ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿತ್ತು. ಗುತ್ತಿಗೆದಾರರ ಸಂಘದ ಕೆಂಪಣ್ಣ ಆರೋಪದ ಬಳಿಕ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಎದುರಾಗಿತ್ತು. ಆದರೆ ಈ ಆರೋಪವನ್ನು ಬಿಜೆಪಿ ಸರ್ಕಾರ ನಿರಾಕರಿಸಿತ್ತು. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ಗ ಕೇವಲ ಆರೋಪ ಮಾಡ್ತಿದೆ. ಕಾಂಗ್ರೆಸ್ ಬಳಿ ಯಾವುದಾದರೂ ಸಾಕ್ಷ್ಯಗಳಿದ್ದರೆ ದೂರು ನೀಡಲಿ ಎಂದು ತಿರುಗೇಟು ಕೊಟ್ಟಿತ್ತು. ಇದೀಗ ಬಿಜೆಪಿ ತಿರುಗಿ ಮಾತನಾಡದಂತೆ ಲೋಕಾಯುಕ್ತ ಕೇಸ್ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಹಾಗು ಆತನ ಅಕೌಂಡೆಂಟ್ ಸೇರಿ ಒಟ್ಟು ಐದು ಮಂದಿಯನ್ನು ಲೋಕಾಯುಕ್ತ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ SP ಅಶೋಕ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬರೋಬ್ಬರಿ 2 ಕೋಟಿ 2 ಲಕ್ಷ ರೂಪಾಯಿ ಸೀಜ್ ಆಗಿದೆ.
80 ಲಕ್ಷ ಡೀಲ್ ನಲ್ಲಿ 40 ಲಕ್ಷ ಅಡ್ವಾನ್ಸ್..!
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ ನಿಗಮದ ಅಧ್ಯಕ್ಷರಾಗಿರುವ ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಮಗ ಪ್ರಶಾಂತ್ ವ್ಯವಹಾರ ಕುದುರಿಸಿದ್ದರು. ಮೈಸೂರು ಸ್ಯಾಂಡಲ್ ಸೋಪ್ ಕಂಪನಿಗೆ ರಾಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 80 ಲಕ್ಷ ಲಂಚ ನೀಡುವಂತೆ ತಿಳಿಸಲಾಗಿತ್ತು. ಇದರಲ್ಲಿ 40 ಲಕ್ಷ ಲಂಚ ಪಡೆಯುವಾಗ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಬಂಧನ ಮಾಡಲಾಗಿದೆ. ಕ್ರೆಸೆಂಟ್ ರಸ್ತೆಯ ಪ್ರಶಾಂತ್ ಕಚೇರಿಯಲ್ಲಿ ಬಗೆದಷ್ಟು ದಾಖಲೆಗಳು ಲೋಕಾಯುಕ್ತರಿಗೆ ಸಿಕ್ಕಿದ್ದು, 40 ಲಕ್ಷ ಮಾತ್ರವಲ್ಲದೆ 1 ಕೋಟಿ 62 ಲಕ್ಷ ರೂಪಾಯಿ ಹಣ ಸೇರಿ ಪ್ರಶಾಂತ್ ಮಾಡಾಳು ಕಚೇರಿಯಲ್ಲಿ ಒಟ್ಟು 2 ಕೋಟಿ 02 ಲಕ್ಷ ರುಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಕಚೇರಿ ಅಷ್ಟೇ ಅಲ್ಲದೆ ಶಾಸಕರ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿದೆ.

ಲೋಕಾ ಬಲೆಗೆ ಬಿದ್ದಿದ್ದು BWSSB ಚೀಫ್ ಅಕೌಂಟೆಂಟ್..!!
BWSSBನಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್ ಮಾಡಾಳ್ ಅವರು ಕಚ್ಚಾ ವಸ್ತುಗಳ ಖರೀದಿ ಟೆಂಡರ್‌ಗಾಗಿ KSDL ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಂಜಯನಗರದ KMV ಮ್ಯಾನಷನ್‌ನಲ್ಲಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲೂ ಶೋಧ ಕಾರ್ಯ ನಡೆದಿದೆ. ಲೋಕಾಯುಕಗ್ತ DSP ಸತೀಶ್ ರೆಡ್ಡಿ, ಪ್ರವೀಣ್ ಕುಮಾರ್ ಸೇರಿ 20 ಅಧಿಕಾರಿಗಳ ತಂಡ ಹುಡುಕಾಟ ನಡೆಸಿದೆ. ಟೆಂಡರ್ ಕೊಡಿಸುವ ವಿಚಾರದಲ್ಲಿ ದಾಖಲೆ ಪತ್ರಗಳನ್ನು ಕಲೆ ಹಾಕಲಾಗಿದೆ. ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಲೋಕಾಯುಕ್ತ ಪೊಲೀಸ್ರು ಸಂಗ್ರಹ ಮಾಡಿದ್ದಾರೆ. ಲೋಕಾಯಕ್ತ ಐಜಿಪಿ ಸುಬ್ರಹ್ಮಣ್ಯರಾವ್ ಕೂಡ ದಾಳಿ ವೇಳೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ಗೆ ರಸದೌತಣ ಸಿಕ್ಕಂತಾಗಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಸಾಕ್ಷಿ ಕೇಳಿದ್ರಲ್ಲಾ ಇಷ್ಟು ಸಾಕ್ಷಿ ಸಾಕಾ ಬೇಕಾ..?

ಲೋಕಾಯುಕ್ತ ದಾಳಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಲೋಕಾಯುಕ್ತ ಅಧಿಕಾರಿಗಳು ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇಷ್ಟು ದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳಿದ್ರು. ಈಗ ಲೋಕಾಯುಕ್ತ ಸಂಸ್ಥೆಯವರೇ ಸೂಕ್ತ ಸಾಕ್ಷ್ಯ ಕೊಟ್ಟಿದ್ದಾರೆ. ಈಗ ಯಾರು ರಾಜೀನಾಮೆ ಕೊಡ್ತಾರೆ….? ಸಿಎಂ ರಾಜೀನಾಮೆ ಕೊಡ್ತಾರಾ..? ಅಥವಾ ಸಚಿವರು ರಾಜೀನಾಮೆ ಕೊಡ್ತಾರಾ..? ಅಥವಾ ನಿಗಮ ಮಂಡಳಿ ಅಧ್ಯಕ್ಷರು ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕುಹಕವಾಡಿರುವ ಡಿ.ಕೆ ಶಿವಕುಮಾರ್, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಅಂತಾ ಹೇಳಿದ್ರು. ಮಠದ ಸ್ವಾಮೀಜಿಗಳು 30 ಪರ್ಸೆಂಟ್ ಅಂದಿದ್ರು. ಹೆಚ್. ವಿಶ್ವನಾಥ್ 20 ಪರ್ಸೆಂಟ್, ಯತ್ನಾಳ್ ಸಿಎಂ ಕುರ್ಚಿಗೆ 2500 ಕೋಟಿ ಅಂತಿದ್ರು. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ್ರು. ಇಷ್ಟಾದ್ರೂ ಬಿಜೆಪಿ ಸರ್ಕಾರ ಸಾಕ್ಷಿ ಕೇಳುತ್ತೆ. ಮುಖ್ಯಮಂತ್ರಿ ರಾಜೀನಾಮೆ ಕೊಟ್ಟರೆ ಆ ಸ್ಥಾನಕ್ಕೆ ಗೌರವ ಎಂದಿದ್ದಾರೆ. ಲೋಕಾಯುಕ್ತ ದಾಳಿ ಕಾಂಗ್ರೆಸ್ ಪಕ್ಷಕ್ಕೆ ಹಾಲು ಅನ್ನ ಉಂಡಂಗೆ ಆಗಿದೆ.