ಹಾಸನ: ನಾನು ಹೊಡೆದಂಗೆ ಮಾಡುತ್ತಾನೆ, ನೀವು ಅತ್ತಂಗ ಮಾಡು ಎನ್ನುವುದು ಎರಡೂ ರಾಷ್ಟ್ರೀಯ ಪಕ್ಷಗಳ ನೀತಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಾಣೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದಲ್ಲಿ ಯಾರು, ಯಾರಿಗೆ ಸುಪಾರಿ ಕೊಟ್ಟರು, ಲೋಕಸಭೆ ಚುನಾವಣೆಯಲ್ಲಿ ಯಾರು, ಯಾರನ್ನು ಸೋಲಿಸಲು ಸುಪಾರಿ ಕೊಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಂವಾದ ಕಾರ್ಯಕ್ರಮ ಆಯೋಜಿಸಿದ್ದಾರೆ. ನವ ಕರ್ನಾಟಕ ನಿರ್ಮಾಣಕ್ಕೆ ಸಂವಾದ ಕಾರ್ಯಕ್ರಮ. ಅದಕ್ಕೆ ವಿಧಾನ ಪರಿಷತ್ ಸಭಾಪತಿಗಳ ಅಧ್ಯಕ್ಷತೆ ಬೇರೆ. 2008 ರಿಂದ 2013 ಹಾಗೂ 2019 ರಿಂದ 2023 ರವರೆಗೆ ನಿಮ್ಮದೇ ಸರ್ಕಾರ ಇತ್ತಲ್ವಾ? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಆಗ ಏನು ಮಾಡಿದೀರಿ ಎಂದು ಪ್ರಶ್ನಿಸಿದರು.
ಮಹಾದಾಯಿಗೆ 1 ಸಾವಿರ ಕೋಟಿ, ಭದ್ರಾ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಎಷ್ಟು ಹಣ ಬಿಡುಗಡೆಯಾಗಿದೆ. ಎಷ್ಟು ಕೆಲಸವಾಗಿದೆ ಎಂಬುದನ್ನು ನಾಡಿನ ಜನತೆಗೆ ವಿವರಿಸಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಶಾಸಕರ ಮಗನ ಮನೆಯಲ್ಲಿ 8 ಕೋಟಿ ನಗದು ಸಿಕ್ಕಿತಲ್ಲ, ಅಂತಹ ನವಕರ್ನಾಟಕವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸ್ಥಾನ ಹರಾಜಿಗಿದೆ. ಟೆಂಡರ್ನಲ್ಲಿ ಅಕ್ರಮವಾಗಿದೆ ಎಂದು ಅವರ ಪಕ್ಷದವರೇ ಆದ ಬಸವರಾಜ ಪಾಟೀಲ್ ಯತ್ನಾಳ, ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಗುಂಡಿ ಬಗ್ಗೆ ಚರ್ಚೆ ಬೇಡ, ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡಿ ಎನ್ನುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಕಲಿ ಶ್ಯಾಮ್ ಈ ಬಗ್ಗೆ ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಹೇಳಲಿ ಎಂದರು. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ 29 ಸಾವಿರ ಕೋಟಿ ಅನುದಾನ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಎಷ್ಟು ಜನರ ಅಭಿವೃದ್ಧಿಯಾಗಿದೆ. ಎಷ್ಟು ದಲಿತರು ಜೀವನ ಕಟ್ಟಿಕೊಂಡಿದ್ದಾರೆ ಎಂಬುದನ್ನು ಅಂಕಿ–ಅಂಶ ಸಮೇತ ರಾಜ್ಯದ ಜನರ ಮುಂದಿಡಿ ಎಂದು ಸವಾಲು ಹಾಕಿದರು.
ಕುಟುಂಬ ಸರಿಪಡಿಸಲು ಆಗದವರು ರಾಜ್ಯವನ್ನು ಏನು ಸರಿ ಮಾಡುತ್ತಾರೆ ಎಂದು ಪ್ರಲ್ಹಾದ್ ಜೋಶಿ ಕೇಳುತ್ತಿದ್ದಾರೆ. ಪದೇ ಪದೇ ಹೇಳುತ್ತಿದ್ದೇನೆ. ನಮ್ಮ ಕುಟುಂಬ ರಾಜ್ಯವನ್ನು ಲೂಟಿ ಹೊಡೆಯಲು ಪೈಪೋಟಿ ಮಾಡುತ್ತಿಲ್ಲ. ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸಲು ರಾಜ್ಯದ ಆರೂವರೆ ಕೋಟಿ ಜನರನ್ನು ಒಳಗೊಂಡ ದೇವೇಗೌಡರ ಕುಟುಂಬ ಪೈಪೋಟಿ ಮಾಡುತ್ತಿದೆ ಎಂದರು.
ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಅಲ್ಲ
ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಅಲ್ಲ. 24 ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ದೇವೇಗೌಡರು ಪ್ರಧಾನಿಯಾಗಿದ್ದು. ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿದ್ದಾರೆ. 2018 ರಲ್ಲಿ ಅಧಿಕಾರ ಕೊಡಿ ಎಂದು ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ವಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ದೈವ ಸಂಕಲ್ಪ
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ದೈವ ಸಂಕಲ್ಪ. ಜನರು, ಕಾರ್ಯಕರ್ತರ ಆಶಯದಂತೆ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಶೀಘ್ರದಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ದು, ಅದರಲ್ಲಿ ಹಾಸನದ ಟಿಕೆಟ್ ಕೂಡ ಇರಲಿದೆ ಎಂದು ತಿಳಿಸಿದರು.