ಹಾವೇರಿ : ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಹಾವೇರಿಯ ಬೀರೇಶ್ವರ ನಗರದಲ್ಲಿರುವ ಆರ್.ಶಂಕರ್ ನಿವಾಸದ ಮೇಲೆ ಈ ರೈಡ್ ನಡೆದಿದೆ. ಶಂಕರ್ ಗೃಹಕಚೇರಿ ಸಂಭಾಗಣದಲ್ಲಿ ಮತದಾರರಿಗೆ ವಿತರಣೆ ಮಾಡಬೇಕೆಂದು ತಂದು ಇರಿಸಲಾಗಿದ್ದು ಸೀರೆ ಬಾಕ್ಸ್, ತಟ್ಟೆ-ಲೋಟ , ಸ್ಕೂಲ್ ಬ್ಯಾಗ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ಎಲ್ಲಾ ವಸ್ತುಗಳ ಮೇಲೆ ಆರ್.ಶಂಕರ್ ಭಾವಚಿತ್ರವಿತ್ತು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಏಳು ಗಂಟೆಗೂ ಅಧಿಕ ಕಾಲ ಐಟಿ ಅಧಿಕಾರಿಗಳು ಆರ್.ಶಂಕರ್ ನಿವಾಸದಲ್ಲಿ ತಲಾಶ್ ನಡೆಸಿದ್ದು 8 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. 9 ಸಾವಿರಕ್ಕೂ ಹೆಚ್ಚಿನ ಶಾಲಾ- ಕಾಲೇಜು ಬ್ಯಾಗುಗಳು, 6000ಕ್ಕೂ ಅಧಿಕ ಸೀರೆಗಳು ಹಾಗೂ 40 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದು ಖಾಕಿ ವಶಕ್ಕೆ ನೀಡಿದ್ದಾರೆ.
ಇದರ ಜೊತೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ದಾಳಿ ನಡೆಸಿದ್ದು ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಪ್ತಿ ಮಾಡಲಾದ ಎಲ್ಲಾ ವಸ್ತುಗಳ ಜಿಎಸ್ಟಿ ಬಿಲ್ ನೀಡುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳು ಕೋರ್ಟ್ ಮುಂದೆ ಎಲ್ಲಾ ದಾಖಲೆಗಳನ್ನು ನೀಡಿ ಎಫ್ಐಆರ್ ದಾಖಲು ಮಾಡಲಿದೆ.