ನವದೆಹಲಿ : 2024ರ ಲೋಕಸಭೆ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಪರ್ಯಾಯ ಮೈತ್ರಿಕೂಟವನ್ನು ರಚಿಸಲು ಪಕ್ಷ ಎದುರು ನೋಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಕಾಂಗ್ರೆಸ್ ನ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಚೀನಾ ಗಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ. ಹಣದುಬ್ಬರ ಸಾರ್ವಕಾಲಿಕ ಉತ್ತುಂಗಕ್ಕೆ ಏರಿದ್ದು, ನಿರುದ್ಯೋಗ ದಾಖಲೆ ಮಟ್ಟಕ್ಕೆ ಜಿಗಿದಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕಾಂಗ್ರೆಸ್ ಮಾತ್ರ ದೇಶಕ್ಕೆ ಸಮರ್ಥ ಮತ್ತು ನಿರ್ಣಾಯಕ ನಾಯಕತ್ವ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಕುಳಿತಿರುವವರ ಡಿಎನ್’ಎ ಬಡವರ ವಿರೋಧಿ. ಏಕೆಂದರೆ ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿ, ತಮ್ಮನ್ನು “ಪ್ರಧಾನ ಸೇವಕ” ಎಂದು ಕರೆದುಕೊಳ್ಳುವವರು ತಮ್ಮ “ಸ್ನೇಹಿತರ” ಹಿತಾಸಕ್ತಿಗಳನ್ನು ಪೂರೈಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದಲ್ಲಿ “ಪ್ರಜಾಪ್ರಭುತ್ವವನ್ನು ನಾಶಮಾಡುವ ಪಿತೂರಿ” ನಡೆಯುತ್ತಿದೆ, ಆದರೆ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ವಿರುದ್ಧ ಜನಾಂದೋಲನಕ್ಕೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.

