ಶಿವಮೊಗ್ಗ: ಜಲಮಿಷನ್ ಯೋಜನೆ ಸಾವಿರಾರು ಕೋಟಿ ಯೋಜನೆಯಾಗಿದ್ದು, ಹಲವು ಕ್ಷೇತ್ರಗಳಲ್ಲಿ ಕಲ್ಲುಗಳನ್ನು ನೆಟ್ಟು ಪೈಪ್ ಹಾಕಿದ್ದಾರೆ. ಆದರೆ ಇದುವರೆಗೆ ನೀರು ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಜಲಮಿಷನ್ ಯೋಜನೆ ಹೆಸರಿನಲ್ಲಿ ಪೈಪ್ ಅಳವಡಿಕೆಗೆ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ಆದರೆ ನೀರಿನ ಸಂಪರ್ಕ ನೀಡಲು ಸೋತಿದ್ದಾರೆ ಎಂದರು.
ಸ್ಚಚ್ಛ ಭಾರತ್ ಮಿಷನ್ ಯೋಜನೆ ಎನ್ನುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಯಲು ಶೌಚದಿಂದ ಮಹಿಳೆ ಮನನೊಂದು ಹೋಗಿದ್ದಾರೆ. ತಲೆಗೊಂದು ಮುಂಡಾಸು ಮನೆಗೊಂದು ಸಂಡಾಸು ಘೋಷಣೆಯಾಗಿಯೇ ಉಳಿದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಒಂದು ರಥಯಾತ್ರೆಯಲ್ಲಿ ದಿನಕ್ಕೆ ಒಂದು ವಿಧಾನಸಭಾ ಕ್ಷೇತ್ರ ಹಾಗೂ 40 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ. ಹಳ್ಳಿಗಳ ಪರಿಸ್ಥಿತಿ ತಿಳಿಯಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.
ಪಂಚರತ್ನ ಯಾತ್ರೆ ಬಗ್ಗೆ ಬಿಜೆಪಿ, ಕಾಂಗ್ರೆಸ್’ನವರು ಲೇವಡಿ ಮಾತನಾಡಿದ್ದಾರೆ. ಪಂಚರತ್ನ ಯೋಜನೆಗಳನ್ನು ಯಾವ ಕಾರಣಕ್ಕೆ ಅನುಷ್ಟಾನ ಮಾಡಬೇಕು ಎಂದು ಚಿಂತನೆ ಮಾಡಿದ್ದೇನೆ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಗೊತ್ತಿಲ್ಲ ಎಂದು ಹರಿಹಾಯ್ದರು.
ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿ ದಿನ 500 ಜನ ನನ್ನ ಬಳಿ ಬರುತ್ತಾರೆ. ಬರುವವರೆಲ್ಲರೂ ಬಡವರೆ ಅವರಿಗೆ ನಾನು ಎಲ್ಲಿಂದ ದುಡ್ಡು ತರಲಿ. 45 ಎಕರೆ ಜಮೀನು ಇಟ್ಟುಕೊಂಡಿದ್ದೇನೆ. ಆ ಜಮೀನು ತಕರಾರಲ್ಲಿದೆ. ಸಿಎಂ ಆಗಿಯೂ ಆ ತಕರಾರು ಸರಿಪಡಿಸಿಕೊಳ್ಳಲು ನನ್ನಿಂದ ಆಗಲಿಲ್ಲ. 5.65 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದೇನೆ. ಪ್ರತಿ ವರ್ಷ 38 ಸಾವಿರ ಕೋಟಿ ರೂಪಾಯಿ ಬಡ್ಡಿ ಕಟ್ಟಬೇಕಿದೆ. ಈ ಕ್ರೆಡಿಟ್ ರಾಷ್ಟ್ರೀಯ ಪಕ್ಷಗಳಿಗೆ ಸಲ್ಲುತ್ತದೆ ಎಂದು ಹರಿಹಾಯ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೈತರ ಸಾಲ ಮನ್ನ ಮಾಡಬಾರದು. ಸಾಲಮನ್ನ ಮಾಡಿದರೆ ಆರ್ಥಿಕತೆ ಅಲ್ಲೋಲ ಕಲ್ಲೋಲ ಆಗುತ್ತದೆ ಎನ್ನುತ್ತಾನೆ. ಆದರೆ ನಿನ್ನೆ ಬಂದು ಮಂಡ್ಯದಲ್ಲಿ ರೈತರೊಂದಿಗೆ ಸಂವಾದ ಮಾಡುತ್ತಾನೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.