‘ಬಳ್ಳಾರಿ ಅಂಧತ್ವ ಮುಕ್ತ ಜಿಲ್ಲೆ’ ಅಭಿಯಾನಕ್ಕೆ ಉತ್ತಮ ಸ್ಪಂದನೆ
ಬೆಂಗಳೂರು: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ(Cataract surgery) ಕೇಂದ್ರ ಸರ್ಕಾರ(Central Government) ನೀಡಿದ್ದ ಗುರಿಯನ್ನು ಮೀರಿ ಶೇ.126 ರಷ್ಟು ಸಾಧನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಜೊತೆಗೆ, ಮಧುಮೇಹದಿಂದ ಬಳಲುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ(Government Hospital) ಗ್ರೀನ್ ಲೇಸರ್ ಚಿಕಿತ್ಸೆ(Green laser treatment) ಆರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(Dr.K.Sudhakar) ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಸಕ್ತ ವರ್ಷ 3,39,600 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಗುರಿ ನೀಡಿತ್ತು. ಈಗಾಗಲೇ 4,28,451 ಶಸ್ತ್ರಚಿಕಿತ್ಸೆ ಮಾಡಿ ಒಟ್ಟಾರೆ ಶೇ.126 ರಷ್ಟು ಸಾಧನೆ ಮಾಡಲಾಗಿದೆ. ಎನ್.ಜಿ.ಒ, ವೈದ್ಯಕೀಯ ಕಾಲೇಜುಗಳು, ಇತರೆ ವಲಯಗಳಲ್ಲಿಯೂ ಉತ್ತಮ ಸಾಧನೆಯಾಗಿದೆ. ರಾಜ್ಯದಲ್ಲಿ ಅಂಧತ್ವ ನಿವಾರಣೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಸಚಿವರು ವಿವರಿಸಿದ್ದಾರೆ.
ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕರು ಡಯಾಬಿಟಿಕ್ ರೆಟಿನೋಪತಿ ಸಮಸ್ಯೆಗೆ ಒಳಗಾಗುತ್ತಿದ್ದು, ಇದಕ್ಕಾಗಿ ಅತ್ಯಾಧುನಿಕ ಗ್ರೀನ್ ಲೇಸರ್ ಚಿಕಿತ್ಸೆ ಪರಿಚಯಿಸಲಾಗಿದೆ. ವಿಜಯಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರು ವಿಶೇಷ ಪರಿಣತಿ ಪಡೆದು ಇಂತಹ ವಿನೂತನ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬೇರೆ ಆಸ್ಪತ್ರೆಗಳಿಗೆ ವಿಸ್ತರಿಸಲು ಕ್ರಮ
ಮಧುಮೇಹದಿಂದ ರೆಟಿನೋಪತಿ ಸಮಸ್ಯೆಗೆ ಒಳಗಾದರೆ ಕ್ರಮೇಣ ದೃಷ್ಟಿಗೆ ಹಾನಿಯಾಗುವ ಸಂಭವ ಇರುತ್ತದೆ. ಇದನ್ನು ಪತ್ತೆ ಮಾಡಿ ಅಗತ್ಯ ಕಂಡುಬಂದಲ್ಲಿ ಗ್ರೀನ್ ಲೇಸರ್ ಚಿಕಿತ್ಸೆ ನೀಡಿ ಸಮಸ್ಯೆ ಪರಿಹರಿಸಬಹುದಾಗಿದೆ. ಡಯಾಬಿಟಿಕ್ ರೆಟಿನೋಪತಿಗೆ ಒಳಗಾದವರಿಗೆ ಎಷ್ಟು ಬೆಳಕಿದ್ದರೂ ಕಾಣುವುದಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಒಂದು ತಿಂಗಳಿಂದ 40 ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆಯನ್ನು ಇತರೆ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ರೋಗಿಗಳನ್ನು ಪರಿಶೀಲನೆ ಮಾಡಿ ಚಿಕಿತ್ಸೆ ಅಗತ್ಯವಿರುವವರನ್ನು ಜಿಲ್ಲಾ ಹಂತಕ್ಕೆ ರೆಫರ್ ಮಾಡಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, “ಬಳ್ಳಾರಿ ಅಂಧತ್ವ ಮುಕ್ತ ಜಿಲ್ಲೆ” ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕುಗಳಲ್ಲಿ ವಿಶೇಷ ಸಂಚಾರಿ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಿಬಿರದಲ್ಲಿ ಸರಾಸರಿ 22 ಮಂದಿಗೆ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.