ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ದೇಶದ ಚಿತ್ತ ಸದ್ಯ ಕರ್ನಾಟಕದ ಮೇಲೆ ನೆಟ್ಟಿದೆ. ರಾಜಕೀಯ ನಾಯಕರು ಚುನಾವಣಾ ಪ್ರಚಾರವನ್ನು ಇನ್ನಷ್ಟು ಬಲಪಡಿಸಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಪಕ್ಷದ ಚುನಾವಣಾ ಪ್ರಣಾಳಿಕೆಗಳಂತೂ ಯೋಜನೆಗಳ ಮೇಲೆ ಯೋಜನೆಗಳನ್ನು ಹೊಂದಿದೆ. ರಾಜ್ಯ ಬಿಜೆಪಿಯಂತೂ ಕರ್ನಾಟಕದ ನಾಲ್ಕು ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಆರಂಭಗೊಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆಯಷ್ಟೇ ಬೀದರ್ ಹಾಗೂ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರು. ಹೇಗಾದರೂ ಮಾಡಿ ಮತದಾರರನ್ನು ಸೆಳೆದುಕೊಳ್ಳಲೇಬೇಕೆಂದು ಟೊಂಕ ಕಟ್ಟಿ ನಿಂತಿರುವ ಬಿಜೆಪಿ ಹೈಕಮಾಂಡ್ ಮೇಲಿಂದ ಮೇಲೆ ಕರ್ನಾಟಕಕ್ಕೆ ವಿಸಿಟ್ ನೀಡುತ್ತಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಕ್ಕೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮಾರ್ಚ್ 12ರಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಮಂಡ್ಯದ ಗಜ್ಜಲಗೆರೆಯಲ್ಲಿ ಸಮಾವೇಶದಲ್ಲಿ ಭಾಗಿಯಾದರೆ ಕೇಂದ್ರ ಸಚಿವ ಅಮಿತ್ ಶಾ ದಾವಣಗೆರೆಯ ಹೊನ್ನಾಳಿಗೆ ವಿಸಿಟ್ ಕೊಡಲಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿ ಅರಬಗಟ್ಟೆ ಗ್ರಾಮ ವಸತಿ ಶಾಲೆಯ ಮೈದಾನದಲ್ಲಿ 53 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸೌಲಭ್ಯ ವಿತರಣೆ ಇರಲಿದೆ. ಹೀಗಾಗಿ ಈ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.