ಮಡಿಕೇರಿ: 2 ಕಾಮಗಾರಿಯ ಶೇ. 60 ರಷ್ಟು ಹಣವನ್ನು ನೀಡುವಂತೆ ಒತ್ತಡ ಹೇರಿ ತನ್ನ ಅಧೀನ ಅಧಿಕಾರಿಯೊಬ್ಬರಿಂದ 50 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಪೂರ್ಣಿಮಾ ಅವರನ್ನು ಬಂಧಿಸಿದ್ದಾರೆ.
ಇಲಾಖೆಯಿಂದ ₹ 1.60 ಲಕ್ಷ ವೆಚ್ಚದಲ್ಲಿ 2 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಶೇ 60ರಷ್ಟು ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು.
ಈ ಕಾಮಗಾರಿಯನ್ನು ಲಂಚ ಪಡೆಯದೇ ಕೈಗೊಂಡಿರುವುದಾಗಿ ಹೇಳಿದರೂ 1 ಲಕ್ಷ ಹಣ ನೀಡಬೇಕು. ಇಲ್ಲದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಅವರು ತನ್ನ ಅಧೀನ ಅಧಿಕಾರಿಗೆ ಒಡ್ಡಿದ್ದರು.
ಇದರ ಮುಂಗಡ ಹಣವಾಗಿ 50 ಸಾವಿರವನ್ನು ಅರಣ್ಯ ಭವನದ ಮುಂಭಾಗ ಇರುವ ತನ್ನ ಜೀಪಿನಲ್ಲಿ ಹಾಕುವಂತೆ ಪೂರ್ಣಿಮಾ ಸೂಚಿಸಿದ್ದರು. ಅದರಂತೆ ಅಧೀನ ಅಧಿಕಾರಿಯು ಗುರುವಾರ ಸಂಜೆ ಜೀಪಿನಲ್ಲಿ ಲಂಚದ ಹಣ ಹಾಕುತ್ತಿದ್ದಂತೆ ಪೂರ್ಣಿಮಾ ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮೈಸೂರಿನ ಡಿವೈಎಸ್’ಪಿ ಕೃಷ್ಣಯ್ಯ, ಮಡಿಕೇರಿಯ ಡಿವೈಎಸ್’ಪಿ ಪವನ್ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಇನ್ಸ್ಪೆಕ್ಟರ್ಗಳಾದ ಲೋಕೇಶ್, ಜಯರತ್ನಾ, ಸಿಬ್ಬಂದಿಯಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್ ಕುಮಾರ್, ಶಶಿ, ತ್ರಿವೇಣಿ, ಪ್ರಕಾಶ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.