ಹಾಸನ: ನಾನು ಹತ್ತು ರೂಪಾಯಿಯನ್ನೂ ತೆಗೆದುಕೊಳ್ಳದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ ? ಎಂದು ಕೆ.ಪಿ.ಟಿ.ಸಿ.ಎಲ್ ಸಹಾಯಕ ಇಂಜಿನಿಯರ್ ಅರ್ಜುನ್ ಅವರನ್ನು ಹೆಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ಹಳ್ಳಿಯವರಿಗೆ ಬೇಕಾಗಿರೋದು ಕುಡಿಯುವ ನೀರು, ಚರಂಡಿ ಮತ್ತು ವಿದ್ಯುತ್ ಇನ್ನೇನು ಕೇಳ್ತಾರೆ. ತಿಂಗಳಾದ್ರೂ ಒಂದು ಟ್ರಾನ್ಸ್ ಫಾರ್ಮರ್ ಚೇಂಜ್ ಮಾಡಿಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಾ ನೀವು. ಇನ್ನು ಎರಡು ತಿಂಗಳು ನಿಮ್ಮ ಅಧಿಕಾರಿ ಸಿಗದೆ ಎಲ್ಲೂ ಹೋಗಲ್ಲ ಬಲಿ ಹಾಕ್ತಿನಿ ನಂಗೆ ಗೊತ್ತಿದೆ ಎಂದು ಹರಿಹಾಯ್ದರು.

ಗ್ರಾಮಸಭೆಯಲ್ಲಿ ಆಶ್ರಯ ಮನೆ ಕೇಳಿದ ಜನರಿಗೆ ರೇವಣ್ಣ ಸಮಾಧಾನದ ಮಾತುಗಳನ್ನಾಡಿದ್ದಾರೆ. ಈಗಿರೋದು ಕೇವಲ 1.20 ಲಕ್ಷದ ಮನೆ ಯೋಜನೆ. ಈ ಯೋಜನೆಯಲ್ಲಿ ಮನೆ ತೆಗೆದುಕೊಂದರೆ ನೀವು ಅಡಿಪಾಯ ಕೂಡ ಹಾಕೋಕೆ ಆಗಲ್ಲ. ಈಗ ಬೇಡಾ ಸುಮ್ನಿರಿ, ಇನ್ನು ಎರಡು ತಿಂಗಳು ಕಾಯಿರಿ. ಮತ್ತೆ ಕುಮಾರಣ್ಣ ಬರ್ತಾರೆ, ಆಗ ಒಂದು ಆಶ್ರಯ ಮನೆಗೆ ಐದು ಲಕ್ಷ ಮಾಡಿಸ್ತಿನಿ ಆಗ ನಿಮಗೆ ಮನೆ ಕೊಡ್ತಿನಿ. ಐದು ಲಕ್ಷದ ಜೊತೆಗೆ ನೀವೊಂದು ಎರಡು ಲಕ್ಷ ಸೇರಿಸಿದ್ರೆ ಒಳ್ಳೆ ಮನೆ ಆಗುತ್ತೆ ಎಂದು ಸಮಾಧಾನ ಹೇಳಿದರು.
ಆಗ ಮಳೆಯಲ್ಲಿ ಮನೆ ಬಿದ್ದಾಗ ನಾನು ಎಲ್ಲರಿಗು ಐದು ಲಕ್ಷದ ಮನೆ ಕೊಡಿಸ್ಲಿಲ್ವಾ? ಹಾಗೆ ಎಲ್ಲರಿಗೂ ಮನೆ ಕೊಡಿಸ್ತಿನಿ ಸುಮ್ಮನಿರಿ ಎಂದು ಜನರಿಗೆ ಭರವಸೆ ನೀಡಿದರು.











