ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ 2ಎ ಮೀಸಲಾತಿ ನೀಡದೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಹೆದ್ದಾರಿ ಗಳನ್ನ ತಡೆದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್ ನಲ್ಲಿ ರಾಜ್ಯಕ್ಕೆ ಒಳಬರುವ ಹಾಗೂ ಹೊರ ಹೋಗುವ ವಾಹನಗಳನ್ನು ತಡೆದು ರಸ್ತೆ ತಡೆ ನಡೆಸಿದರು.ನೆಲಮಂಗಲ ಟೋಲ್ ನಿಂದಾ ಸುಮಾರು 4 ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು.
ಈ ಪ್ರತಿಭಟನೆಯ ನೇತೃತ್ವ ವನ್ನು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ವಹಿಸಿದ್ದರು.
ಮೋಸ ಮಾಡಿದ ಸಿಎಂ ಬೊಮ್ಮಾಯಿ ಸರ್ಕಾರ
ಈ ವೇಳೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿಗಳು ನಮ್ಮ ಸಮಾಜಕ್ಕೆ ತಾಯಿ ಆಣೆ ಮಾಡಿ ಸಚಿವ ಸಂಪುಟದಲ್ಲಿ ನಿರ್ಣಯ ಮಾಡುವ ಮಾತು ಕೊಟ್ಟಿದ್ರು. ಇಪ್ಪತ್ತು ಲಕ್ಷ ಜನರು ಹೋರಾಟವನ್ನು ಮುಖ್ಯಮಂತ್ರಿಗಳ ಮಾತಿಗೆ ಮರುಳಾಗಿ ಸ್ಥಗಿತ ಮಾಡಿದ್ದೆವು. ಕರ್ನಾಟಕದ ಇತಿಹಾಸದಲ್ಲಿ ದೊಡ್ಡ ಸಮುದಾಯಕ್ಕೆ ಮೋಸ ಮಾಡಿದ ಸರ್ಕಾರ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು ಎಂದರು.
ಮತ್ತೆ ಹೋರಾಟ ಪ್ರಾರಂಭಿಸಿ 50 ದಿನಗಳಾಯಿತು. ಮಾಚ್೯ 15 ದಕ್ಕೆ ಮತ್ತೆ ಗಡುವು ತಪ್ಪಿದಲ್ಲಿ 224 ಕ್ಷೇತ್ರಕ್ಕೆ ತೆರಳಿ ಜನರ ಬಳಿ ಹೋಗುತ್ತೆವೆ. ಜನತಾ ನ್ಯಾಯಾಲಯದ ಮುಂದೆ ನ್ಯಾಯ ಕೊಡುವ ರೀತಿಯಲ್ಲಿ ಉತ್ತರ ಕೊಡುತ್ತೇವೆ. ಹೀಗಾಗಿ ಪ್ರಧಾನಿ ಹಾಗೂ ಗೃಹ ಮಂತಿಗೆ ಪತ್ರ ಬರೆದಿರುವೆ. ನಾವು ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಟ್ಟಿಲ್ಲ. ಮೀಸಲಾತಿ ಕೊಡದಿದ್ರೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಬೀರುತ್ತೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಶೈಲೇಂದ್ರ ಪಾಟೀಲ್ ವಕೀಲರು, ಬಿ ಎಸ್ ನಾಗರಾಳ , ಶಿವಕುಮಾರ್ ಮೇಟಿ, ಮೋಹನಗೌಡ ಕೊಡಗು, ಮಲ್ಲನಗೌಡರ,ಶಿವಪುತ್ರಪ್ಪ ಮಲ್ಲೇವಾಡಿ, ಪುಟ್ಟರಾಜ ಹಳ್ಳದ ,ಕಾಂತೇಶ್ ಚಂದ್ರಶೇಖರ್ ಬೆಂಗಳೂರು ನಗರ ಜಿಲ್ಲೆಯ 300 ಕ್ಕೂ ಸಮುದಾಯದ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.