಸಕರಿಗೆ ಟಿಕೆಟ್ ಘೋಷಣೆ ಆಗದಿರುವ ಬಗ್ಗೆ ಮಾತಯನಾಡಿರುವ ಸಿದ್ದರಾಮಯ್ಯ, ಕೆಲವು ಕ್ಷೇತ್ರದಲ್ಲಿ ಎರಡು ಮೂರು ಜನರು ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಎಲ್ಲೆಲ್ಲಿ ಹೆಚ್ಚು ಅರ್ಜಿಗಳು ಬಂದಿದ್ದವೋ ಅಲ್ಲಿ ಟಿಕೆಟ್ ಫೈನಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಟಿಕೆಟ್ ನೀಡಲಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಟಿಕೆಟ್ ಪಡೆದ ಅಚ್ಚರಿ ಆಕಾಂಕ್ಷಿಗಳು..!
ಶಿವಮೊಗ್ಗದ ಸಾಗರ ಕ್ಷೇತ್ರದಲ್ಲಿ ನನ್ನ ಮಗಳಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯ ಮಾಡಿದ್ದರು. ಮಲ್ಲಿಕಾರ್ಜು ಖರ್ಗೆ, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಆದರೆ ಸಾಗರ ಕ್ಷೇತ್ರದ ಟಿಕೆಟ್ ಬೇಳೂರು ಗೋಪಾಲಕೃಷ್ಣಗೆ ಘೋಷಣೆ ಆಗಿದ್ದು, ಕಾಗೋಡು ಪುತ್ರಿ ರಾಜ ನಂದಿನಿಗೆ ಟಿಕೆಟ್ ಸಿಕ್ಕಿಲ್ಲ. ಇದೀಗ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ಗೆ ಎದುರಾಳಿಯಾಗಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ಶುರುವಾಗಿದ್ದು, ಕಾಂಗ್ರೆಸ್ ನಾಯಕರು ಯಾವ ರೀತಿಯಲ್ಲಿ ಸಮಾಧಾನ ಮಾಡಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಎಂಎಲ್ಸಿ ಪುಟ್ಟಣ್ಣಗೆ ಟಿಕೆಟ್ ಘೋಷಣೆ ಆಗಿದೆ. ಇತ್ತೀಚಿಗಷ್ಟೇ ಬಿಜೆಪಿ ಪಕ್ಷದ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಬಂದಿದ್ದ ಮಾಜಿ ಎಂಎಲ್ಸಿಗೆ ಟಿಕೆಟ್ ಫೈನಲ್ ಆಗಿದೆ. ಆದರೆ ರಾಜಾಜಿನಗರದಲ್ಲಿ ಭವ್ಯಾ ನರಸಿಂಹಮೂರ್ತಿ, ರಘುವೀರ್ಗೌಡ, ಪುಟ್ಟರಾಜು, ಮನೋಹರ್ ಟಿಕೆಟ್ಗಾಗಿ ಒತ್ತಾಯ ಮಾಡಿದ್ದರು. ನಾಲ್ವರಲ್ಲಿ ಯಾರಿಗೇ ಆದರೂ ಟಿಕೆಟ್ ನೀಡುವಂತೆ ಆಗ್ರಹ ಮಾಡಿದ್ದರು. ಆದರೂ ಕಾಂಗ್ರೆಸ್ ಸ್ಥಳೀಯ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲದಿರುವುದು ಅಸಮಾಧಾನಕ್ಕೆ ಕಾರಣ ಆಗುವ ಸಾಧ್ಯತೆ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ದೇಶದಿಂದ ಕಾಲ್ಕಿತ್ತು ವಿದೇಶ ಸೇರಿಕೊಂಡಿದ್ದ ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ್ ಖೇಣಿಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಾಸಿಂಗ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬರುತ್ತೇನೆ ಎಂದು ಚಂದ್ರಾಸಿಂಗ್ ಘೋಷಣೆ ಮಾಡಿದ್ದಾರೆ. ಕಳೆದ ಬಾರಿ 22 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ಅಶೋಕ್ ಖೇಣಿಗೆ 70 ವರ್ಷ ವಯಸ್ಸಾಗಿದೆ. ಯಾವಾ ಮಾನದಂಡದಲ್ಲಿ ಟಿಕೆಟ್ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿಗಷ್ಟೇ ನಿಧನರಾಗಿದ್ದ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಧೃವನಾರಾಯಣ ಅವರ ಪುತ್ರ ದರ್ಶನ್ ಧೃವನಾರಾಯಣ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಹೆಚ್.ಸಿ ಮಹದೇವಪ್ಪ ಸ್ಪರ್ಧೆಗೆ ಅಣಿ ಮಾಡಿದ್ದ ನಂಜನಗೂಡು ಎಸ್ಸಿ ಮೀಸಲು ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಡಬೇಕು ಎನ್ನುವ ಕೂಗು ಎದ್ದಿದೆ. ಇನ್ನು ಈ ಬಾರಿ ಕಲಬುರಗಿ ಉತ್ತರ ಕ್ಷೇತ್ರದಿಂದ ಟಿಕೆಟ್ ಕೈತಪ್ಪಲಿದೆ ಎನ್ನುವ ಮಾತುಗಳ ನಡುವೆಯೂ ಹಾಲಿ ಶಾಸಕಿ ಖನೀಜ್ ಫಾತೀಮಾ ಟಿಕೆಟ್ ಗಿಟ್ಟಿಸಿದಿದ್ದಾರೆ.
ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎದುರಾಳಿಯಾಗಿ ಕಾಂಗ್ರೆಸ್ನ ವಿನಯ್ ಕುಲಕರ್ಣಿ ಅಖಾಡಕ್ಕೆ ಇಳಿಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯಗೂ ಇನ್ನು ಟಿಕೆಟ್ ಖಚಿತವಾಗಿಲ್ಲ. ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ಗೂ ಕಾಂಗ್ರೆಸ್‌ನಲ್ಲಿ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಆದರೆ ಸಿದ್ದರಾಮಯ್ಯ ಕಿಮ್ಮನೆ ರತ್ನಾಕರ್ಗೆ ಕರೆ ಮಾಡಿದ್ದು, ನಿಮಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಮಾಡಬೇಡಿ ಹೇಳಿದ್ದಾರೆ ಎನ್ನಲಾಗಿದೆ.
ಕೃಷ್ಣಮಣಿ