ಬೆಂಗಳೂರು :ಮಾ.23: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನಿಧನದ ಸುದ್ದಿ ಕೇಳಿ ಅತೀವ ನೋವಾಗಿದೆ. ಭಾರತೀಯ ಅಧ್ಯಾತ್ಮ ಪರಂಪರೆಯ ಹಿರಿಯ ಸಾಧಕರಾಗಿದ್ದ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಚಿಕಿತ್ಸೆ ಫಲಿಸದ ಕಾರಣದಿಂದ ದೇಹತ್ಯಾಗ ಮಾಡಿದ್ದಾರೆ.
ಸ್ವಸ್ಥಿ ಶ್ರೀ ಚಾರುಕೀರ್ತಿ ಬಿರುದಾಂಕಿತ ಜೈನ ಭಟ್ಟಾರಕ ಶ್ರೀಗಳಿಗೆ ಭಾರತ ಮಾತ್ರವಲ್ಲದೆ ವಿಶ್ವದ ನಾನಾ ದೇಶಗಳಲ್ಲಿ ಭಕ್ತರಿದ್ದಾರೆ. ಇಡೀ ಭಕ್ತ ಸಮೂಹಕ್ಕೆ ಶ್ರೀಗಳ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಮನುಕುಲದ ಅಂತರಂಗ ಶುದ್ಧಿ ಮತ್ತು ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡುತ್ತಿದ್ದ ಶ್ರೀಗಳು ಸ್ವತಃ ಬೆಂಗಳೂರು ಮತ್ತು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕ್ರಮವಾಗಿ ತತ್ವಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿ ಅಪಾರ ಪಾಂಡಿತ್ಯ ಮತ್ತು ಪರಿಣತಿ ಹೊಂದಿದ್ದ ಇವರು ಪ್ರಾಕೃತ ವಿಶ್ವ ವಿದ್ಯಾಲಯವನ್ನೂ ಸ್ಥಾಪಿಸಿದ್ದರು. ಪಾಲಿಟೆಕ್ಷಿಕ್, ಎಂಜಿನಿಯರಿAಗ್, ನರ್ಸಿಂಗ್ ಕಾಲೇಜುಗಳನ್ನೂ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ದೊರಕಿಸಿದ್ದಾರೆ.
ನಾನು ಹಲವು ಬಾರಿ ಶ್ರೀಗಳ ದರ್ಶನ ಮತ್ತು ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಜೀವಮಾನದಲ್ಲಿ ಮೊಬೈಲ್ ಸ್ಪರ್ಷಿಸಿಲ್ಲ, ಆಧುನಿಕ ಸವಲತ್ತುಗಳನ್ನು ಆಶಿಸದೆ 12 ವರ್ಷಗಳ ಕಾಲ ವಾಹನ ಸಂಚಾರವನ್ನೇ ಮಾಡದೆ ಗ್ರಂಥ ರಚನೆ ಮಾಡಿದ್ದರು ಎನ್ನುವುದು ಬಹಳ ಉನ್ನತವಾದ ಮೌಲ್ಯ. ಜೈನ ಪರಂಪರೆ ಮತ್ತು ಅಧ್ಯಾತ್ಮದ ಮೌಲ್ಯಗಳನ್ನು ಹೇಳುವ ದವಳ ಮತ್ತು ಜಯದವಳ ಆಗಮ ಗ್ರಂಥಗಳನ್ನು ಶ್ರೀಗಳು ರಚನೆ ಮಾಡಿದ್ದಾರೆ ಎನ್ನುವುದನ್ನು ಕೇಳಿ ತಿಳಿದಿದ್ದೇನೆ.
1949ರಲ್ಲಿ ರತ್ನವರ್ಮರಾಗಿ ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದ್ದ ಶ್ರೀಗಳು 1970ರಲ್ಲಿ ಶ್ರವಣಬೆಳಗೊಳದ ಪೀಠಾಧಿಪತಿಗಳಾಗಿ ಹೊಯ್ಸಳ ವಂಶದ ಚಾರುಕೀರ್ತಿ ಪಟ್ಟವನ್ನೂ ಪಡೆದರು. ಇವರು ತಮ್ಮ ಅವಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವನ್ನು 1981, 1993, 2006 ಮತ್ತು 2018 ರಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇವರ ಅಧ್ಯಾತ್ಮದ ಸಾಧನೆ ನಮ್ಮ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಇವರ ಶಿಕ್ಷಣ ಕ್ಷೇತ್ರದ ಸಾಧನೆಗಳೂ ಹಲವು ತಲೆಮಾರುಗಳವರೆಗೂ ಬೆಳೆಯುತ್ತಲೇ ಇರುತ್ತದೆ. ಶ್ರೀಗಳ ನಿಧನ ಅತೀವ ನೋವು ತಂದಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೋರುತ್ತಾ, ಶ್ರದ್ದಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ..