ಹೋಲಿ ಆಚರಣೆ ವೇಳೆ ಮಹಿಳೆಯರ ಮೇಲೆ ದೌರ್ಜನ್ಯಗಳಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾಧಾರಿ ಮಹಿಳೆ ತಲೆಗೆ ನೀರು ತುಂಬಿದ ಬಲೂನ್ ಅನ್ನು ಎಸೆದಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜಪಾನ್ ಮೂಲದ ಮಹಿಳೆ ಒಬ್ಬರಿಗೆ ಹೋಲಿ ಆಚರಣೆ ನೆಪದಲ್ಲಿ ದೌರ್ಜನ್ಯ ನಡೆದು ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಈ ವಿಡಿಯೋ ಕೂಡಾ ವೈರಲ್ ಆಗಿದೆ. ಅಪ್ರಾಪ್ತ ವಯಸ್ಸಿನ ಬಾಲಕರೇ ಈ ವಿಡಿಯೋದಲ್ಲಿ ನೀರಿನ ಬಲೂನ್ ಎಸೆದಿರುವುದು ಕಂಡು ಬಂದಿದ್ದು, ಮಕ್ಕಳ ಈ ವರ್ತನೆಗೆ ನಾಗರಿಕ ಸಮಾಜ ಬೆಚ್ಚಿ ಬಿದ್ದಿದೆ.
ಈ ವಿಡಿಯೋವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಘಟನೆಗೆ ಆಕ್ಷೇಪವೆತ್ತಿದ್ದಾರೆ.
“ಹೋಳಿ ಆಚರಿಸುವ ರೀತಿ ಇದೇನಾ? ಇಂತಹ ಘಟನೆಗಳು ನಮಗೆಲ್ಲ ಅವಮಾನ” ಎಂದು ಮಾರ್ಕಾಂಡೇಯ ಕಾಟ್ಜು ಟ್ವೀಟ್ ಮಾಡಿದ್ದಾರೆ.
ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹೋಲಿ ಆಚರಣೆಯಲ್ಲಿ ತೊಡಗಿರುವ ಹುಡುಗರು ವಾಟರ್ ಬಲೂನ್ ಅನ್ನು ತಲೆಗೆ ಎಸೆಯುವುದು ಕಂಡು ಬಂದಿದೆ. ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದೆ, ಸೀದಾ ನಡೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಸುಮ್ಮನಿರದ ಹುಡುಗರು ಮತ್ತೆ ಎರಡು ಬಾರಿ ವಾಟರ್ ಬಲೂನ್‌ಗಳನ್ನು ಎಸೆಯುತ್ತಾರೆ. ಕನಿಷ್ಠ ಮೂರು ಬಾರಿ ವಾಟರ್ ಬಲೂನ್ ಎಸೆಯವುದು ವಿಡಿಯೋದಲ್ಲಿ ಕಂಡು ಬಂದಿದೆ. ಮೂರನೇ ಎಸೆತಕ್ಕೆ ಮಹಿಳೆಯ ಕೈಯಲ್ಲಿದ್ದ ಲಕೋಟೆ ಕೆಳಗೆ ಬಿದ್ದಿದ್ದು, ಅದನ್ನು ಎತ್ತಿಕೊಂಡು ಮಹಿಳೆ ನೇರ ನಡೆದು ಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ.
ಹೋಲಿ ಆಚರಣೆಯ ನೆಪದಲ್ಲಿ ಮಹಿಳೆಯರ ವಿರುದ್ಧ ಇಂತಹ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಭಾರತೀಯರ ಸಂಸ್ಕೃತಿಯಲ್ಲ ಎಂದು ಹಲವರು ಆಕ್ಷೇಪ ಎತ್ತಿದ್ದಾರೆ. ಮಕ್ಕಳ ತಲೆಯಲ್ಲಿ ಧ್ವೇಷವನ್ನು ತುಂಬಲಾಗುತ್ತಿದೆ, ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ.