ಮುಂಗಾರುಮಳೆ ಹುಡುಗಿ, ಪೂಜಾಗಾಂಧಿ ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ರಾಜಕೀಯದಲ್ಲಿ ಆಕ್ಟೀವ್ ಆಗಿರೋ ಪೂಜಾಗಾಂಧಿ, ಸ್ಯಾಂಡಲ್ ಕ್ವೀನ್ ರಮ್ಯಾ ಬಗ್ಗೆ ಪತ್ರವೊಂದನ್ನ ಬರೆದಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಕಾರ್ಯಕ್ರಮಕ್ಕೆ ರಮ್ಯಾ ಅತಿಥಿಯಾಗಿ ಬರ್ತಿದ್ದಾರೆ. ಹೀಗಾಗಿ ಪೂಜಾಗಾಂಧಿ ರಮ್ಯಾ ಬಗ್ಗೆ ಪತ್ರದ ಮೂಲಕ ತಮ್ಮ ಅನಿಸಿಕೆಯನ್ನ ಹೇಳಿಕೊಂಡಿದ್ದಾರೆ. ಪೂಜಾಗಾಂಧಿ ರಮ್ಯಾ ಬಗ್ಗೆ ಕನ್ನಡದಲ್ಲಿ ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ʻರಮೇಶ್ ಸರ್.. ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯೋ ಮಾತಿನ ಜುಗಲ್‌ಬಂದಿ ನೋಡೋಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯ್ತಿದ್ದೀನಿ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತೋ ಅದನ್ನೇ ಹೇಳ್ತಾರೆ. ನನಗೆ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮ ಸಹ ಕಲಾವಿದರ ಪರವಾಗಿ ನಿಲ್ತಾರೆ. ಅವರಲ್ಲಿನ ಈ ಗುಣ ಇಷ್ಟವಾಗುತ್ತೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ʼಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿʼ ಅಂತ ರಮ್ಯಾ ಹೇಳಿದ್ರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ ಅಂತ ಪೂಜಾಗಾಂಧಿ ರಮ್ಯಾ ಅವರಿಗೆ ಪತ್ರದ ಮೂಲಕ ಶುಭಹಾರೈಸಿದ್ದಾರೆ